ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

7
ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನದ ಪುಸ್ತಕ ಸುಟ್ಟ ಘಟನೆಗೆ ತೀವ್ರ ಖಂಡನೆ

ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಚಿಕ್ಕಬಳ್ಳಾಪುರ: ದೆಹಲಿಯ ಜಂತರ್ ಮಂತರ್‌ನಲ್ಲಿ ಬಹಿರಂಗವಾಗಿ ಸಂವಿಧಾನದ ಪುಸ್ತಕ ಹರಿದು ಬೆಂಕಿಯಲ್ಲಿ ಸುಟ್ಟಿದ್ದಲ್ಲದೆ, ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಿಡಿಗೇಡಿಗಳನ್ನು ಕೇಂದ್ರ ಸರಕಾರ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಬಿ.ವಿ.ಆನಂದ್, ‘ಸಂವಿಧಾನ ಸುಟ್ಟು ದುಷ್ಕರ್ಮಿಗಳಿಗೆ ಉಗ್ರಶಿಕ್ಷೆ ನೀಡಬೇಕು. ಆ ಮೂಲಕ ನೆಲದ ಕಾನೂನನ್ನು ಗೌರವಿಸುವ ಪಾಠ ಕಲಿಸಬೇಕು’ ಎಂದು ಆಗ್ರಹಿಸಿದರು.

‘ದೇಶ ಬದಲಾಗಿ ಇಷ್ಟೊಂದು ಮುಂದುವರಿಯಲು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಕೊಡುಗೆ ಅಪಾರ. ಅದನ್ನು ಅರಿಯದ ಮನುವಾದಿಗಳು ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ದೇಶದ ಜಾತ್ಯಾತೀತ ಮೌಲ್ಯಗಳನ್ನು ಹಾಳು ಮಾಡಲು ಹೊರಟಿದ್ದಾರೆ. ಮತ್ತೊಂದು ಅಂಬೇಡ್ಕರ್ ಅವರ ಗುಣಗಾನ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಕೃತ್ಯದ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿರುವುದು ದುರಂತ’ ಎಂದು ಆರೋಪಿಸಿದರು.

‘ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ದಲಿತರು, ಮುಸ್ಲಿಮರು ಸೇರಿದಂತೆ ಬಹುಸಂಖ್ಯಾತರು ನೆಮ್ಮದಿಯಿಂದ ಬಾಳುವೆ ನಡೆಸಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಒತ್ತಾಯಪೂರ್ವಕವಾಗಿ ಏಕ ಸಂಸ್ಕೃತಿ ಹೇರುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಕೃತ್ಯಗಳನ್ನು ದೇಶದ ಪ್ರತಿಯೊಬ್ಬರೂ ಖಂಡಿಸಬೇಕು’ ಎಂದು ಹೇಳಿದರು.

ಮುಖಂಡ ಅಂದಾರ್ಲಹಳ್ಳಿ ವೆಂಕಟೇಶ್ ಮಾತನಾಡಿ, ‘ಭಾರತದ ಘನತೆ ಮತ್ತು ಗೌರವದ ಸಂಕೇತವಾದ ಸಂವಿಧಾನ ಸುಡುವುದು ಒಂದೇ ಇಡೀ ದೇಶವನ್ನೇ ಸುಡುವುದು ಒಂದೇ. ಸಂವಿಧಾನದ ಬಲದಿಂದಲೇ ಶಿಕ್ಷಣ ಪಡೆದ ಮನುವಾದಿಗಳ ತಂತ್ರಗಳಿಂದ ಇಂದು ದೇಶ ನರಳುತ್ತಿದೆ. ದಲಿತರೂ ಮನುಷ್ಯರೇ ಎಂಬುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನವನ್ನು ಸುಟ್ಟ ಬೆಂಕಿ ಮುಂದೆ ದೇಶವನ್ನು ಸುಡಲಾರದು ಎಂದು ನಂಬುವುದು ಹೇಗೆ’ ಎಂದು ಪ್ರಶ್ನಿಸಿದರು.

ಸಮಿತಿ ಜಿಲ್ಲಾ ಘಟಕದ ಸಂಚಾಲಕ ಬಿ.ವಿ ವೆಂಕಟರಮಣ ಮಾತನಾಡಿ, ‘ಒಂದು ದೇಶದಲ್ಲಿ ವಾಸಿಸುವ ಯಾವುದೇ ಪ್ರಜೆ ಆ ದೇಶದ ಕಾನೂನುಗಳಿಗೆ ತಲೆ ಬಾಗಿ ನಡೆಯುವುದು ನಾಗರಿಕನ ಲಕ್ಷಣ. ಆದರೆ ಇವತ್ತು ಭಾರತದಂತಹ ಬಹು ಸಂಸ್ಕೃತಿಯ ದೇಶದಲ್ಲಿ ದೇಶವಾಸಿಗಳೇ ನೆಲದ ಕಾನೂನುಗಳಿಗೆ ತಿಲಾಂಜಲಿ ಇಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಂವಿಧಾನ ಸುಡುವಂತಹ ವಿಕೃತಿಗಳಿಗೆ ಕಡಿವಾಣ ಹಾಕುವ ಮೂಲಕ ಬಹುತ್ವವನ್ನು ಉಳಿಸಬೇಕಿದೆ’ ಎಂದರು.

ಜಿಲ್ಲಾ ಸಂಚಾಲಕರಾದ ಸಿ.ಜಿ ಗಂಗಪ್ಪ, ಸಿ.ಎಂ.ಮುನೆಯ್ಯ, ಪಿ.ನರಸಿಂಹಮೂರ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !