ಟೋಲ್‌ ಕೇಂದ್ರ ವಿಲೀನಕ್ಕೆ ಆಗ್ರಹಿಸಿ ಪ್ರತಿಭಟನೆ

7
ಸುರತ್ಕಲ್‌ ಟೋಲ್ ಪ್ಲಾಜಾ ಬಳಿ ಸಾಮೂಹಿಕ ಧರಣಿ

ಟೋಲ್‌ ಕೇಂದ್ರ ವಿಲೀನಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸುರತ್ಕಲ್ ಟೋಲ್ ಕೇಂದ್ರವನ್ನು ವಿಲೀನಗೊಳಿಸುವಂತೆ ಮತ್ತು ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಸದಸ್ಯರು ಸುರತ್ಕಲ್‌ ಟೋಲ್ ಕೇಂದ್ರದ ಬಳಿ ಮಂಗಳವಾರ ಸಾಮೂಹಿಕ ಧರಣಿ ನಡೆಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ‘ಕಾನೂನಿನ ಪ್ರಕಾರ ಈ ಟೋಲ್‌ ಕೇಂದ್ರ ಇರುವಂತಿಲ್ಲ. ಸಂಸದ ನಳಿನ್‌ಕುಮಾರ್ ಕಟೀಲ್‌ ಕೃಪೆಯಲ್ಲಿ ಈ ಲೂಟಿ ಕೇಂದ್ರ ನಡೆಯುತ್ತಿದೆ. ಕಾಟಾಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ವಿರುದ್ಧ ಮಾತನಾಡುವ ಸಂಸದರು, ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದಾರೆ. ಅವರ ಬೆಂಬಲದಿಂದಲೇ ಈ ಟೋಲ್‌ ಕೇಂದ್ರದ ಗುತ್ತಿಗೆ ಮತ್ತೆ ನವೀಕರಣಗೊಂಡಿದೆ’ ಎಂದರು.

ಹೆಜಮಾಡಿ ಟೋಲ್‌ ಕೇಂದ್ರದ ಜೊತೆ ಸುರತ್ಕಲ್‌ ಟೋಲ್‌ ಕೇಂದ್ರವನ್ನು ವಿಲೀನಗೊಳಿಸುವ ತೀರ್ಮಾನ ಜಾರಿಗೆ ಬರಲು ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ನೀಡುತ್ತಿಲ್ಲ. ಕೆಲವರ ಲಾಭಕ್ಕಾಗಿ ಈ ಲೂಟಿ ನಿರಾತಂಕವಾಗಿ ಮುಂದುವರಿದಿದೆ. ಮೂಲ ಒಪ್ಪಂದ ಮತ್ತು ಕಾನೂನಿನ ಪ್ರಕಾರ ತಕ್ಷಣವೇ ಟೋಲ್‌ ಕೇಂದ್ರವನ್ನು ವಿಲೀನಗೊಳಿಸಬೇಕು ಎಂದು ಆಗ್ರಹಿಸಿದರು.

‘ಉತ್ತಮ ಗುಣಮಟ್ಟದ ರಸ್ತೆ, ಸರ್ವೀಸ್‌ ರಸ್ತೆಯನ್ನು ಒದಗಿಸಿದರೆ ಮಾತ್ರ ಟೋಲ್‌ ಸಂಗ್ರಹಿಸಲು ಅವಕಾಶವಿದೆ. ಆದರೆ, ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ಟೋಲ್‌ ನೀಡಿ ಸಂಚರಿಸಬೇಕಾದ ದುಸ್ಥಿತಿ ಬಂದಿದೆ. ಈ ವಿಚಾರದಲ್ಲಿ ಸಂಸದರು ಮತ್ತು ಶಾಸಕರು ಏಕೆ ಮೌನವಾಗಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದರು.

ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಪ್ರಾಸ್ತಾವಿಕ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ಅಜ್ಮಾಲ್ ಕಾನ, ನವೀನ್ ಕೊಂಚಾಡಿ, ಮುಸ್ತಪಾ ಬೈಕಂಪಾಡಿ, ಬಸ್, ಲಾರಿ, ಟೆಂಪೊ, ಟ್ಯಾಕ್ಸಿ ಸಂಘಟನೆಗಳ ಪ್ರಮುಖರಾದ ಮೂಸಬ್ಬ ಪಕ್ಷಿಕೆರೆ, ರಹೀಂ ಪಕ್ಷಿಕೆರೆ, ದಿನೇಶ್ ಆರ್.ಕೆ., ಸಂದೀಪ್ ಕಿನ್ನಿಗೋಳಿ, ಮುನಾವರ್ ಕುತ್ತಾರ್, ಕಮಲಾಕ್ಷ ಸಾಲಿಯಾನ್, ಶಿವ ಪಂಜಿಮೊಗರು, ಉಮ್ಮರ್ ಫಾರೂಕ್, ಜಾನ್ ಡಿಸೋಜ, ಪ್ರಕಾಶ್ ಸುರತ್ಕಲ್, ಸಮದ್ ಪಕ್ಷಿಕೆರೆ, ಹರೀಶ್ ಚಂದ್ರ, ಅಬೆಲ್ ಡಿಸೋಜ, ನಾಗರಿಕ ಹೋರಾಟ ಸಮಿತಿ ಜೋಕಟ್ಟೆಯ ಅಬೂಬಕ್ಕರ್ ಬಾವಾ, ಲಾನ್ಸಿ ಜೋಕಟ್ಟೆ, ನಾಗರಿಕ ಸಮಿತಿ ಕುಳಾಯಿಯ ಗಂಗಾಧರ ಬಂಜನ್, ನಾಗರಿಕ ಸಮಿತಿ ಕಾನ ಇದರ ಮುಸ್ಬಾ ಕೃಷ್ಣಾಪುರ, ಐ ಮುಹಮ್ಮದ್, ಮಕ್ಸೂದ್ ಬಿ.ಕೆ., ಸ್ಥಳೀಯ ಪ್ರಮುಖರಾದ ರಾಜೇಶ್ ಶೆಟ್ಟಿ ಪಡ್ರೆ, ಪ್ರಮೋದ್ ಶೆಟ್ಟಿ, ರಶೀದ್ ಮುಕ್ಕ, ಅದ್ದಿ ಬೊಳ್ಳೂರು ನಿತಿನ್ ಬಂಗೇರ, ಶ್ರೀನಾಥ್‌ ಕುಲಾಲ್‌, ಜಯ ಕರ್ನಾಟಕ ಸಂಘಟನೆಯ ರಾಘವೇಂದ್ರ ರಾವ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !