ಅಕ್ರಮ ನೇಮಕಾತಿ: ನಿವೃತ್ತ ಎಸ್ಪಿ ಭಗವಾನ್‌ದಾಸ್‌ ವಿರುದ್ಧ ಪ್ರಕರಣ ದಾಖಲು

7

ಅಕ್ರಮ ನೇಮಕಾತಿ: ನಿವೃತ್ತ ಎಸ್ಪಿ ಭಗವಾನ್‌ದಾಸ್‌ ವಿರುದ್ಧ ಪ್ರಕರಣ ದಾಖಲು

Published:
Updated:
Deccan Herald

ಕೋಲಾರ: ಪೊಲೀಸ್‌ ಇಲಾಖೆಯ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂಬಂಧಿಕರಿಗೆ ನೆರವಾದ ಆರೋಪದ ಮೇಲೆ ನಿವೃತ್ತ ಐಪಿಎಸ್‌ ಅಧಿಕಾರಿ ಎಚ್‌.ಆರ್‌.ಭಗವಾನ್‌ದಾಸ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಪ್ರಕರಣ ದಾಖಲಾಗಿದೆ.

ಭಗವಾನ್‌ದಾಸ್‌ ಅವರು ಜಿಲ್ಲೆಯ ಕೆಜಿಎಫ್‌ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ 2016ರ ಜುಲೈನಲ್ಲಿ ಇಲಾಖೆಯ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಅಕ್ರಮವಾಗಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಿದ್ದರು.

ಈ ಸಂಬಂಧ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ‘ಭಗವಾನ್‌ದಾಸ್‌ ಅವರು ನಡೆಸಿರುವ ನೇಮಕಾತಿ ಪ್ರಕ್ರಿಯೆಯೇ ಕಾನೂನುಬಾಹಿರ. ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ಅವರ ವಿರುದ್ಧ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸಬೇಕು’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿರಾಜು ಅವರಿಗೆ ನೀಡಿದ್ದ ವರದಿಯಲ್ಲಿ ಶಿಫಾರಸು ಮಾಡಿದ್ದರು.

‘ಹುದ್ದೆಗಳ ಭರ್ತಿಗೆ ಭಗವಾನ್‌ದಾಸ್‌ ಅವರು ಸರ್ಕಾರ ಮತ್ತು ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿಯನ್ನೇ ಪಡೆದಿರಲಿಲ್ಲ. ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮತ್ತು ನೇಮಕಾತಿ ನಿಯಮಾವಳಿ ಉಲ್ಲಂಘಿಸಿ ಅಕ್ರಮ ಎಸಗಿದ್ದಾರೆ. ಮುಂಬಡ್ತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡದೆ ನಿಯಮಬಾಹಿರವಾಗಿ ನೇರ ನೇಮಕಾತಿ ನಡೆಸಿದ್ದಾರೆ’ ಎಂದು ಸಿಐಡಿ ವರದಿಯಲ್ಲಿ ಹೇಳಲಾಗಿದೆ.

ಪರೀಕ್ಷೆಯನ್ನೇ ನಡೆಸಿಲ್ಲ: ‘ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ (ಎಸ್‌ಡಿಸಿ) ನೇಮಕಾತಿ ನಡೆಸಲು ಇಲಾಖೆಗೆ ಅವಕಾಶವೇ ಇಲ್ಲ. ಕೆಪಿಎಸ್‌ಸಿ ಮೂಲಕವಷ್ಟೇ ಈ ಹುದ್ದೆಯ ನೇಮಕಾತಿ ಆಗಬೇಕು. ಸಿಬ್ಬಂದಿಯ ನೇಮಕಾತಿಗೆ ಸಾಮಾನ್ಯ ಪರೀಕ್ಷೆಯನ್ನೇ ನಡೆಸಿಲ್ಲ. ನೇಮಕಾತಿ ಅಕ್ರಮದಲ್ಲಿ ಆಗಿನ ಡಿವೈಎಸ್ಪಿ, ಡಿಎಆರ್‌ ಇನ್‌ಸ್ಪೆಕ್ಟರ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಹ ಭಾಗಿಯಾಗಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಆಧರಿಸಿ ಎಸಿಬಿ ಅಧಿಕಾರಿಗಳು ಭಗವಾನ್‌ದಾಸ್‌ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಸಮಿತಿ ಸದಸ್ಯರ ಹೇಳಿಕೆ: ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ಸಮಿತಿ ಸದಸ್ಯರಾಗಿದ್ದ ಕೆಜಿಎಫ್ ಎಸ್ಪಿ ಕಚೇರಿ ಸಹಾಯಕ ಆಡಳಿತಾಧಿಕಾರಿ ವಿಶ್ವನಾಥ್‌, ‘ನನ್ನನ್ನು ಸಮಿತಿಯ ಸದಸ್ಯನಾಗಿ ನೇಮಿಸಿದ್ದ ಸಂಗತಿಯೇ ಗೊತ್ತಿರಲಿಲ್ಲ. ಅಲ್ಲದೇ, ಸಮಿತಿಯ ಸಭೆಗಳಿಗೂ ಹಾಜರಾಗಿರಲಿಲ್ಲ. ಸಭೆಯ ಹಾಜರಾತಿ ಮತ್ತು ನಡಾವಳಿ ಪುಸ್ತಕದಲ್ಲೂ ಸಹಿ ಮಾಡಿರಲಿಲ್ಲ. ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ವಿಷಯವೇ ತಿಳಿದಿರಲಿಲ್ಲ’ ಎಂದು ತನಿಖೆ ವೇಳೆ ಸಿಐಡಿ ಅಧಿಕಾರಿಗಳಿಗೆ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಹಾಗೂ ಹುದ್ದೆ ಆಕಾಂಕ್ಷಿಗಳ ದೂರಿನ ಅನ್ವಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿದ್ದರು.
**
ವಜಾಗೊಂಡವರು– ಕಾರ್ಯ ಸ್ಥಳ ಮತ್ತು ಹುದ್ದೆ
ಮಲ್ಲಿಕಾರ್ಜುನ್‌– ಕೆಜಿಎಫ್‌ ಪೊಲೀಸ್‌ ಜಿಲ್ಲಾ ಸಶಸ್ತ್ರ ಮೀಸಲು ಪಡೆ– ಕಾನ್‌ಸ್ಟೆಬಲ್‌
ಬಿ.ಎನ್‌.ನಾಗರಾಜ್‌– ಕೆಜಿಎಫ್‌ ಪೊಲೀಸ್‌ ಜಿಲ್ಲಾ ಸಶಸ್ತ್ರ ಮೀಸಲು ಪಡೆ– ಕಾನ್‌ಸ್ಟೆಬಲ್‌
ಕೆ.ಎಸ್‌.ರೂಪಾ– ಜಿಲ್ಲಾ ಎಸ್ಪಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ
ಜಿ.ಎಸ್‌.ನೇತ್ರಾವತಿ– ಬೆಮಲ್‌ ಠಾಣೆ ಮಹಿಳಾ ಕಾನ್‌ಸ್ಟೆಬಲ್‌
ಬಿ.ಎನ್‌.ಕಲ್ಪನಾ– ಊರಿಗಾಂ ಠಾಣೆ ಮಹಿಳಾ ಕಾನ್‌ಸ್ಟೆಬಲ್‌
ಕೆ.ಲೋಹಿತ್‌ಕುಮಾರ್‌– ಮಾರಿಕುಪ್ಪಂ ಠಾಣೆ ಕಾನ್‌ಸ್ಟೆಬಲ್‌

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !