ನಾರಾಯಣಗುರು ಜಯಂತಿ: ಪ್ರಬಂಧ ಸ್ಪರ್ಧೆ ನಡೆಸಿ

7
ಸಭೆಯಲ್ಲಿ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ

ನಾರಾಯಣಗುರು ಜಯಂತಿ: ಪ್ರಬಂಧ ಸ್ಪರ್ಧೆ ನಡೆಸಿ

Published:
Updated:
Deccan Herald

ಕೋಲಾರ: ‘ಮಹನೀಯರ ಜಯಂತಿಯನ್ನು ಒಂದು ಸಮುದಾಯದ ಆಚರಣೆಗೆ ಸೀಮಿತಗೊಳಿಸದೆ ಅವರ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾದರೆ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ (ಪ್ರಭಾರ) ಶುಭಾ ಕಲ್ಯಾಣ್ ಅಭಿಪ್ರಾಯಪಟ್ಟರು.

ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಸಂಬಂಧ ಇಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಜಯಂತಿ ಸಂದರ್ಭದಲ್ಲಿ ಶಾಲಾ ಕಾಲೇಜುಗಳಲ್ಲಿ ಮಹನೀಯರ ಕುರಿತು ಪ್ರಬಂಧ ಸ್ಪರ್ಧೆ ನಡೆಸಿದರೆ ಅವರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದಂತಾಗುತ್ತದೆ’ ಎಂದು ಸಲಹೆ ನೀಡಿದರು.

‘ಆ.27ರಂದು ನಾರಾಯಣಗುರು ಜಯಂತಿ ನಡೆಯಲಿದೆ. ನಾರಾಯಣಗುರು ಅವರ ಕುರಿತು ಶಾಲಾ-ಕಾಲೇಜುಗಳಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆ ನಡೆಸಿ. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಯಂತಿ ದಿನ ಬಹುಮಾನ ವಿತರಿಸಿ’ ಎಂದು ಸೂಚಿಸಿದರು.

‘ಈ ಹಿಂದೆ ಕೆಲ ಜಯಂತಿಗಳ ಆಹ್ವಾನಪತ್ರಿಕೆಗಳು ಶಾಸಕರಿಗೆ ತಲುಪಿಲ್ಲ. ಈ ಕಾರಣಕ್ಕೆ ಶಾಸಕರು ಜಯಂತಿಗಳಲ್ಲಿ ಪಾಲ್ಗೊಂಡಿಲ್ಲ. ಈ ತಪ್ಪು ಮರುಕಳಿಸಬಾರದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ವಾರದ ಮುಂಚೆಯೇ ಜನಪ್ರತಿನಿಧಿಗಳಿಗೆ ಆಹ್ವಾನಪತ್ರಿಕೆ ತಲುಪಿಸಬೇಕು’ ಎಂದು ತಿಳಿಸಿದರು.

‘ಜಿಲ್ಲಾ ಮಟ್ಟದಲ್ಲಿ ನಡೆಯುವ ನಾರಾಯಣಗುರು ಜಯಂತಿಗೆ ₹ 75 ಸಾವಿರ ಹಾಗೂ ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ₹ 25 ಸಾವಿರ ಅನುದಾನ ನೀಡಲಾಗಿದೆ. ಈ ಅನುದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ನಡೆಸಬೇಕು’ ಎಂದು ಹೇಳಿದರು.

ಪ್ರಚಾರ ನಡೆಸಬೇಕು: ‘ಹಿಂದಿನ ವರ್ಷ ನಾರಾಯಣಗುರು ಜಯಂತಿ ಬಗ್ಗೆ ವ್ಯಾಪಕ ಪ್ರಚಾರ ನಡೆಸದ ಕಾರಣ ಕಾರ್ಯಕ್ರಮ ವಿಫಲವಾಗಿತ್ತು. ಈ ಬಾರಿ ಹೆಚ್ಚಿನ ಪ್ರಚಾರ ನಡೆಸಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಸಮುದಾಯದ 2-3 ಮಂದಿಯನ್ನು ಸನ್ಮಾನಿಸಬೇಕು’ ಎಂದು ಈಡಿಗ ಸಮಾಜ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗಿರೀಶ್‌ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಈಡಿಗ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಯುವರಾಜ್, ಸದಸ್ಯರಾದ ಶ್ರೀನಿವಾಸ್, ಸಂಪಂಗಿ ರಾಮಯ್ಯ, ವಿಶ್ವನಾಥ್, ಸುಕುಮಾರ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !