ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ: ನವನಗರ ಉದ್ವಿಗ್ನ

7

ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ: ನವನಗರ ಉದ್ವಿಗ್ನ

Published:
Updated:
Deccan Herald

ಬಾಗಲಕೋಟೆ: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿ ಆಕೆಯ ಸಂಬಂಧಿಕರೊಂದಿಗೆ ಸೇರಿ ಇಲ್ಲಿನ ವಾಂಬೆ ಕಾಲೊನಿ ನಿವಾಸಿಗಳು, ನವನಗರ ಪೊಲೀಸ್ ಠಾಣೆಯ ಎದುರು ಶನಿವಾರ ನಡೆಸಿದ ಪ್ರತಿಭಟನೆ ಗಲಾಟೆಗೆ ತಿರುಗಿತು. ಈ ವೇಳೆ ಕಿಡಿಗೇಡಿಗಳು ಸಾರಿಗೆ ಸಂಸ್ಥೆ ಬಸ್ ಹಾಗೂ ಖಾಸಗಿ ಶಾಲೆಯ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಪರಿಸ್ಥಿತಿ ತಹಬದಿಗೆ ತಂದರು. 

ಘಟನೆಯ ವಿವರ: ವಾಂಬೆ ಕಾಲೊನಿಯ 12 ವರ್ಷದ ಬಾಲಕಿ ರಾತ್ರಿ ಬಯಲು ಬಹಿರ್ದೆಸೆಗೆ ತೆರಳಿದ್ದಾಗ ಮೂವರು ಆಕೆಯನ್ನು ಹಿಂಬಾಲಿಸಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.  ಬಾಲಕಿ ಮನೆಗೆ ಬಂದು ನಡೆದ ಘಟನೆ ವಿವರಿಸಿದ್ದು, ಬೆಳಿಗ್ಗೆ ಪೋಷಕರು ಇಲ್ಲಿನ ನವನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಾದ ರಾಮನಗೌಡ ಗೌಡರ ಹಾಗೂ ಮಹಾದೇವ‍ಪ್ಪ ಎಂಬುವವರನ್ನು ವಶಕ್ಕೆ ಪಡೆದು ನವನಗರ ಠಾಣೆಗೆ ಕರೆತಂದಿದ್ದರು.

ಸುದ್ದಿ ತಿಳಿದು ಠಾಣೆಯ ಎದುರು ಜಮಾಯಿಸಿದ ವಾಂಬೆ ಕಾಲೊನಿ ನಿವಾಸಿಗಳು, ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಡಿವೈಎಸ್‌ಪಿ ಎಸ್.ಬಿ.ಗಿರೀಶ್ ಹಾಗೂ ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ ತುಳಸಿಗೇರಿ ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರು. ಆದರೆ ಉದ್ರಿಕ್ತರು ಪಟ್ಟುಬಿಡಲಿಲ್ಲ. ಮಧ್ಯಾಹ್ನ ಕಳೆದಂತೆ ಪ್ರತಿಭಟನಾಕಾರರ ಗುಂಪು ಹೆಚ್ಚಾಗಿ ನವನಗರ ಮುಖ್ಯ ರಸ್ತೆಗೆ ಬಂದು ವಾಹನ ಸಂಚಾರ ತಡೆದು ಬಂದ್ ಮಾಡಿದರು. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಶಾಲಾ ವಾಹನಕ್ಕೆ ಕೆಲವರು ಕಲ್ಲು ಎಸೆದು ಗದ್ದಲ ನಡೆಸಿದರು.

ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎರಡು ತುಕಡಿಗಳನ್ನು ಸ್ಥಳಕ್ಕೆ ಕರೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಬಂದು ಮುಖಂಡರೊಂದಿಗೆ ಮಾತುಕತೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅದಕ್ಕೂ ಸೊಪ್ಪು ಹಾಕದ ಪ್ರತಿಭಟನಾಕಾರರು, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಎಸ್‌ಪಿ ಸ್ಥಳದಿಂದ ತೆರಳುತ್ತಿದ್ದಂತೆಯೇ ಮತ್ತೆ ಗದ್ದಲ ಆರಂಭಿಸಿದ ಕೆಲವು ಕಿಡಿಗೇಡಿಗಳು, ಜಿಲ್ಲಾ ನ್ಯಾಯಾಲಯದ ಎದುರು ಸಾಗುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ಗೆ ಕಲ್ಲು ಹೊಡೆದು ಗಾಜುಗಳನ್ನು ಜಖಂಗೊಳಿಸಿದರು.

ಆಗ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಗದ್ದಲ ಮಾಡುತ್ತಿದ್ದವರನ್ನು ಸ್ಥಳದಿಂದ ಚದುರಿಸಿದರು. ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಹಿತಕರ ಘಟನೆಗಳನ್ನು ತಡೆಯಲು ನವನಗರ ಪೊಲೀಸ್ ಠಾಣೆ, ವಾಂಬೆ ಕಾಲೊನಿ, ಶೆಡ್ ಕ್ರಾಸ್ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಬಾಲಕಿ ನೀಡಿದ ಸುಳಿವಿನ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕಾನೂನು ತನ್ನ ಕೆಲಸ ಮಾಡಲಿದೆ. ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದು, ಕಿಡಿಗೇಡಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಪರಿಸ್ಥಿತಿ ಈಗ ತಹಬದಿಯಲ್ಲಿದೆ.
– ಎಸ್.ಬಿ.ಗಿರೀಶ್, ಡಿವೈಎಸ್‌ಪಿ

 

ವಿದ್ಯಾರ್ಥಿನಿ ಕೊಲೆ: ಆರೋಪಿ ಬಂಧನ

ಹಾವೇರಿ: ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನಗರದ ಜಿ.ಎಚ್.ಕಾಲೇಜಿನ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರು, ಸವಣೂರ ತಾಲ್ಲೂಕಿನ ಮಣ್ಣೂರ ಗ್ರಾಮದ ಮಂಜುನಾಥಗೌಡ ಪಾಟೀಲ ಎಂಬಾತನನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ‘ವಿದ್ಯಾರ್ಥಿನಿಯ ಸಮೀಪದ ಸಂಬಂಧಿಯಾದ ಆರೋಪಿ, ಆಕೆಯನ್ನು ಸೋಮವಾರ ಬೆಳಿಗ್ಗೆ ಕಾರಿನಲ್ಲಿ ಕಾಲೇಜಿಗೆ ಕರೆದುಕೊಂಡು ಬಂದಿದ್ದ. ಆದರೆ, ತರಗತಿ ಆರಂಭಕ್ಕೆ ವಿಳಂಬವಾದ ಕಾರಣ ನಗರದಲ್ಲಿರುವ ತನ್ನ ಅಕ್ಕನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಕ್ಕ ಹಾಗೂ ಮನೆಯವರು ಪ್ರವಾಸಕ್ಕೆ ತೆರಳಿದ್ದ ಕಾರಣ, ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯವನ್ನು ದುರ್ಬಳಕೆ ಮಾಡಿಕೊಂಡ ಆತ, ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆ ಪ್ರತಿರೋಧ ತೋರಿದಾಗ, ದುಪಟ್ಟಾದಿಂದ ಕುತ್ತಿಗೆ ಬಿಗಿದಿದ್ದಾನೆ. ಪ್ರಜ್ಞೆ ಕಳೆದುಕೊಂಡು ಬಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಬಡಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶವವನ್ನು ಗೋಣಿಚೀಲದಲ್ಲಿ ತುಂಬಿಕೊಂಡು, ಸಮೀಪದ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿ ಸೇತುವೆ ಕೆಳಗೆ ಹಾಕಿ ಹೋಗಿದ್ದಾನೆ. ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವುದನ್ನು ಗಮನಿಸಿದ್ದ ಆತ, ಬುಧವಾರ ಸೀಮೆಎಣ್ಣೆ ತೆಗೆದುಕೊಂಡು, ಸೇತುವೆ ಬಳಿ ಬಿದ್ದಿದ್ದ ಶವವನ್ನು ಸುಟ್ಟು ಹಾಕಿದ್ದಾನೆ’ ಎಂದು ಎಸ್ಪಿ ಮಾಹಿತಿ ನೀಡಿದರು. ನಂತರ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !