ಇಂದ್ರಧನುಷ್‌ ಅಭಿಯಾನ: ಶೇ 95 ಗುರಿ ಸಾಧನೆ

7
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯ್‌ಕುಮಾರ್‌ ಹೇಳಿಕೆ

ಇಂದ್ರಧನುಷ್‌ ಅಭಿಯಾನ: ಶೇ 95 ಗುರಿ ಸಾಧನೆ

Published:
Updated:
Deccan Herald

ಕೋಲಾರ: ‘ಜಿಲ್ಲೆಯಲ್ಲಿ ಇಂದ್ರಧನುಷ್ ಅಭಿಯಾನದಡಿ ಗಂಡಾಂತರ ಕಾಯಿಲೆಗಳಿಗೆ ಲಸಿಕೆ ನೀಡುವಲ್ಲಿ ಶೇ 95ರಷ್ಟು ಗುರಿ ಸಾಧಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ತಿಳಿಸಿದರು.

ಜಿಲ್ಲಾಡಳಿತವು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂದ್ರಧನುಷ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಗ್ರಾಮ ಸ್ವರಾಜ್ ಅಭಿಯಾನದಡಿ 3 ಹಂತದಲ್ಲಿ ಶೇ 100ರಷ್ಟು ಲಸಿಕೆ ಗುರಿ ಸಾಧನೆಯಾಗಬೇಕು’ ಎಂದು ಹೇಳಿದರು.

‘ದೇಶದಲ್ಲಿ ಶೇ 65ರಷ್ಟು ಮಕ್ಕಳು ಮತ್ತು ಗರ್ಭಿಣಿಯರು ಚುಚ್ಚುಮದ್ದು ಹಾಗೂ ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಉಳಿದವರು ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರವು ಗ್ರಾಮ ಸ್ವರಾಜ್ಯ ಅಭಿಯಾನದಡಿ ಆರೋಗ್ಯ ಇಲಾಖೆಯಿಂದ 2015ರಲ್ಲಿ ಇಂದ್ರ ಧನುಷ್ ಲಸಿಕೆ ಅಭಿಯಾನ ಅನುಷ್ಠಾನಗೊಳಿಸಿತು. ಅಭಿಯಾನದ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು’ ಎಂದರು.

‘ರಾಜ್ಯದ 28 ಜಿಲ್ಲೆಗಳಲ್ಲಿ ವಿಸ್ತರಿಸಲಾಗಿರುವ ಗ್ರಾಮ ಸ್ವರಾಜ್ ಅಭಿಯಾನವು ಆ.13ರಿಂದ 17, ಸೆ.10ರಿಂದ 14 ಹಾಗೂ ಅ.9ರಿಂದ 13ರಂದು ಹೀಗೆ ಮೂರು ಹಂತಗಳಲ್ಲಿ ನಡೆಯಲಿದೆ. ಅಭಿಯಾನದಲ್ಲಿ ಎಲ್ಲಾ ಗರ್ಭಿಣಿಯರಿಗೆ ರಕ್ತ, ಎಚ್‍ಐವಿ ಸೋಂಕು ಪರೀಕ್ಷೆ ಮಾಡಲಾಗುತ್ತದೆ. ನವಜಾತ ಶಿಶುವಿನಿಂದ 6 ವರ್ಷ ವಯೋಮಾನದವರೆಗಿನ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘1 ತಿಂಗಳಿನಿಂದ 19 ವರ್ಷದವರೆಗಿನ ಮಕ್ಕಳಿಗೆ ಜಂತುಹುಳು ನಿರ್ಮೂಲನಾ ಕಾರ್ಯಕ್ರಮ, ಹೆಲ್ತ್ ಅಂಡ್ ವೆಲ್‍ನೆಸ್ ಕೇಂದ್ರ ಸ್ಥಾಪನೆ, ಶಿಶು ಮತ್ತು ಮಗುವಿನ ಆಹಾರ ಸೇವನೆ ಪದ್ಧತಿಯ ಸಮಾಲೋಚನೆ, ಕ್ಷಯ ರೋಗ ನಿರ್ಮೂಲನೆಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಔಷಧ ನಿರೋಧಕ ಚಿಕಿತ್ಸಾ ಕೇಂದ್ರ ಸ್ಥಾಪನೆ, ಸಾರ್ವತ್ರಿಕ ಔಷಧ ಸಂವೇದನಾ ಪರೀಕ್ಷೆ, ಕ್ಷಯ ರೋಗಿಗಳಿಗೆ ಪೌಷ್ಟಿಕ ಅಂಶ ಸಹಾಯಧನ ಒದಗಿಸಲಾಗುವುದು’ ಎಂದು ವಿವರಿಸಿದರು.

ಅರಿವು ಮೂಡಿಸಿ: ‘ಹುಟ್ಟುವ ಶಿಶುವನ್ನು ಸೋಂಕಿನಿಂದ ತಪ್ಪಿಸಲು ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದರೆ, ಪೋಷಕರಲ್ಲಿನ ಅರಿವಿನ ಕೊರತೆಯಿಂದಾಗಿ ಮಕ್ಕಳಿಗೆ ಸಕಾಲಕ್ಕೆ ಲಸಿಕೆ ಕೊಡಿಸುತ್ತಿಲ್ಲ. ಇದರಿಂದ ಮಕ್ಕಳಲ್ಲಿ ಅಂಗವಿಕಲ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಾಲ ಕಾಲಕ್ಕೆ ಮಗುವಿಗೆ ಕೊಡಿಸಬೇಕಾದ ಲಸಿಕೆಗಳ ಬಗ್ಗೆ ಅಧಿಕಾರಿಗಳು ಅಭಿಯಾನದ ಮೂಲಕ ತಾಯಿಯರಿಗೆ ಅರಿವು ಮೂಡಿಸಬೇಕು’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್ ಸಲಹೆ ನೀಡಿದರು.

‘ಹೆಚ್ಚಾಗಿ ಕೊಳೆಗೇರಿಗಳು, ಕಾಲೊನಿಗಳಲ್ಲಿ, ಕೂಲಿ ಕಾರ್ಮಿಕರ ಕುಟುಂಬಗಳಲ್ಲಿ ತಾಯಂದಿರು ಮಗುವಿಗೆ ಸಕಾಲಕ್ಕೆ ಲಸಿಕೆ ಕೊಡಿಸಿರುವುದಿಲ್ಲ. ಕೈಗಾರಿಕೆ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು ಸಂಖ್ಯೆ ಹೆಚ್ಚಿರುತ್ತದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಆ ಸ್ಥಳಗಳನ್ನು ಗುರುತಿಸಿ ಲಸಿಕೆ ಗುರಿ ಸಾಧನೆಗೆ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಮಕ್ಕಳಿಗೆ ಲಸಿಕೆ:‘ಇಂದ್ರಧನುಷ್ ಅಭಿಯಾನದಡಿ ಜಿಲ್ಲೆಯಲ್ಲಿ 888 ಗರ್ಭಿಣಿಯರು, -2 ವರ್ಷದೊಳಗಿನ 4,299 ಮಕ್ಕಳು, 5 ವರ್ಷದಿಂದ 6 ವರ್ಷದೊಳಗಿನ 352 ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಗಂಡಾಂತರ ಪ್ರದೇಶದಲ್ಲಿನ ನವಜಾತ ಶಿಶುಗಳಿಂದ 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. 1 ವರ್ಷದಿಂದ 19 ವರ್ಷದೊಳಗಿನ 3,76,522 ಮಕ್ಕಳಿಗೆ ಜಂತು ಹುಳು ನಾಶಕ ಮಾತ್ರೆ ನೀಡಲಾಗುತ್ತದೆ’ ಎಂದು ವಿವರಿಸಿದರು.

ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ (ಪ್ರಭಾರ) ಡಾ.ಸಂತೋಷ್ ಡಿ.ಪ್ರಭು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಸಂತಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ಮಕ್ಕಳ ತಜ್ಞ ಡಾ.ಶ್ರೀನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ ಹಾಜರಿದ್ದರು.

* 463 ಲಸಿಕಾ ಕೇಂದ್ರಗಳು
* 722 ಗಂಡಾಂತರ ಪ್ರದೇಶ
* 1,03,400 ಮಕ್ಕಳ ಆರೋಗ್ಯ ತಪಾಸಣೆ
* 839 ಗರ್ಭಿಣಿಯರ ರಕ್ತ ಪರೀಕ್ಷೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !