ಹೊರಗುತ್ತಿಗೆ ನೌಕರರ ಹಿತ ಕಾಯಲು ಆಗ್ರಹ

7
ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಪ್ರಥಮ ಸಮಾವೇಶ

ಹೊರಗುತ್ತಿಗೆ ನೌಕರರ ಹಿತ ಕಾಯಲು ಆಗ್ರಹ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರ ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ದಿನಗೂಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಜತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ ಜಿಲ್ಲಾ ಘಟಕದ ಪ್ರಥಮ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಅನೇಕ ವರ್ಷಗಳಿಂದ ಸರ್ಕಾರ ವಿದ್ಯಾರ್ಥಿ ನಿಲಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಸರ್ಕಾರ ನೇರ ನೇಮಕಾತಿ ಮೂಲಕ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿದ್ದಂತೆ ಹೊರಹಾಕಲು ನಿರ್ಧರಿಸಿತು. ಇದನ್ನು ಖಂಡಿಸಿ ಸಂಘ ಹಮ್ಮಿಕೊಂಡ ಬೃಹತ್ ಪ್ರತಿಭಟನೆ, ಅನಿರ್ದಿಷ್ಟಾವಧಿ ಧರಣಿ ಬಳಿಕ ಸರ್ಕಾರ ತನ್ನ ನಿಲುವು ಬದಲಿಸಿ ನೌಕರರನ್ನು ಮರು ನಿಯೋಜನೆಗೆ ಮುಂದಾಯಿತು’ ಎಂದು ಹೇಳಿದರು.

‘ಸರ್ಕಾರಿ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಿಗೆ ಸರ್ಕಾರ ನೇರ ನೇಮಕಾತಿ ಮೂಲಕ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಇಲಾಖೆಯ ಕೆಲ ಅಧಿಕಾರಿಗಳ ಕುತಂತ್ರದಿಂದ ನೇರ ನೇಮಕಾತಿ ನಡೆದು ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಯಿತು. ಅದರ ಬದಲು ಕೆಲಸ ಮಾಡುತ್ತಿದ್ದ ಹೊರ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ, ಮೂಲಸೌಕರ್ಯ ನೀಡಿದ್ದರೆ ಸಾಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ಇನ್ನಾದರೂ ಸರ್ಕಾರ ಹೊರಗುತ್ತಿಗೆ ನೌಕರರ ಹಿತ ಕಾಯುವ ಕೆಲಸ ಮಾಡಬೇಕು. ಕಾಯಂ ನೌಕರರು ಕೆಲಸ ಬಿಟ್ಟರೆ ಹೊಸದಾಗಿ ಹುದ್ದೆಗೆ ಬೇರೊಬ್ಬರನ್ನು ನೇಮಿಸಿಕೊಳ್ಳುವ ಬದಲು ಹೊರ ಗುತ್ತಿಗೆ ನೌಕರರನ್ನು ಸೇವಾ ಹಿರಿತನದ ಆಧಾರದ ಮೇಲೆ ನೇಮಿಸಿಕೊಳ್ಳಬೇಕು. ನೌಕರರ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮತ್ತೆ ಆರಂಭವಾಗಲಿದೆ’ ಎಂದು ಎಚ್ಚರಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೇವಮಾನಿ ರಮೇಶ್, ‘ವಿದ್ಯಾರ್ಥಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರು ಭಯಪಡುವ ಅಗತ್ಯವಿಲ್ಲ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಯಾವ ಸಮಸ್ಯೆಯು ಉದ್ಭವಿಸುವುದಿಲ್ಲ. ಸರ್ಕಾರ ಈಗಾಗಲೇ ಹೊರ ಗುತ್ತಿಗೆ ನೌಕರರ ಮರು ನೇಮಕಕ್ಕೆ ಸೂಚಿಸಿದೆ. ಈ ಬಗ್ಗೆ ಎಲ್ಲಾ ವಿಸ್ತರಣಾಧಿಕಾರಿಗಳಿಗೆ ಸೂಚನೆ ನೀಡುವೆ’ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಹನುಮೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಮುನಿಯಪ್ಪ, ಮುಖಂಡರಾದ ಕದಿರಪ್ಪ, ನಾರಾಯಣಸ್ವಾಮಿ, ಮುದ್ದಪ್ಪ, ಶಶಿಕಲಾ. ರಘುನಾಥ್, ಅಶ್ವತ್ಥಪ್ಪ, ಲಕ್ಷ್ಮೀಪತಿ, ಬಿ.ಎನ್.ವೆಂಕಟರವಣಪ್ಪ, ಶ್ರೀರಾಮ್, ಪ್ರಕಾಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !