ಕೊಪ್ಪಳದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪ್ರವಾಸ

7
ಜಿಲ್ಲೆಯಲ್ಲಿ ಸಹ ಘನ ಮತ್ತು ದ್ರವ ತ್ಯಾಜ್ಯ ವ್ಯವಸ್ಥಿತ ವಿಲೇವಾರಿ, ಸಂಸ್ಕರಣೆ ಮಾಡಲು ಚಿಂತನೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಅಧ್ಯಯನ ಪ್ರವಾಸ

ಕೊಪ್ಪಳದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪ್ರವಾಸ

Published:
Updated:
Deccan Herald

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸಹ ಕೊಪ್ಪಳದ ಮಾದರಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವ್ಯವಸ್ಥಿತ ವಿಲೇವಾರಿ, ಸಂಸ್ಕರಣೆ ಮಾಡಲು ಉದ್ದೇಶಿಸಿದ್ದು, ಅದಕ್ಕಾಗಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಸುಮಾರು 150 ಜನರ ತಂಡ ಕೊಪ್ಪಳ ಜಿಲ್ಲೆಗೆ ಅಧ್ಯಯನ ಪ್ರವಾಸ ಕೈಗೊಂಡಿತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್, ಸದಸ್ಯ ಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಉಪ ಕಾರ್ಯದರ್ಶಿ ಶಶಿಧರ್, ಮುಖ್ಯ ಲೆಕ್ಕಾಧಿಕಾರಿ ಎಂ.ಎಚ್.ನಾಗೇಶ್, 70 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನೀರು ಮತ್ತು ನೈರ್ಮಲ್ಯದ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪ್ರವಾಸದಲ್ಲಿ ಭಾಗವಹಿಸಿದ್ದರು.

ಕೊಪ್ಪಳದ ಹುಲಗಿ–ಹೊಸಹಳ್ಳಿ ಬಳಿ ಇರುವ ಘನ ಮತ್ತು ದ್ರವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸೋಮವಾರ ಭೇಟಿ ನೀಡಿದ ತಂಡ ದಿನವೀಡಿ ಅಲ್ಲಿನ ನಡೆಯುತ್ತಿದ್ದ ಪ್ರತಿಯೊಂದು ಪ್ರಕ್ರಿಯೆಗಳನ್ನು ಅವಲೋಕಿಸಿ, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅಲ್ಲಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಯಾವ ರೀತಿ ತ್ಯಾಜ್ಯ ಸಂಗ್ರಹಿಸುತ್ತಾರೆ? ಒಣ ಮತ್ತು ಹಸಿ ಕಸವನ್ನು ಹೇಗೆ ವಿಂಗಡಿಸುತ್ತಾರೆ? ತ್ಯಾಜ್ಯವನ್ನು ಯಾವ ರೀತಿ ಸಂಸ್ಕರಿಸುತ್ತಾರೆ? ಪ್ಲಾಸ್ಟಿಕ್ ಮತ್ತು ಎಲೆಕ್ಟ್ರಾನಿಕ್ಸ್ ತ್ಯಾಜ್ಯವನ್ನು ಹೇಗೆ ನಿರ್ವಹಿಸುತ್ತಾರೆ? ಕಾಂಫೋಸ್ಟ್ ಗೊಬ್ಬರ ಹೇಗೆ ತಯಾರಿಸುತ್ತಾರೆ ಇತ್ಯಾದಿ ಪ್ರಶ್ನೆಗಳನ್ನಿಟ್ಟುಕೊಂಡು ಘಟಕದ ತುಂಬಾ ತಿರುಗಾಡಿ ಉತ್ತರ ಕಂಡುಕೊಂಡರು.

ಈ ಕುರಿತು ಎಚ್‌.ವಿ.ಮಂಜುನಾಥ್ ಅವರನ್ನು ವಿಚಾರಿಸಿದರೆ, ‘ನಾವು ಸದ್ಯ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 70 ಘನ ಮತ್ತು ದ್ರವ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಅದಕ್ಕಾಗಿ ಜಾಗ ಗುರುತಿಸಿ, ಪ್ರಸ್ತಾವ ಸರ್ಕಾರಕ್ಕೆ ಕೂಡ ಸಲ್ಲಿಸಲಾಗಿದೆ. ಅನುಮೋದನೆ ದೊರೆಯುತ್ತಿದ್ದಂತೆ ಘಟಕಗಳ ನಿರ್ಮಾಣ ಕಾಮಗಾರಿ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ’ ಎಂದು ಹೇಳಿದರು.

‘ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ನಿರ್ವಹಣೆ ಮಾಡುವುದು ಕಷ್ಟ. ಆದ್ದರಿಂದ ಕನಿಷ್ಠ ಎರಡರಿಂದ ಗರಿಷ್ಠ ಆರು ಪಂಚಾಯಿತಿಗಳ ಗುಚ್ಛಗಳನ್ನು ಮಾಡಿ ಸಾಮೂಹಿಕ ಪದ್ಧತಿಯಡಿ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ಆ ಕೆಲಸ ಆರಂಭವಾಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನಮ್ಮ ಪರಿಕಲ್ಪನೆ ಎಂತಹದ್ದು ಎಂದು ಮನವರಿಕೆ ಮಾಡುವ ನಿಟ್ಟಿನಲ್ಲಿ ಈ ಪ್ರವಾಸ ಕೈಗೊಳ್ಳಲಾಗಿತ್ತು’ ಎಂದು ತಿಳಿಸಿದರು.

‘ಹುಲಗಿ ಸಮೀಪದ ಆ ಘಟಕದಲ್ಲಿ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುತ್ತಾರೆ. ಪ್ಲಾಸ್ಟಿಕ್ ಹೊಸ ಉತ್ಪನ್ನಗಳ ತಯಾರಿಕೆಗೆ ಪೂರೈಸುತ್ತಾರೆ. ಎಣ್ಣೆ, ಮದ್ಯದ ಟೆಟ್ರಾ ಪ್ಯಾಕೆಟ್‌ಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಟನ್‌ಗಟ್ಟಲೇ ಮುಂಬೈಗೆ ಕಳುಹಿಸಿ, ಒಂದು ಟನ್‌ಗೆ ₨19 ಸಾವಿರದಂತೆ ಮಾರಾಟ ಮಾಡುತ್ತಾರೆ. ತ್ಯಾಜ್ಯದಿಂದಲೂ ಆದಾಯ ಹೇಗೆ ಗಳಿಸಬಹುದು ಎನ್ನುವುದು ಈ ಪ್ರವಾಸ ಕಲಿಸಿಕೊಟ್ಟಿತು’ ಎಂದು ಸ್ವಚ್ಛ ಭಾರತ್‌ ಯೋಜನೆ ಹಂಗಾಮಿ ಸಹಾಯಕ ಯೋಜನಾಧಿಕಾರಿ ಮುನಿರಾಜು ಹೇಳಿದರು.

‘ಕೊಪ್ಪಳ ಜಿಲ್ಲೆಯ ಘಟಕ ನೋಡಿದ ಮೇಲೆ ಅದನ್ನು ಮಾದರಿಯಾಗಿ ತೆಗೆದುಕೊಂಡು ಶತಾಯಗತಾಯ ನಮ್ಮ ಜಿಲ್ಲೆಯಲ್ಲಿ ಸಹ ಅಂತಹ ಕೆಲಸ ಆರಂಭಿಸಬೇಕು ಎಂದು ಅಧ್ಯಕ್ಷರು, ಸಿಇಒ ಅವರ ಉದ್ದೇಶವಾಗಿದೆ. ಅದನ್ನು ಎಲ್ಲ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಅನುಷ್ಟಾನಕ್ಕೆ ತರುತ್ತೇವೆ. ಮೊದಲ ಹಂತದಲ್ಲಿ ಪೇರೇಸಂದ್ರ, ಅರೂರು ಗ್ರಾಮ ಪಂಚಾಯಿತಿಗಳ ನಡುವೆ ನಿರ್ಮಿಸಿದ ಘಟಕ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !