ದಲಿತ ಕುಟುಂಬಗಳಿಗೆ ಭೂಮಿ ನೀಡಲು ಒತ್ತಾಯ

7
ತಾಲ್ಲೂಕು ಕಚೇರಿ ಎದುರು ಬಹುಜನ ಸಂಘದ ಸದಸ್ಯರ ಧರಣಿ

ದಲಿತ ಕುಟುಂಬಗಳಿಗೆ ಭೂಮಿ ನೀಡಲು ಒತ್ತಾಯ

Published:
Updated:
Deccan Herald

ಕೋಲಾರ: ಭೂರಹಿತ ದಲಿತ ಕುಟುಂಬಗಳಿಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಬಹುಜನ ಸಂಘದ ಸದಸ್ಯರು ಇಲ್ಲಿ ಶುಕ್ರವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

‘ಜಿಲ್ಲೆಯಲ್ಲಿ ಸಾಕಷ್ಟು ದಲಿತ ಕುಟುಂಬಗಳಿಗೆ ಜಮೀನು ಹಾಗೂ ವಾಸದ ಮನೆಯಿಲ್ಲ. ಈ ಕುಟುಂಬಗಳ ಸದಸ್ಯರು ಬಡತನದಿಂದ ತತ್ತರಿಸಿದ್ದು, ಜೀವನ ನಿರ್ವಹಣೆಗೂ ಸಮಸ್ಯೆಯಾಗಿದೆ. ಸರ್ಕಾರಕ್ಕೆ ದಲಿತರ ಕಷ್ಟದ ಅರಿವಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಹಾಗೂ ಗೋಮಾಳದ ಜಾಗವನ್ನು ಭೂಗಳ್ಳರು ಕಬಳಿಸುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ಸಂಗತಿ ಗೊತ್ತಿದ್ದರೂ ಸರ್ಕಾರಿ ಜಮೀನಿನ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ದಲಿತರು ಸರ್ಕಾರಿ ಜಾಗದಲ್ಲಿ ವಾಸಕ್ಕೆ ಸಣ್ಣ ಗುಡಿಸಲು ನಿರ್ಮಿಸಿಕೊಂಡರೂ ಅಧಿಕಾರಿಗಳು ಖಾಲಿ ಮಾಡಿಸುತ್ತಾರೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್‌ ದೂರಿದರು.

‘ಸರ್ಕಾರಿ ಜಮೀನು ಹಾಗೂ ಗೋಮಾಳ ಗುರುತಿಸಿ ಭೂರಹಿತ ದಲಿತರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಹಲವು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ಸರ್ಕಾರ ದಲಿತರ ಬೇಡಿಕೆಗೆ ಸ್ಪಂದಿಸಿಲ್ಲ. ಸರ್ಕಾರಕ್ಕೆ ದಲಿತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ಲಕ್ಷಿಸಿವೆ: ‘ದಲಿತರಿಗೆ ನಿವೇಶನ, ವಸತಿ ಸೌಕರ್ಯವಿಲ್ಲದೆ ಬೀದಿ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಲಂಚದಾಸೆಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ನಿರ್ಲಕ್ಷಿಸಿವೆ’ ಎಂದು ಧರಣಿನಿರತರು ಆರೋಪಿಸಿದರು.

‘ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸಿ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು. ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಭೂ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜಮೀನನ್ನು ನಿವೇಶನರಹಿತ ದಲಿತ ಕುಟುಂಬಗಳ ವಸತಿ ಸೌಕರ್ಯಕ್ಕೆ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ರಾಮಮೂರ್ತಿ, ಸಂಚಾಲಕಿ ಮಹಾಲಕ್ಷ್ಮಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜು, ಸದಸ್ಯರಾದ ದೇವರಾಜ್, ಮಂಜುನಾಥ್, ಬಾಲರಾಜ್, ರಾಘವೇಂದ್ರ, ಜಗದೀಶ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !