ಜಲಧಾರೆ ಯೋಜನೆ ಅನುಷ್ಠಾನ: ಸಚಿವ ಕೃಷ್ಣಬೈರೇಗೌಡ

7
ಜನವಸತಿ ಪ್ರದೇಶಕ್ಕೆ ಪೈಪ್‌ಲೈನ್‌ ಮೂಲಕ ಶುದ್ಧ ಕುಡಿಯುವ ನೀರು

ಜಲಧಾರೆ ಯೋಜನೆ ಅನುಷ್ಠಾನ: ಸಚಿವ ಕೃಷ್ಣಬೈರೇಗೌಡ

Published:
Updated:
Deccan Herald

ಕೋಲಾರ: ‘ರಾಜ್ಯದ ಪ್ರತಿ ಜನವಸತಿ ಪ್ರದೇಶಕ್ಕೆ ಪೈಪ್‌ಲೈನ್‌ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಜಲಧಾರೆ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸುಮಾರು ₹ 53 ಸಾವಿರ ಕೋಟಿ ವೆಚ್ಚದಲ್ಲಿ ಜಲಧಾರೆ ಯೋಜನೆ ಕೈಗೊಳ್ಳಲಾಗುತ್ತಿದ್ದು, ಮುಂದಿನ 5 ವರ್ಷದಲ್ಲಿ ಎಲ್ಲಾ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಕೊಡುವ ಉದ್ದೇಶವಿದೆ’ ಎಂದು ಹೇಳಿದರು.

‘ಯೋಜನೆ ಜಾರಿಗೆ ವರ್ಷವಿಡೀ ನೀರಿನ ಮೂಲಗಳನ್ನು ಗುರುತಿಸಿ ನೀರೆತ್ತುವ ಯಂತ್ರ ಹಾಗೂ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಈ ವರ್ಷದ ಅಂತ್ಯದೊಳಗೆ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿ ಮಾಡುವ ಗುರಿ ಇದೆ. ಈಗಾಗಲೇ ಕೋಲಾರ ಜಿಲ್ಲೆ ಸೇರಿದಂತೆ 20 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿ ಘೋಷಿಸಲಾಗಿದೆ. ಉಳಿದ 10 ಜಿಲ್ಲೆಗಳಲ್ಲಿ ಗುರಿ ಸಾಧಿಸಲಾಗುವುದು’ ಎಂದರು.

‘ಸ್ವಚ್ಛ ಭಾರತ್ ಅಭಿಯಾನ ಹಮ್ಮಿಕೊಂಡಾಗ 70.38 ಲಕ್ಷ ಶೌಚಾಲಯ ನಿರ್ಮಿಸುವ ಗುರಿಯಿತ್ತು. ಈ ಪೈಕಿ ಈಗಾಗಲೇ 65.65 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಉಳಿದ 4.73 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ಯೋಜನೆ ಕಡೆಗಣಿಸಿತು: ‘ಜಿಲ್ಲೆಯಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಯೋಜನೆ ಜಾರಿಗೆ ಯುಪಿಎ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ದೇಶದಲ್ಲಿ ಸ್ಮಾರ್ಟ್‌ ಸಿಟಿ ಹಾಗೂ ಡಿಜಿಟಲ್ ದೇಶ ನಿರ್ಮಾಣ ಮಾಡಲಾಗುತ್ತದೆ ಎಂದು ಸಬೂಬು ಹೇಳುತ್ತಾ ಇಂಡಸ್ಟ್ರೀಯಲ್‌ ಕಾರಿಡಾರ್‌ ಯೋಜನೆ ಕಡೆಗಣಿಸಿತು’ ಎಂದು ಆರೋಪಿಸಿದರು.

ಕೈಗಾರಿಕೆಗಳು ನಿರ್ಣಾಯಕ: ‘ಯಾವುದೇ ರಾಷ್ಟ್ರದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ವಿವರಿಸಿದರು.

‘ಯೋಜನೆಗಾಗಿ ಈಗಾಗಲೇ ಸ್ವಲ್ಪ ಜಮೀನು ಪಡೆಯಲಾಗಿದ್ದು, ಶೀಘ್ರವೇ ಉಳಿದ ಜಮೀನು ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಅವಳಿ ಜಿಲ್ಲೆಗಳ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ ಹಾಗೂ ಜಿಲ್ಲೆಗಳು ಅಭಿವೃದ್ಧಿ ಹೊಂದುತ್ತವೆ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್, ಹೆಚ್ಚುವರಿ ಜಿಲ್ಲಾಧಿಕಾರಿ (ಪ್ರಭಾರ) ಶುಭಾ ಕಲ್ಯಾಣ್ ಹಾಜರಿದ್ದರು.

***

ಅಂಕಿ ಅಂಶ....
* ₹ 53 ಸಾವಿರ ಕೋಟಿ ಯೋಜನೆ ವೆಚ್ಚ
* 5 ವರ್ಷದಲ್ಲಿ ನೀರಿನ ಸೌಲಭ್ಯ
* 20 ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ
* 65.65 ಲಕ್ಷ ಶೌಚಾಲಯ ನಿರ್ಮಾಣ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !