ಗೆಳೆಯನ ಪುಣ್ಯಸ್ಮರಣೆಗೆ ಬಂದಿದ್ದ ವಾಜಪೇಯಿ

7
ಗುಳೇದಗುಡ್ಡದಲ್ಲಿ ಮೊದಲಬಾರಿಗೆ ತುಲಾಭಾರದ ಗೌರವ

ಗೆಳೆಯನ ಪುಣ್ಯಸ್ಮರಣೆಗೆ ಬಂದಿದ್ದ ವಾಜಪೇಯಿ

Published:
Updated:
Deccan Herald

ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಜನಸಂಘದ ಶಿಷ್ಟ ನೆಲೆ ಎನಿಸಿದ್ದ ಬಾಗಲಕೋಟೆ ಜಿಲ್ಲೆಯೊಂದಿಗೆ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ 80ರ ದಶಕದಿಂದಲೂ ನಂಟು ಹೊಂದಿದ್ದರು.

ವಾಜಪೇಯಿ ಅವರಿಗೆ ಮೊದಲ ಬಾರಿಗೆ ಗುಳೇದಗುಡ್ದ ಪಟ್ಟಣದಲ್ಲಿ ತುಲಾಭಾರ ಮಾಡಲಾಗಿತ್ತು. ಆತ್ಮೀಯ ಗೆಳೆಯನ ಮೊದಲ ವರ್ಷದ ಪುಣ್ಯಸ್ಮರಣೆ, ಪಕ್ಷದ ಪರ ಪ್ರಚಾರ ಹೀಗೆ ಬೇರೆ ಬೇರೆ ಕಾರಣಗಳಿಂದ ಕೃಷ್ಣಾ ತೀರಕ್ಕೆ ಬಂದಿದ್ದರು. ಅಜಾತಶತ್ರುವಿನೊಂದಿಗಿನ ಒಡನಾಟದ ನೆನಹುಗಳು ಮೊಗೆದಷ್ಟೂ ಹೊಳಹು ಪಡೆಯುತ್ತವೆ.

ಗೆಳೆಯನ ಪುಣ್ಯಸ್ಮರಣೆಗೆ ಬಂದಿದ್ದರು:

ಜನಸಂಘದ ಹಿರಿಯರಾದ ಗಣಪತಿರಾವ್ ಡಿ.ಕಾಂಬಳೆ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 1981ರ ಆಗಸ್ಟ್ 21ರಂದು ವಾಜಪೇಯಿ ಮೊದಲ ಬಾರಿಗೆ ಬಾಗಲಕೋಟೆಗೆ ಬಂದಿದ್ದರು. ಆಗ ವಾಜಪೇಯಿ ಸಂಸದರಾಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಿಂಡಲಗಾ, ವಿಜಯಪುರ ಜೈಲಿನಲ್ಲಿದ್ದ ಕಾಂಬಳೆ, ಮುಂದೆ ಬೆಂಗಳೂರು ಜೈಲಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ ಅವರೊಂದಿಗೆ ಆತ್ಮೀಯ ಒಡನಾಟ ಬೆಳೆದಿತ್ತು. 

ಸಂಘದ ನೆಲೆ ಹರವುತ್ತಲೇ ಜನಸಂಘದಿಂದ 1978ರ ವಿಧಾನಸಭಾ ಚುನಾವಣೆಯಲ್ಲಿ ಜನಸಂಘದಿಂದ ಸ್ಪರ್ಧಿಸಿ ಗಣಪತರಾವ್ ಕಾಂಬಳೆ ಸೋಲು ಕಂಡಿದ್ದ ಅವರು, 1980ರಲ್ಲಿ ನಿಧನರಾಗಿದ್ದರು. ಗೆಳೆಯನ ಅಂತ್ಯಕ್ರಿಯೆಗೆ ಬರಲಾಗದಿದ್ದರೂ ಮೊದಲ ಪುಣ್ಯತಿಥಿಗೆ ಮನೆಗೆ ಬಂದಿದ್ದ ವಾಜಪೇಯಿ, ಶ್ರಾದ್ಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ’ಅಂದು 45 ನಿಮಿಷ ಕಾಲ ನಮ್ಮೊಂದಿಗೆ ಕಾಲ ಕಳೆದು, ಹಾಲು ಕುಡಿದು ತೆರಳಿದ್ದರು’ ಎಂದು ಆ ದಿನಗಳನ್ನು ಗಣಪತಿರಾವ್ ಸಹೋದರ ವಾಯುಪಡೆ ನಿವೃತ್ತ ಯೋಧ ವಿಠ್ಠಲ ಕಾಂಬಳೆ ನೆನಪಿಸಿಕೊಳ್ಳುತ್ತಾರೆ.

‘ಇಲ್ಲಿನ ವಲಭಬಾಯಿ ಚೌಕದಲ್ಲಿರುವ ನಮ್ಮ ಮನೆ ಸಗಣಿಯಲ್ಲಿ ಸಾರಿಸುವ ನೆಲ ಹೊಂದಿತ್ತು. ಅಂತಹ ದೊಡ್ಡ ವ್ಯಕ್ತಿ ಮನೆಗೆ ಬರುತ್ತಾರೆ ಎಂದು ರಾತ್ರೋ ರಾತ್ರಿ ಕರಿಕಲ್ಲು (ಪರಸಿ) ತರಿಸಿ ನೆಲಕ್ಕೆ ಹೊಂದಿಸಿದ್ದೆನು. ಆಗ ₹900 ಖರ್ಚಾಗಿತ್ತು’ ಎಂದು ವಿಠ್ಠಲ ಹೇಳುತ್ತಾರೆ.

ಅಣ್ಣ ಗಣಪತರಾವ್ ಭಾವಚಿತ್ರದ ಮೇಲೆ ’ಸಾಯೋದಿದ್ರೆ ಹೀಗೆ ಸಾಯಬೇಕು. ಎಲ್ಲರೂ ಸದಾ ನೆನಪಿಸಿಕೊಳ್ಳುವಂತೆ’ ಎಂಬ ಮಾತನ್ನು ಹಿಂದಿಯಲ್ಲಿ ಬರೆಸಿದ್ದೆವು. ಅದನ್ನು ಓದಿದ ವಾಜಪೇಯಿ, ಆ ಸಾಲು ಬರೆದ ಕವಿಯ ಹೆಸರು ಉಲ್ಲೇಖಿಸಿ, ಅಣ್ಣನ ವ್ಯಕ್ತಿತ್ವವನ್ನು ಆ ಸಾಲುಗಳಲ್ಲಿ ಹಿಡಿದಿಟ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಸ್ಮರಿಸುತ್ತಾರೆ.

ತುಲಾಭಾರ ಮಾಡಿದ್ದೆವು:

’1982ರಲ್ಲಿ ಬಿಜೆಪಿ ಅಂದಿನ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಂ.ಹುಂಡೇಕಾರ ಅವರೊಂದಿಗೆ ಗುಳೇದಗುಡ್ಡಕ್ಕೆ ಬಂದಿದ್ದ ವಾಜಪೇಯಿ ಅವರಿಗೆ ಹಿರಿಯರು ಸೇರಿ ತುಲಾಭಾರ ಮಾಡಿದ್ದೆವು. ಒಂದು ರೂಪಾಯಿ ನಾಣ್ಯಗಳನ್ನು ಒಟ್ಟುಗೂಡಿಸಿ ಪಟ್ಟಣದ ಭಂಡಾರಿ ಕಾಲೇಜು ಆವರಣದಲ್ಲಿ ತುಲಾಭಾರ ಮಾಡಲಾಗಿತ್ತು. ಆ ಹಣ ₹8400 ಆಗಿತ್ತು. ಅದರ ಜೊತೆಗೆ ₹51 ಸಾವಿರ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದೆವು’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ನೆನಪಿಸಿಕೊಳ್ಳುತ್ತಾರೆ.

ಹಿರಿಯರಾದ ಘನಶ್ಯಾಮ್‌ದಾಸ್ ರಾಠಿ, ವಸಂತ ಸಾ, ರಾಮ್‌ವಿಲಾಸ್ ದೂತ್, ರಂಗಪ್ಪ ಶೇಬಿನಕಟ್ಟಿ, ಬೀರಣ್ಣ ರಾಠಿ, ಮಧೂಸೂಧನ ರಾಮಘಡ್ ಸೇರಿದಂತೆ ಪಟ್ಟಣದ ಹಿರಿಯರು ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದರು.

’ಕಾರಿನಲ್ಲಿ ಗುಳೇದಗುಡ್ಡಕ್ಕೆ ಬಂದಿದ್ದ ವಾಜಪೇಯಿ ಕಾರ್ಯಕ್ರಮ ಮುಗಿದ ನಂತರ ಎಲ್ಲರೊಂದಿಗೆ ಕುಳಿತು ಊಟ ಮಾಡಿ ತೆರಳಿದ್ದರು’ ಎಂದು ಘನಶ್ಯಾಮದಾಸ್‌ ಪುತ್ರ ಸಂಪತ್‌ದಾಸ್ ರಾಠಿ ಹೇಳುತ್ತಾರೆ, 1983ರಲ್ಲಿ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಬನ್ನಿ ಪರ ಚುನಾವಣಾ ಪ್ರಚಾರಕ್ಕೆ ಮತ್ತೊಮ್ಮೆ ಬಂದಿದ್ದರು. ಆ ಚುನಾವಣೆಯಲ್ಲಿ ಬನ್ನಿ ಶಾಸಕರಾಗಿ ಆಯ್ಕೆಯಾಗಿದ್ದರು.

’ಮೋಡಿ ಮಾಡುವ ಮಾತು, ಕಲ್ಮಶವಿಲ್ಲದ ಹೃದಯ, ವೈರತ್ವವೇ ಗೊತ್ತಿಲ್ಲದ ವ್ಯಕ್ತಿತ್ವ’ ಎಂದು ವಾಜಪೇಯಿ ಅವರೊಂದಿಗೆ ಒಡನಾಡಿರುವ ಮಾಜಿ ಶಾಸಕ ಪಿ.ಎಚ್.ಪೂಜಾರ ಹೇಳುತ್ತಾರೆ.

’ಈಗ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕೇಳಲು ಹೋಗುವಂತೆ ಹಿಂದೆ ವಾಜಪೇಯಿ ಮಾತು ಕೇಳಲು ಅವರ ಹಿಂದೆಯೇ ಓಡಾಟ ಮಾಡುತ್ತಿದ್ದೆವು. ಸೂಜಿಗಲ್ಲಿನಂತೆ ಸೆಳೆಯುವ ನಾಯಕತ್ವದ ಗುಣ ಹೊಂದಿದ್ದರು’ ಎನ್ನುವ ಪೂಜಾರ, 1982, 1984 ಹಾಗೂ 1994ರಲ್ಲಿ ವಾಜಪೇಯಿ ಬಾಗಲಕೋಟೆಗೆ ಬಂದಾಗ ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಬಿಚ್ಚಿಡುತ್ತಾರೆ. ಕರೆದು ಪಕ್ಕದಲ್ಲಿ ಕೂರಿಸಿಕೊಂಡು ಊಟ ಮಾಡಿಸಿ, ಬೆನ್ನು ತಟ್ಟುತ್ತಿದ್ದ ವಾತ್ಸಲ್ಯ ಭಾವವನ್ನು ನೆನೆಯುತ್ತಾರೆ.

’1990ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪಿ.ಎಚ್.ಪೂಜಾರ ಪರ ಪ್ರಚಾರಕ್ಕೆ ಬಂದಿದ್ದರು. ಆಗ ಅವರ ವ್ಯಕ್ತಿತ್ವದ ಪರಿಚಯ ಆಗಿತ್ತು’ ಎಂದು ಶಾಸಕ ವೀರಣ್ಣ ಚರಂತಿಮಠ ಸ್ಮರಿಸುತ್ತಾರೆ. ಮಾಜಿ ಶಾಸಕ ನಾರಾಯಣಸಾ ಭಾಂಡಗೆ ಕೂಡ ವಾಜಪೇಯಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಪಕ್ಷ ಸಂಘಟನೆಗಾಗಿ ಜಿಲ್ಲೆಗೆ ಬಂದಾಗಲೆಲ್ಲಾ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !