ಅಪಘಾತವೆಸಗಿ ಪರಾರಿಯಾಗುತ್ತಿದ್ದ ಹಡಗು ವಶ

7
ನವ ಮಂಗಳೂರು ಬಂದರಿನಲ್ಲಿ ತನಿಖೆಗಾಗಿ ಲಂಗರು

ಅಪಘಾತವೆಸಗಿ ಪರಾರಿಯಾಗುತ್ತಿದ್ದ ಹಡಗು ವಶ

Published:
Updated:

ಮಂಗಳೂರು: ಕೊಚ್ಚಿಯ ಸಮುದ್ರದ ಮಧ್ಯದಲ್ಲಿ ಮಂಗಳವಾರ ರಾತ್ರಿ ಮೀನುಗಾರಿಕಾ ದೋಣಿಗೆ ಡಿಕ್ಕಿ ಹೊಡೆದು ಹಲವರ ಸಾವಿಗೆ ಕಾರಣವಾದ ಬಳಿಕ ಪರಾರಿಯಾಗುತ್ತಿದ್ದ ಎಂವಿ ದೇಶಶಕ್ತಿ ಎಂಬ ಕಚ್ಚಾ ತೈಲ ಸಾಗಣೆ ಹಡಗನ್ನು ಮರ್ಕಂಟೈಲ್‌ ಮರೈನ್‌ ಇಲಾಖೆ (ಎಂಎಂಡಿ) ಅಧಿಕಾರಿಗಳು ಕೋಸ್ಟ್‌ ಗಾರ್ಡ್‌ ನೆರವಿನಲ್ಲಿ ಸೆರೆಹಿಡಿದಿದ್ದು, ನವ ಮಂಗಳೂರು ಬಂದರಿಗೆ ತರಲಾಗಿದೆ.

ಕೇಂದ್ರ ಸರ್ಕಾರದ ಅಧೀನದ ಕಂಟೇನರ್ ಕಾರ್ಪೋರೇಷನ್‌ (ಸಿಸಿಐ) ಒಡೆತನದ ದೇಶಶಕ್ತಿ ಹಡಗು ಚೆನ್ನೈನಿಂದ ಇರಾಕ್‌ಗೆ ತೆರಳುತ್ತಿದ್ದಾಗ ತ್ರಿಶೂರ್‌ನಿಂದ 27 ನಾಟಿಕಲ್ ಮೈಲು ದೂರದಲ್ಲಿ ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ. ಮುನಾಂಬಮ್‌ನ ಸಾಂಬಶಿವಂ ಎಂಬುವವರ ಒಡೆತನದ ಓಶಿಯಾನಿಕಾ ಎಂಬ ಮೀನುಗಾರಿಕಾ ದೋಣಿಗೆ ಹಡಗು ಡಿಕ್ಕಿಯಾಗಿತ್ತು. ದೋಣಿಯಲ್ಲಿದ್ದ 14 ಮಂದಿ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಛಿದ್ರಗೊಂಡಿದ್ದ ದೋಣಿಯ ಹಲಗೆಗಳನ್ನು ಹಿಡಿದು ತೇಲುತ್ತಿದ್ದ ಇಬ್ಬರು ಮೀನುಗಾರರನ್ನು ಇತರೆ ಮೀನುಗಾರರು ರಕ್ಷಣೆ ಮಾಡಿದ್ದರು.

ಅಪಘಾತದ ಬಳಿಕ ಮೀನುಗಾರಿಕಾ ದೋಣಿಯಲ್ಲಿದ್ದವರ ರಕ್ಷಣೆಗೆ ಪ್ರಯತ್ನಿಸದೇ ಹಡಗಿನೊಂದಿಗೆ ಅದರ ಸಿಬ್ಬಂದಿ ಪರಾರಿಯಾಗುತ್ತಿದ್ದರು. ಅಪಘಾತದ ಮಾಹಿತಿ ಪಡೆದ ಎಂಎಂಡಿ ಅಧಿಕಾರಿಗಳು, ಕೋಸ್ಟ್‌ ಗಾರ್ಡ್‌ ನೆರವಿನಲ್ಲಿ ದೇಶಶಕ್ತಿ ಹಡಗನ್ನು ವಶಕ್ಕೆ ಪಡೆದಿದ್ದರು. ಬುಧವಾರ ಅದನ್ನು ನವ ಮಂಗಳೂರು ಬಂದರಿಗೆ (ಎನ್‌ಎಂಪಿಟಿ) ತರಲಾಗಿತ್ತು. ಹಡಗನ್ನು ತನಿಖೆಗಾಗಿ ಎನ್‌ಎಂಪಿಟಿಯ ಹತನ್ನೇ ಬರ್ತ್‌ನಲ್ಲಿ ಲಂಗರು ಹಾಕಿ ನಿಲ್ಲಿಸಿರುವುದನ್ನು ಬಂದರು ಮೂಲಗಳು ಖಚಿತಪಡಿಸಿವೆ.

ಎಂಎಂಡಿ ಅಧಿಕಾರಿ ವಿ.ವಿ.ಪಾವುಲ್‌ ನೇತೃತ್ವದ ತಂಡ ಗುರುವಾರದಿಂದ ತನಿಖೆ ಆರಂಭಿಸಿದೆ. ಹಡಗಿನ ಕ್ಯಾಪ್ಟನ್‌, ಡೆಕ್‌ ಉಸ್ತುವಾರಿ, ಉಸ್ತುವಾರಿ ಎಂಜಿನಿಯರ್‌ ಸೇರಿದಂತೆ ಪ್ರಮುಖ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಮುಗಿದ ಬಳಿಕ ಅಪಘಾತದ ಕುರಿತು ಖಚಿತಪಡಿಸಿಕೊಳ್ಳಲು ಹಡಗಿನ ಬಾಹ್ಯ ಪರಿಶೀಲನೆ ನಡೆಸಲಾಗುವುದು ಎಂದು ತನಿಖಾ ತಂಡ ಮೂಲಗಳು ತಿಳಿಸಿವೆ.

ಪ್ರಕರಣ ದಾಖಲು: ಅಪಘಾತಕ್ಕೆ ಸಂಬಂಧಿಸಿದಂತೆ ಕೇರಳ ಕರಾವಳಿ ಕಾವಲುಪಡೆ ಪೊಲೀಸರು ನಿರ್ಲಕ್ಷದಿಂದ ಸಾವಿಗೆ ಕಾರಣವಾಗಿರುವುದು ಮತ್ತು ಅಪರಿಚಿತ ನೌಕೆಯತ್ತ ಅತಿವೇಗದಿಂದ ಮುನ್ನುಗ್ಗಿ ಅಪಘಾತಕ್ಕೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅವಘಡದಲ್ಲಿ ಬದುಕುಳಿದಿರುವ ಎಡ್ವಿನ್ ಮತ್ತು ನಾರಾಯಣ್ ಸರ್ಕಾರ್ ಎಂಬ ಮೀನುಗಾರರು ಎರ್ನಾಕುಲಂ ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರೂ ಪೊಲೀಸರಿಗೆ ಹೇಳಿಕೆ ನೀಡಿದ್ದು, ಅಪಘಾತದಿಂದ ಸಮುದ್ರಕ್ಕೆ ಬಿದ್ದವರ ರಕ್ಷಣೆಗೆ ಹಡಗಿನ ಸಿಬ್ಬಂದಿ ಯಾವುದೇ ಪ್ರಯತ್ನ ನಡೆಸಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಎಂವಿ ದೇಶಸಕ್ತಿ ಸಿಸಿಐ ದೇಶದ ಅತಿದೊಡ್ಡ ತೈಲ ಸಾಗಣೆ ಹಡಗುಗಳಲ್ಲಿ ಒಂದು. 274 ಮೀಟರ್‌ ಉದ್ದ ಮತ್ತು 48 ಮೀಟರ್‌ ಅಗಲವಿರುವ ಈ ನೌಕೆ, 84,261 ಟನ್‌ ತೈಲ ಸಾಗಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚಾಗಿ ಪಶ್ಚಿಮ ಏಷ್ಯಾ ದೇಶಗಳಿಂದ ಭಾರತಕ್ಕೆ ತೈಲ ತರಲು ಈ ಹಡಗನ್ನು ಬಳಸಲಾಗುತ್ತಿದೆ. ಆಗಸ್ಟ್‌ 3ರಂದು ನೌಕೆ ಚೆನ್ನೈನಿಂದ ಇರಾಕ್‌ನತ್ತ ಹೊರಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !