ಜನಪ್ರಿಯತೆಯೇ ಮಾನದಂಡ; ಡಿ.ಆರ್.ಪಾಟೀಲ

7
ಸ್ಥಳೀಯ ಸಂಸ್ಥೆ ಚುನಾವಣೆ: ಟಿಕೆಟ್ ಗಿಟ್ಟಿಸಲು ಶಿಫಾರಸು, ಹಣ ಬಲಕ್ಕೆ ಪ್ರಾಮುಖ್ಯತೆ ಇಲ್ಲ 

ಜನಪ್ರಿಯತೆಯೇ ಮಾನದಂಡ; ಡಿ.ಆರ್.ಪಾಟೀಲ

Published:
Updated:
Deccan Herald

ಬಾಗಲಕೋಟೆ: ’ಸಾಮಾಜಿಕ ನ್ಯಾಯ ಪಾಲನೆ ಹಾಗೂ ವಾರ್ಡ್ ಮಟ್ಟದಲ್ಲಿ ಗಳಿಸಿರುವ ಜನಪ್ರಿಯತೆಯೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಇರುವ ಮಾನದಂಡ’ ಎಂದು ಪಕ್ಷದ ಜಿಲ್ಲಾ ಉಸ್ತುವಾರಿಯೂ ಆದ ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಸ್ಪಷ್ಟಪಡಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಪಕ್ಷದ ಜಿಲ್ಲಾ ಘಟಕದ ವತಿಯಿಂದ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಟಿಕೆಟ್ ನೀಡುವಾಗ ಶಿಫಾರಸು ಹಾಗೂ ಹಣ, ತೋಳ್ಬಲಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಅಭ್ಯರ್ಥಿಯು ಪಕ್ಷಕ್ಕೆ ಸಲ್ಲಿಸಿದ ಸೇವೆ ಹಾಗೂ ಆಯಾ ವಾರ್ಡ್‌ನಲ್ಲಿ ಜನರೊಂದಿಗೆ ಇಟ್ಟುಕೊಂಡಿರುವ ಸಂಪರ್ಕವನ್ನು ಪರಿಗಣಿಸಲಾಗುವುದು ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕರಾದ ಎಚ್.ವೈ.ಮೇಟಿ, ಉಮಾಶ್ರೀ, ಜೆ.ಟಿ.ಪಾಟೀಲ ಹಾಗೂ ಎಸ್.ಆರ್.ಪಾಟೀಲ ಕೂಡ ದನಿಗೂಡಿಸಿದರು.

ಅನ್ನಭಾಗ್ಯ ಸೇರಿದಂತೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳನ್ನು ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಮನೆ ಮನೆಗೆ ತಲುಪಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುಕ್ಕಾಣಿಯನ್ನು ಪಕ್ಷ ಹಿಡಿಯಲೇಬೇಕು. ಹಿಂದಿನ ಅವಧಿಯ ಪ್ರಾಬಲ್ಯವನ್ನು ಈ ಬಾರಿಯೂ ಮುಂದುವರೆಸಬೇಕು. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಆಯಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಯೋಗ್ಯ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಿ ಅವರನ್ನು ಗೆಲ್ಲಿಸಿ ತರುವುದು ನಿಮ್ಮ ಜವಾಬ್ದಾರಿ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಸೌದಾಗರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ ದಡ್ಡಿ ಚುನಾವಣೆಗೆ ಕೆಪಿಸಿಸಿ ನೀಡಿರುವ ಮಾರ್ಗ ಸೂಚಿಗಳನ್ನು ಸಭೆಗೆ ಓದಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸತೀಶ ಬಂಡಿವಡ್ಡರ, ಕೆಪಿಸಿಸಿ ಕಾರ್ಯದರ್ಶಿಗಳಾದ ಹಸನ್‌ ಸಾಬ್ ದೋಟಿಹಾಳ, ಕಮಲಾ ಮರಿಸ್ವಾಮಿ, ಮೋಹನ ಅಸುಂಡಿ,  ಎಂ.ಎಲ್.ಶಾಂತಗೇರಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ,  ರಾಜು ಮನ್ನಿಕೇರಿ, ಎನ್ ಬಿ ಗಸ್ತಿ, ಅಬುಶಮಾ ಖಾಜಿ ಹಾಜರಿದ್ದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !