ಸ್ವಾತಂತ್ರ್ಯ ಹೋರಾಟಗಾರರನ್ನು ಟೀಕಿಸುವವರು ದೇಶದ್ರೋಹಿಗಳು: ಬಿ.ರಮಾನಾಥ ರೈ

7

ಸ್ವಾತಂತ್ರ್ಯ ಹೋರಾಟಗಾರರನ್ನು ಟೀಕಿಸುವವರು ದೇಶದ್ರೋಹಿಗಳು: ಬಿ.ರಮಾನಾಥ ರೈ

Published:
Updated:

ಮಂಗಳೂರು: ‘ಕೆಲವರು ಹೇಳುವ ಸುಳ್ಳುಗಳನ್ನು ನಂಬಿಕೊಂಡು ಸ್ವಾತಂತ್ರ್ಯ ಹೋರಾಟಗಾರರನ್ನು ಟೀಕಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಟೀಕಿಸುವುದು ದೇಶದ್ರೋಹದ ಕೆಲಸ’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಕ್ವಿಟ್‌ ಇಂಡಿಯಾ ಚಳವಳಿ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಜಾಥಾ ಮತ್ತು ನಂತರ ನಗರದ ಪುರಭವನದಲ್ಲಿ ನಡೆದ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೊಸ ತಲೆಮಾರಿನ ಜನರಲ್ಲಿ ತಪ್ಪುಗ್ರಹಿಕೆ ಬಿತ್ತುವುದನ್ನು ತಡೆಯಲು ಇತಿಹಾಸದ ಕುರಿತು ತಿಳಿಹೇಳುವ ಅಗತ್ಯವಿದೆ’ ಎಂದರು.

ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿರುವ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟದ ಮಹಾನ್ ನೇತಾರರನ್ನೂ ಟೀಕಿಸುತ್ತಿದ್ದಾರೆ. ಮಹಾತ್ಮ ಗಾಂಧಿಯವರ ತ್ಯಾಗವನ್ನೇ ಅಣಕಿಸುತ್ತಿದ್ದಾರೆ. ಜವಾಹರ ಲಾಲ್ ನೆಹರೂ 14 ವರ್ಷಗಳ ಕಾಲ ಜೈಲುವಾಸ ಅನುಭವಿಸಿರುವುದನ್ನು ಮುಚ್ಚಿಟ್ಟು ಟೀಕಿಸುತ್ತಿದ್ದಾರೆ. ಇತಿಹಾಸವನ್ನು ತಿರುಚಿ ಪ್ರಚಾರ ಮಾಡುತ್ತಿರುವ ದೇಶದ್ರೋಹಿಗಳಿಂದಾಗಿ ಹೊಸ ತಲೆಮಾರಿನ ಜನರಿಗೆ ಸ್ವಾತಂತ್ರ್ಯ ಹೋರಾಟದ ಸರಿಯಾದ ಪರಿಚಯ ಆಗುತ್ತಿಲ್ಲ ಎಂದು ಹೇಳಿದರು.

ಹೋರಾಟ, ತ್ಯಾಗ ಮತ್ತು ಬಲಿದಾನಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಅದನ್ನು ಉಳಿಸಿಕೊಳ್ಳುವುದು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಮೇಲಿರುವ ಹೊಣೆಗಾರಿಕೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗುವ ಸಂದರ್ಭಗಳಲ್ಲಿ ಗಟ್ಟಿ ದನಿಯಲ್ಲಿ ಪ್ರಶ್ನೆ ಮಾಡಬೇಕಾದ ಅಗತ್ಯವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್‌ಕುಮಾರ್, ‘ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶವನ್ನು ಸ್ವತಂತ್ರಗೊಳಿಸಲು ನಡೆದ ಹೋರಾಟದ ಹಾದಿಯನ್ನು ನೆನಪಿನಲ್ಲಿ ಉಳಿಸುವುದು ಮುಖ್ಯ’ ಎಂದು ಹೇಳಿದರು.

ಕ್ವಿಟ್‌ ಇಂಡಿಯಾ ಚಳವಳಿ ಕುರಿತು ವಿಶೇಷ ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾಲಯದ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಶಿವರಾಮ ಶೆಟ್ಟಿ, ‘ನಾವು ಇತ್ತೀಚಿನ ದಿನಗಳಲ್ಲಿ ನಮ್ಮ ಐತಿಹಾಸಿಕ ನಡಿಗೆಗಳನ್ನೇ ಮರೆಯುತ್ತಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟದ ಕಥನವನ್ನು ಎಂದೂ ಮರೆಯದಂತೆ ಜತನದಿಂದ ಕಾಪಾಡಿಕೊಳ್ಳಬೇಕಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಭಾಸ್ಕರ್ ಕೆ., ಮಾಜಿ ಶಾಸಕರಾದ ಕೆ.ಅಭಯಚಂದ್ರ, ಜೆ.ಆರ್.ಲೋಬೊ, ಐವನ್ ಡಿಸೋಜ, ಜಿಲ್ಲಾ ವಕ್ಫ್‌ ಮಂಡಳಿ ಅಧ್ಯಕ್ಷ ಯು.ಕಣಚೂರು ಮೋನು, ಮುಖಂಡರಾದ ಬಿ.ಇಬ್ರಾಹಿಂ, ಕೋಡಿಜಾಲ್ ಇಬ್ರಾಹಿಂ, ಬಿ.ಎಚ್.ಖಾದರ್, ಶಶಿಧರ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್‌ ರೈ ಉಪಸ್ಥಿತರಿದ್ದರು.

ಕಾಲ್ನಡಿಗೆ ಜಾಥಾ: ಸಮಾರಂಭಕ್ಕೂ ಮುನ್ನ ಬಾವುಟಗುಡ್ಡೆಯ ರವೀಂದ್ರನಾಥ ಟ್ಯಾಗೋರ್ ಉದ್ಯಾನದಿಂದ ಪುರಭವನದವರೆಗೆ ಕ್ವಿಟ್‌ ಇಂಡಿಯಾ ಚಳವಳಿಯ ಸ್ಮರಣಾರ್ಥ ಕಾಲ್ನಡಿಗೆ ಜಾಥಾ ನಡೆಯಿತು. ನೂರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !