ಪಾತಾಳಕ್ಕೆ ಕುಸಿದ ಬೆಲೆ: ಟೊಮೆಟೊ ಗಿಡ ಕಿತ್ತು ಹಾಕಿದ ರೈತರು

7
ಜಿಲ್ಲೆಯಲ್ಲಿ ಗಣನೀಯ ಉತ್ಪಾದನೆ, ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದ ಬೆಲೆ, ಹತಾಶೆಗೊಂಡ ಅಂಗರೇಖನಹಳ್ಳಿ ರೈತ

ಪಾತಾಳಕ್ಕೆ ಕುಸಿದ ಬೆಲೆ: ಟೊಮೆಟೊ ಗಿಡ ಕಿತ್ತು ಹಾಕಿದ ರೈತರು

Published:
Updated:
Deccan Herald

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಟೊಮೆಟೊ ಉತ್ಪಾದನೆ ಗಣನೀಯವಾಗಿ ಹೆಚ್ಚಿದ ಪರಿಣಾಮ ಬೆಲೆ ಪಾತಾಳಕ್ಕೆ ಕುಸಿದಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರೇ ಇಲ್ಲದಂತಾಗಿ ರೈತರು, ಬೇಸತ್ತು ಇದೀಗ ಟೊಮೆಟೊ ಕಾಯಿಗಳ ಸಮೇತ ಗಿಡವನ್ನೇ ಕಿತ್ತು ಹಾಕಲು ಮುಂದಾಗುತ್ತಿದ್ದಾರೆ.

ತಾಲ್ಲೂಕಿನ ಅಂಗರೇಖನಹಳ್ಳಿಯಲ್ಲಿ ಮಂಗಳವಾರ ರೈತ ರವಿಕುಮಾರ್ ಎಂಬುವವರು ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮೊಟೊ ಬೆಳೆಯನ್ನು ಕಿತ್ತು ಹಾಕಿದರು.

ಈ ಕುರಿತು ರವಿಕುಮಾರ್ ಅವರನ್ನು ವಿಚಾರಿಸಿದರೆ, ‘ಎಪಿಎಂಸಿಯಲ್ಲಿ ಏಳೆಂಟು ತಿಂಗಳಿನಿಂದ 15 ಕೆ.ಜಿ. ಟೊಮೆಟೊ ಬಾಕ್ಸ್‌ವೊಂದಕ್ಕೆ ₹60ರಿಂದ ₹120ಕ್ಕೆ ಮಾರಾಟವಾಗುತ್ತಿತ್ತು. ಇದೀಗ ಗುಣಮಟ್ಟದ ಟೊಮೆಟೊ ಬಾಕ್ಸ್ ₹50ರಿಂದ ₹ 60ಕ್ಕೆ ಮಾರಾಟವಾಗುತ್ತಿದೆ. ಸಾಧಾರಣ ಟೊಮೆಟೊ ಕೇಳುವವರಿಲ್ಲದಂತಾಗಿದೆ’ ಎಂದು ಹೇಳಿದರು.

‘ಎರಡು ಎಕರೆಯಲ್ಲಿ ಟೊಮೆಟೊ ಬೆಳೆಯಲು ಸುಮಾರು ₨4.50 ಲಕ್ಷ ಖರ್ಚು ಮಾಡಿದ್ದೆ. ಫಸಲು ಚೆನ್ನಾಗಿ ಬರುತ್ತಿದೆ. ಆದರೆ ಅದಕ್ಕೆ ತಕ್ಕ ಬೆಲೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಗೆ ಹಣ್ಣು ಒಯ್ದರೆ ಹಣ್ಣು ಬಿಡಿಸಿದ ಆಳಿನ ಸಂಬಳ ಸಹ ವಾಪಸ್ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬೇಸತ್ತು ಗಿಡಗಳನ್ನು ಕಿತ್ತು ಹಾಕಿಸಿದೆ’ ಎಂದು ಅಳಲು ತೋಡಿಕೊಂಡರು.

‘ವಿಜ್ಞಾನಿಗಳು ತಜ್ಞರು ಸೀಸನ್‌ ನೋಡಿಕೊಂಡು ಬೆಳೆ ಇಡಬೇಕು ಎಂದು ಸಲಹೆ ನೀಡುತ್ತಾರೆ. ಆದರೆ ಇವತ್ತು ಯಾವುದೇ ಸೀಸನ್‌ನಲ್ಲಿ ಬೆಳೆದರೂ ಕೃಷಿ ಉತ್ಪನ್ನಗಳಿಗೆ ಬೆಲೆ ಸಿಗುತ್ತಿಲ್ಲ. ಇತ್ತೀಚೆಗಷ್ಟೇ ದ್ರಾಕ್ಷಿಗೆ ಆಲಿಕಲ್ಲು ಹೊಡೆತ ಬಿದ್ದು ನಷ್ಟವಾಯಿತು. ಬಳಿಕ ನಿಫಾ ವೈರಸ್ ಹಾವಳಿಯಿಂದ ಬೆಲೆ ಕುಸಿದು ನಷ್ಟವಾಯಿತು. ಟೊಮೆಟೊದಲ್ಲಾದರೂ ಅಲ್ಪ ಆದಾಯ ನಿರೀಕ್ಷೆ ಮಾಡಿದರೆ ಅದೂ ಹುಸಿಯಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈತರು ವಿದ್ಯುತ್‌ ಕಾಟ, ನೀರಿನ ಅಭಾವದ ನಡುವೆಯೂ ದುಬಾರಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಕ್ಕೆ ಖರ್ಚು ಮಾಡಿ ಟೊಮೆಟೊ ಬೆಳೆಯುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಕೇಳುವವರಿಲ್ಲದಂತಾಗಿದೆ. ಸರ್ಕಾರ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಿದರೆ ಮಾತ್ರ ರೈತರು ಬದುಕಬಹುದು. ಇಲ್ಲದಿದ್ದರೆ ಹತಾಶೆಗೊಂಡ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಪರಿತಪಿಸಬೇಕಾಗುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !