ಪಂಜಿನ ಮೆರವಣಿಗೆ: ಅಹೋರಾತ್ರಿ ಧರಣಿ

7
ಸಂವಿಧಾನದ ಪ್ರತಿ ಸುಟ್ಟ ಪ್ರಕರಣಕ್ಕೆ ಪ್ರಗತಿಪರ ಸಂಘಟನೆಗಳ ಖಂಡನೆ

ಪಂಜಿನ ಮೆರವಣಿಗೆ: ಅಹೋರಾತ್ರಿ ಧರಣಿ

Published:
Updated:
Deccan Herald

ಕೋಲಾರ: ಸಂವಿಧಾನದ ಪ್ರತಿ ಸುಟ್ಟು ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗಿದ ಪ್ರಕರಣ ಖಂಡಿಸಿ ಪ್ರಗತಿಪರ ಸಂಘಟನೆಗಳ ಸದಸ್ಯರು ಇಲ್ಲಿ ಮಂಗಳವಾರ ಪಂಜಿನ ಮೆರವಣಿಗೆ ನಡೆಸಿ ಅಹೋರಾತ್ರಿ ಧರಣಿ ಮಾಡಿದರು.

ನಚಿಕೇತನ ವಿದ್ಯಾರ್ಥಿನಿಲಯ ಆವರಣದಿಂದ ಆರಂಭವಾದ ಪಂಜಿನ ಮೆರವಣಿಗೆಯು ಮೆಕ್ಕೆ ವೃತ್ತ, ಎಂ.ಬಿ.ರಸ್ತೆ, ದೊಡ್ಡಪೇಟೆ ರಸ್ತೆ, ಎಂ.ಜಿ.ರಸ್ತೆ, ಗಾಂಧಿವನದ ಬಳಿ ಅಂತ್ಯಗೊಂಡಿತು.

ಮೆರವಣಿಗೆ ಉದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ ಸಂಘಟನೆಗಳ ಸದಸ್ಯರು, ‘ದೇಶದಲ್ಲಿ ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ. ಕೇಂದ್ರದ ದುರಾಡಳಿತದಿಂದ ದಲಿತರು ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವೇ ದಲಿತರ ಮೇಲಿನ ದಬ್ಬಾಳಿಕೆಗೆ ಕುಮ್ಮುಕ್ಕು ನೀಡುತ್ತಿದೆ. ದಲಿತರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಕೋಮುವಾದಿ ಬಿಜೆಪಿಯು ದಲಿತರನ್ನು ಮೂರನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದೆ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ವಿ.ಗೀತಾ ದೂರಿದರು.

‘ಬಿಜೆಪಿ ಆಡಳಿತಾವಧಿಯಲ್ಲಿ ಕೋಮುಶಕ್ತಿಗಳ ಅಟ್ಟಹಾಸ ಮೇರೆ ಮೀರಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಭಾಗವಾಗಿರುವ ಸಚಿವರೇ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನ ಪ್ರತಿ ಸುಟ್ಟಿರುವ ಪ್ರಕರಣದ ಹಿಂದೆ ಕೇಂದ್ರದ ಕೈವಾಡವಿದೆ’ ಎಂದು ಆರೋಪಿಸಿದರು.

ಒತ್ತಡ ಹೇರಿದೆ: ‘ದೇಶದಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಕೇಂದ್ರವೇ ಯೂತ್‌ ಫಾರ್‌ ಇಕ್ವಾಲಿಟಿ ಸಂಘಟನೆ ಸದಸ್ಯರನ್ನು ಎತ್ತಿಕಟ್ಟಿದೆ. ಪೊಲೀಸರ ಸಮ್ಮುಖದಲ್ಲೇ ಈ ದುಷ್ಕೃತ್ಯ ನಡೆದಿರುವುದು ದುರಂತ. ಪೊಲೀಸರಿಗೆ ಆರೋಪಿಗಳ ಮಾಹಿತಿ ಇದ್ದರೂ ಅವರನ್ನು ಬಂಧಿಸದಂತೆ ಕೇಂದ್ರವು ಒತ್ತಡ ಹೇರಿದೆ’ ಎಂದು ದಲಿತ ಸಂಘರ್ಷ ಸಮಿತಿ ಸದಸ್ಯ ಚಂದ್ರಶೇಖರ್ ಟೀಕಿಸಿದರು.

‘ಹಿಂದುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮತ್ತು ದಲಿತರ ಹತ್ಯೆ, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ತಳ ಸಮುದಾಯಗಳಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ವಿಫಲವಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ತಳಹದಿಯ ಮೇಲೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಕೋಮುಶಕ್ತಿಗಳ ಕೈಗೊಂಬೆಯಾಗಿದ್ದಾರೆ’ ಎಂದು ಕಿಡಿಕಾರಿದರು.

ರಕ್ಷಣೆ ನೀಡಬೇಕು: ‘ಸಂವಿಧಾನದ ಪ್ರತಿ ಸುಟ್ಟ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ದಲಿತರಿಗೆ ರಕ್ಷಣೆ ನೀಡಬೇಕು. ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ವಿ.ಅಂಬರೀಷ್, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ಟಿ.ವಿಜಯ್‌ಕುಮಾರ್, ಬಹುಜನ ಸಂಘರ್ಷ ಸೇನೆ ಸಂಸ್ಥಾಪಕ ಅಧ್ಯಕ್ಷ ಎನ್.ಅಂಬರೀಷ್‌, ಡಿಎಸ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾಗೇಶ್, ಕರ್ನಾಟಕ ಬಹುಜನ ಸಂಘದ ಅಧ್ಯಕ್ಷ ನಾಗರಾಜ್, ರೈತ ಸಂಘ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !