ಸ್ವಚ್ಛ ಕೋಲಾರಕ್ಕೆ ಸಂಚಾರ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ

7
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿಕೆ

ಸ್ವಚ್ಛ ಕೋಲಾರಕ್ಕೆ ಸಂಚಾರ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ

Published:
Updated:

ಕೋಲಾರ: ‘ಸ್ವಚ್ಛ ಕೋಲಾರ ನಿರ್ಮಾಣಕ್ಕೆ ನಗರಸಭೆಯಿಂದ ಸಂಚಾರ (ಮೊಬೈಲ್‌) ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಗರವಾಸಿಗಳ ಮೊಬೈಲ್‌ ಕರೆ ಆಧರಿಸಿ ಮನೆ ಬಳಿಯೇ ಹೋಗಿ ಕಸ ಸಂಗ್ರಹಿಸಲು ವಾಹನ ನಿಯೋಜಿಸಲಾಗುವುದು. ಕಸದ ಸಮಸ್ಯೆ ಬಗ್ಗೆ ಮಾಹಿತಿ ನೀಡಲು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗುವುದು’ ಎಂದು ತಿಳಿಸಿದರು.

‘ನಗರವಾಸಿಗಳು ಕಸದ ಸಮಸ್ಯೆ ಕುರಿತು ವಾಟ್ಸ್‌ಆ್ಯಪ್‌ ಗ್ರೂಪ್‌ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿದರೆ ಪೌರ ಕಾರ್ಮಿಕರು ಒಂದು ತಾಸಿನಲ್ಲಿ ಮನೆ ಬಳಿ ಹೋಗಿ ಕಸ ಸಂಗ್ರಹಿಸುತ್ತಾರೆ. ನಾಗರಿಕರು ಸಹ ಮನಬಂದಂತೆ ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು’ ಎಂದರು.

‘ನಗರದ ಕಸ ವಿಲೇವಾರಿಗೆ ಹಿಂದಿನ ಜಿಲ್ಲಾಧಿಕಾರಿ ದಿವಂಗತ ಡಿ.ಕೆ.ರವಿ ಅವರು ಜಾಗ ಗುರುತಿಸಿಕೊಟ್ಟಿದ್ದಾರೆ. ಆದರೆ, ಸಮರ್ಪಕ ಕಸ ವಿಲೇವಾರಿಗೆ ಪೌರ ಕಾರ್ಮಿಕರ ಕೊರತೆಯಿದೆ. ಪೌರ ಕಾರ್ಮಿಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ’ ಎಂದು ವಿವರಿಸಿದರು.

‘ಪ್ರತಿ ಶನಿವಾರ ವಾರಕ್ಕೊಂದು ವಾರ್ಡ್‌ನಲ್ಲಿ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸ್ವಚ್ಛತಾ ಆಂದೋಲನ ನಡೆಸಲಾಗುವುದು. ಸಾರ್ವಜನಿಕರು ಹಾಗೂ ಸಮಾಜ ಸೇವೆಯ ಕಾಳಜಿಯುಳ್ಳವರು ಆಂದೋಲನಕ್ಕೆ ಕೈ ಜೋಡಿಸಬೇಕು. ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿರ್ಬಂಧಿಸುವುದು ನಗರಸಭೆ ಒಂದರಿಂದ ಮಾತ್ರ ಸಾಧ್ಯವಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ, ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುವ ಅಂಗಡಿ ಮಾಲೀಕರ ವಿರುದ್ಧ ದೂರು ದಾಖಲಿಸಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

ಪ್ರತ್ಯೇಕ ಜಾಗ: ‘ಬೀದಿ ಬದಿಯ ಪಾದಾಚಾರಿ ಮಾರ್ಗದಲ್ಲಿ ಅಂಗಡಿಗಳ ಸಂಖ್ಯೆ ಹೆಚ್ಚಿದ್ದು, ಇದರಿಂದ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ಗುರುತಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕಂದಾಯ ವಸೂಲಿ ಆಂದೋಲನ, ಉದ್ದಿಮೆದಾರರ ಪರವಾನಗಿ ವಿಶೇಷ ಅದಾಲತ್, ನಗರಸಭೆ ಆಸ್ತಿಗಳಿಗೆ ತಂತಿ ಬೇಲಿ ಅಳವಡಿಕೆ. ಅನಧಿಕೃತ ಕಟ್ಟಡ ಮಾಲೀಕರಿಂದ ದುಪ್ಪಟ್ಟು ತೆರಿಗೆ ವಸೂಲಿ, ನಗರಸಭೆ ಜಾಗ ಒತ್ತುವರಿ ತೆರವಿಗೆ ನೋಟಿಸ್ ಜಾರಿ ಮಾಡಲು ಹೆಚ್ಚು ಒತ್ತು ನೀಡಲಾಗುತ್ತದೆ’ ಎಂದು ಹೇಳಿದರು.

ಸ್ಥಾಯಿ ಸಮಿತಿ ಸದಸ್ಯರಾದ ಮೋಹನ್ ಪ್ರಸಾದ್, ವೆಂಕಟೇಶ್‌ಪತಿ, ನಾರಾಯಣಮ್ಮ, ಎಲ್.ನವಾಜ್ ಅಹಮ್ಮದ್, ಮಹಮ್ಮದ್‌ ಅಸ್ಲಂ ಪಾಷಾ, ನದೀಂ ಹೈದರ್ ಹಾಜರಿದ್ದರು.

* 27 ಚದರ ಕಿ.ಮೀ ನಗರದ ವಿಸ್ತಾರ
* 35 ವಾರ್ಡ್‌ಗಳು ನಗರದಲ್ಲಿವೆ
* 2 ಲಕ್ಷದ ಗಡಿ ದಾಟಿದ ಜನಸಂಖ್ಯೆ
* ದಿನಕ್ಕೆ 70 ಟನ್‌ ಕಸ ಉತ್ಪತ್ತಿ
* ನಗರಸಭೆಯಲ್ಲಿ 179 ಪೌರ ಕಾರ್ಮಿಕರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !