ಹೊಲ–ಗದ್ದೆಯಿಂದಲೇ ಸರ್ಕಾರದ ಕಾರ್ಯಕ್ರಮ ಪ್ರಕಟ: ಸಿಎಂ

6
ತಿಂಗಳಿಗೆ ಒಂದು ದಿನ ಎಲ್ಲಾ ಜಿಲ್ಲೆಗಳ ರೈತರ ಜೊತೆ ಇರುವೆ

ಹೊಲ–ಗದ್ದೆಯಿಂದಲೇ ಸರ್ಕಾರದ ಕಾರ್ಯಕ್ರಮ ಪ್ರಕಟ: ಸಿಎಂ

Published:
Updated:
Deccan Herald

ಮಂಡ್ಯ: ‘ನಾನು ವಿಧಾನಸೌಧದಲ್ಲಿ ಕುಳಿತು ಆದೇಶ ಮಾಡುವುದಿಲ್ಲ. ತಿಂಗಳಿಗೆ ಒಂದು ದಿನ ಎಲ್ಲಾ ಜಿಲ್ಲೆಗಳ ರೈತರ ಮನೆ ಬಾಗಿಲಿಗೆ ತೆರಳಿ ಅವರ ಕಷ್ಟ–ಸುಖ ಅರಿಯುತ್ತೇನೆ. ಹೊಲ–ಗದ್ದೆಗಳಿಂದಲೇ ಸರ್ಕಾರದ ಕಾರ್ಯಕ್ರಮ ಪ್ರಕಟಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಾಂಡವಪುರ ತಾಲ್ಲೂಕು ಸೀತಾಪುರ ಗ್ರಾಮದ ಮಹಾದೇವಮ್ಮ ಅವರಿಗೆ ಸೇರಿದ ಗದ್ದೆಯಲ್ಲಿ ಶನಿವಾರ ರೈತ ಮಹಿಳೆಯರ ಜೊತೆ ಭತ್ತದ ನಾಟಿ ಮಾಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಹೊಸ ಕೃಷಿ ನೀತಿ ಜಾರಿಗೊಳಿಸಲು ನಾನು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಹೊಸ ಕೃಷಿ ಪದ್ಧತಿಗಳನ್ನು ಜಾರಿಗೊಳಿಸುವುದೇ ನನ್ನ ಗುರಿ. ನಾನು ಮುಖ್ಯಮಂತ್ರಿಯಲ್ಲ, ಈ ನಾಡಿನ ಸೇವಕ. ಹೊಸ ಸರ್ಕಾರವನ್ನು ಸರಿದಾರಿಗೆ ತರುವಲ್ಲೇ ಎರಡು ತಿಂಗಳಾದವು. ರೈತರ ಸಾಲ ಮನ್ನಾಕ್ಕೆ ಹಣ ಒದಗಿಸುವ ಕೆಲಸದಲ್ಲಿ ಮಗ್ನನಾಗಿದ್ದೆ. ಆದರೆ ಇಂದಿನಿಂದ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ, ಹಳ್ಳಿಗಳಿಗೆ ಬರುತ್ತೇನೆ’ ಎಂದು ಹೇಳಿದರು.

ಒಂದು ಪ್ರಾಂತ್ಯಕ್ಕೆ ಸೀಮಿತವಲ್ಲ:

‘ನನ್ನ ಭತ್ತ ನಾಟಿ ಕಾರ್ಯವನ್ನು ಬಿಜೆಪಿ ಮುಖಂಡರು ಡ್ರಾಮ ಎಂದು ಟೀಕಿಸಿದ್ದಾರೆ. ನಾನು ಡ್ರಾಮ ಮಾಡುತ್ತಿಲ್ಲ, ಯಾರನ್ನೂ ಮೆಚ್ಚಿಸಲಿಕ್ಕೆ ನಾನು ಈ ಕೆಲಸ ಮಾಡುತ್ತಿಲ್ಲ. ನನ್ನ ಹೃದಯಪೂರ್ವಕವಾಗಿ ಗದ್ದೆಗೆ ಇಳಿದಿದ್ದೇನೆ. ಒಂದು ಪ್ರಾಂತ್ಯಕ್ಕೆ ಮಾತ್ರ ನಾನು ಸೀಮಿತವಾಗಿಲ್ಲ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ತಾರತಮ್ಯ ಇಲ್ಲ. ರಾಜ್ಯದ 30 ಜಿಲ್ಲೆಗಳ ರೈತರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ದ್ರಾಕ್ಷಿ, ದಾಳಿಂಬೆ, ಅಡಿಕೆ, ಜೋಳ, ಕಬ್ಬು ಬೆಳೆಯುವ ರೈತರ ಪರವಾಗಿ ನಿಲ್ಲುತ್ತೇನೆ’ ಎಂದು ಹೇಳಿದರು.

‘ನನಗೆ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಬೇರೆಬೇರೆಯಲ್ಲ. ರೈತರು ಉಳಿದರೆ ಮಾತ್ರ ನಗರವಾಸಿಗಳು ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ. ಬಗರ್‌ ಹುಕುಂ ಭೂಮಿ ಸಾಗುವಳಿದಾರರು, ಆದಿವಾಸಿಗಳಿಗೆ ಭೂಮಿಯ ಹಕ್ಕು ಮುಂತಾದ ಸಮಸ್ಯೆಗಳಿವೆ. ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಲಿದೆ. ದೇವರ ಕೃಪೆಯಿಂದ ಉತ್ತಮ ಮಳೆಯಾಗಿದೆ. ನಮ್ಮ ರೈತರ ಜೊತೆಗೆ ತಮಿಳುನಾಡಿನ ರೈತ ಸಹೋದರರಿಗೂ ಅನುಕೂಲವಾಗಿದೆ’ ಎಂದರು.

ಗೌರಿ ಗಣೇಶನ ಹಬ್ಬದೊಳಗೆ ಸಿಹಿ ಸುದ್ದಿ:
‘ಗೌರಿಗಣೇಶ ಹಬ್ಬದೊಳಗೆ ರೈತರಿಗೆ ಇನ್ನೊಂದು ಸಿಹಿ ಸುದ್ದಿ ನೀಡುತ್ತೇನೆ. ಸ್ವಾತಂತ್ರ್ಯ ದಿನಾಚರಣೆ ಮುಗಿದ ನಂತರ ಸಚಿವ ಸಂಪುಟ ಸಭೆ ನಡೆಸಿ ಆ ಸುದ್ದಿಯನ್ನು ಪ್ರಕಟ ಮಾಡುತ್ತೇನೆ. ರೈತರು ಸಾಲವನ್ನೇ ಮಾಡಬಾರದು ಎಂಬ ಉದ್ದೇಶದಿಂದ ಈ ಯೋಜನೆ ಸಿದ್ಧಪಡಿಸಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !