₹100 ಕೋಟಿ ಪ್ಯಾಕೇಜ್‌ಗೆ ಬೇಡಿಕೆ

7
ಮಳೆಹಾನಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪರಿಶೀಲನೆ

₹100 ಕೋಟಿ ಪ್ಯಾಕೇಜ್‌ಗೆ ಬೇಡಿಕೆ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ಹಾನಿಗೀಡಾಗಿರುವ ರಸ್ತೆಗಳ ದುರಸ್ತಿ ಮತ್ತು ಸಾರ್ವಜನಿಕ ಆಸ್ತಿಗಳ ಮರು ನಿರ್ಮಾಣಕ್ಕೆ ₹ 100 ಕೋಟಿ ವಿಶೇಷ ಪ್ಯಾಕೇಜ್‌ ನೀಡುವಂತೆ ಕೋರಿ ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿಯವರಿಂದ ಮಳೆ ಹಾನಿ ಕುರಿತು ಮಾಹಿತಿ ಪಡೆದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಮೊದಲು ₹ 26 ಕೋಟಿ ನೆರವು ಕೇಳಲಾಗಿತ್ತು. ನಂತರ ₹ 50 ಕೋಟಿ ನೆರವಿಗೆ ಮನವಿ ಮಾಡಲಾಗಿತ್ತು. ಈಗ ಹಾನಿಯ ಪ್ರಮಾಣ ಹೆಚ್ಚಾಗಿದೆ. ಮಳೆಹಾನಿಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನೇರವಾಗಿ ಕಂಡಿದ್ದಾರೆ. ಆದ್ದರಿಂದ ₹ 100 ಕೋಟಿ ಮೊತ್ತದ ಪ್ಯಾಕೇಜ್‌ ನೀಡುವಂತೆ ಕೋರಲಾಗುವುದು’ ಎಂದರು.

ಮಂಗಳವಾರ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದ ಕಾರಣದಿಂದ ಉಪ್ಪಿನಂಗಡಿಯಲ್ಲಿ 110, ಬಂಟ್ವಾಳದಲ್ಲಿ 25 ಮತ್ತು ಉಳ್ಳಾಲದಲ್ಲಿ 10 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈಗ ನೆರೆ ಇಳಿಮುಖವಾಗಿದೆ. ಆದರೂ, ಸಕಲೇಶಪುರ, ಮೂಡಿಗೆರೆ, ಕಾರ್ಕಳ ಭಾಗದಲ್ಲಿ ಹೆಚ್ಚು ಮಳೆಯಾದರೆ ಮತ್ತೆ ಪ್ರವಾಹ ಬರಬಹುದು. ಈ ಕಾರಣದಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.

ಮಂಗಳೂರಿನ ಕಲ್ಲಾಪು, ಪೆರ್ಮನ್ನೂರು, ಜೆಪ್ಪಿನಮೊಗರು, ಕೊಟ್ಟಾರ ಚೌಕಿ, ಆದ್ಯಪಾಡಿ, ಮಳವೂರು, ಅಳಿಕೆ, ಬಿಜೈ ಆನೆಗುಂಡಿ, ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು, ಆಲಡ್ಕ, ಜಕ್ರಿಬೆಟ್ಟು ಬಸ್ತಿಪಡ್ಪು, ಸರಪಾಡಿ ನಾವೂರು, ಬೆಳ್ತಂಗಡಿ ತಾಲ್ಲೂಕಿನ ಶಿಶಿಲ, ಚಾರ್ಮಾಡಿ, ವೇಣೂರು, ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ, ಹೊಸಮಠ, ಶಿರಾಡಿ, ಬಾಳ್ತಿಲ, ಉದನೆ, ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯ, ಕಡಬ ತಾಲ್ಲೂಕಿನ ಹೊಸಮಠ, ನೂಜಿ, ಕುಂತೂರು, ಪೆರಾಬೆ, ಅಲಂಗಾರು, ಬಿಳಿನೆಲೆ, ಮೂಡುಬಿದಿರೆ ತಾಲ್ಲೂಕಿನ ವಾಲ್ಪಾಡಿ, ಮೂಡುಕೊಣಾಜೆ ಮತ್ತು ಮೂಲ್ಕಿಯ ಕೆಲವು ಭಾಗಗಳಲ್ಲಿ ಪ್ರವಾಹ ಸಾಧ್ಯತೆಯನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎರಡೂ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಪರಿಸ್ಥಿತಿ ಅವಲೋಕನದ ಜವಾಬ್ದಾರಿ ವಹಿಸಲಾಗಿದೆ. ಎಲ್ಲ ತಗ್ಗು ಪ್ರದೇಶಗಳಿಗೂ ಜಿಲ್ಲಾಡಳಿತದಿಂದ ನೇರವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನೆರೆಯಿಂದ ಮುಳುಗಿದ ಸೇತುವೆಗಳಲ್ಲಿ ವಾಹನ ಸಂಚರಿಸದಂತೆ ಬ್ಯಾರಿಕೇಡ್ ಅಳವಡಿಸಲು ಸೂಚಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !