ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ

7

ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ

Published:
Updated:
Deccan Herald

ಕೋಲಾರ: ತಾಲ್ಲೂಕು ಹಾಗೂ ನಗರದ ವಿವಿಧ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಸಂಘ ಸಂಸ್ಥೆಗಳ ಆವರಣದಲ್ಲಿ ಬುಧವಾರ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ತಾಲ್ಲೂಕಿನ ದಿಮ್ಮಚಾಮರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ದಲಿತ ಸೇನೆ ಯುವ ಘಟಕದ ಅಧ್ಯಕ್ಷ ಅಂಬರೀಷ್‌, ‘ಮಕ್ಕಳು ನೈತಿಕ ಮೌಲ್ಯ ಬೆಳೆಸಿಕೊಂಡು ಸತ್ಪ್ರಜೆಗಳಾಗಬೇಕು. ಜತೆಗೆ ದೇಶ ಸೇವೆಗೆ ಬದ್ಧರಾಗಬೇಕು. ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉನ್ನತ ಸಾಧನೆ ಮಾಡುವ ಮೂಲಕ ದೇಶದ ಗೌರವ ಹೆಚ್ಚಿಸಬೇಕು’ ಎಂದು ಕಿವಿಮಾತು ಹೇಳಿದರು.

ನಗರದ ಶಾಂತಿನಿಕೇತನ ವಿದ್ಯಾ ಸಂಸ್ಥೆಯ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ವೆಂಕಟಪತೆಪ್ಪ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಹೋರಾಟವನ್ನೇ ತಮ್ಮ ಉಸಿರಾಗಿಸಿಕೊಂಡು ಬ್ರಿಟೀಷರ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ ಮಹನೀಯರನ್ನು ಎಲ್ಲರೂ ಸ್ಮರಿಸಬೇಕು’ ಎಂದು ಹೇಳಿದರು.

ಜಾತೀಯತೆ ನಿರ್ಮೂಲನೆ: ಹೇಮಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಅಧ್ಯಯನ ಮಾಡಿ, ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು. ಸೇನೆ ಸೇರಿ ದೇಶ ರಕ್ಷಣೆಗೆ ಮುಂದಾಗಬೇಕು. ಜಾತೀಯತೆ ನಿರ್ಮೂಲನೆಗೆ ದೃಢ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

ಕಿರುಹೊತ್ತಿಗೆ ವಿತರಣೆ: ಜನಜಾಗೃತಿ ಮತದಾರರ ವೇದಿಕೆ ಅಧ್ಯಕ್ಷ ಮಂಜು ಗಾಂಧಿವನದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹನೀಯರಾದ ಕುದ್ಮಲ್ ರಂಗರಾವ್, ಬಿ.ಆರ್.ಅಂಬೇಡ್ಕರ್, ಜ್ಯೋತಿಬಾಪುಲೆ ಅವರ ಜೀವನ ಚರಿತ್ರೆ ಕುರಿತ ಕಿರುಹೊತ್ತಿಗೆಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ಹಣ್ಣು ವಿತರಣೆ: ಥಿಯೋ ಸಾಫಿಕಲ್ ಸೊಸೈಟಿ ಸದಸ್ಯರು ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಟಮಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಗರಸಭೆ ಸದಸ್ಯ ವೆಂಕಟೇಶ್‌ ಧ್ವಜಾರೋಹಣ ನೆರವೇರಿಸಿದರು.

ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಸಹಕಾರ ಒಕ್ಕೂಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಧ್ವಜಾರೋಹಣ ಮಾಡಿದರು.

ಪುರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗ್ರಾಮಸ್ಥರು ಲೇಖನಿ ಸಾಮಗ್ರಿ, ನೋಟ್‌ ಪುಸ್ತಕ ವಿತರಿಸಿದರು.

ರಾಜ್ಯ ಬೀಜ ನಿಗಮದ ಕಚೇರಿ, ಎಪಿಎಂಸಿ ಆವರಣ, ಹೊಗರಿಗೊಲ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಾರೋಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೂಲೂರು ಸರ್ಕಾರಿ ಪ್ರೌಢ ಶಾಲೆ, ಭಾರತ ಸೇವಾದಳ ಕಾರ್ಯಾಲಯ, ಜಿಲ್ಲಾ ಕಾಂಗ್ರೆಸ್ ಕಚೇರಿ, ಎಸ್‌ಡಿಸಿ ಕಾಲೇಜು, ಗೋಕುಲ ವಿದ್ಯಾ ಸಂಸ್ಥೆ, ರೋಟರಿ ಸಂಸ್ಥೆ, ರವಿ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಮೆರವಣಿಗೆ: ಮುಳಬಾಗಿಲು ತಾಲ್ಲೂಕಿನ ಬನಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮೀನಾರಾಯಣ ಧ್ವಜಾರೋಹಣ ಮಾಡಿದರು. ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಹಿಡಿದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !