ವಾಜಪೇಯಿ ಅಗಲಿಕೆ ಅರಗಿಸಿಕೊಳ್ಳಲು ಕಷ್ಟ

7
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದಲ್ಲಿ ಹೋರಾಟಗಾರರೊಂದಿಗೆ ಬಂಧಿಯಾಗಿದ್ದ ಆರ್‌ಎಸ್‌ಎಸ್‌ ಮುಖಂಡ ಕೃಷ್ಣ ಅವರ ಮನದಾಳದ ಮಾತು

ವಾಜಪೇಯಿ ಅಗಲಿಕೆ ಅರಗಿಸಿಕೊಳ್ಳಲು ಕಷ್ಟ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದಾಗ ಪತ್ನಿ ಗರ್ಭಿಣಿ. ಒಂದು ದಿನ ಬಾಣಂತಿ ಹೆಂಡತಿ ಹೆಣ್ಣು ಶಿಶುವಿನೊಂದಿಗೆ ಜೈಲಿನ ವರೆಗೆ ಮಗು ತೋರಿಸಲು ಬಂದಾಗ ನಮ್ಮೊಂದಿಗೆ ಜೈಲಲ್ಲಿದ್ದ ವಾಜಪೇಯಿ ಅವರು ನಮ್ಮ ಮಗಳನ್ನು ಎತ್ತಿ ಮುದ್ದಾಡಿದ್ದರು. ಅದು ನನ್ನ ಜೀವಮಾನದ ಮರೆಯಾಗದ ಕ್ಷಣ’

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯ ಈ ಹೊತ್ತಿನಲ್ಲಿ ಅವರೊಂದಿಗಿನ ಹಳೆ ಬಾಂಧವ್ಯವನ್ನು ಈ ರೀತಿ ಮೆಲುಕು ಹಾಕಿದವರು ನಗರದ ನಿವಾಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಬಿ.ಎಂ.ಕೃಷ್ಣ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ನಡೆಸಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಭಾಗದ 13 ಜನರನ್ನು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಆ ಪೈಕಿ ಕೃಷ್ಣ ಅವರು ಇದ್ದರು. ಇದೇ ವೇಳೆ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಸೇರಿದಂತೆ ಅನೇಕ ಗಣ್ಯರು ಇದೇ ಜೈಲಿನಲ್ಲಿ ಬಂಧಿಯಾಗಿದ್ದರು. ಹೀಗಾಗಿ ಜೈಲಿನ ವಾಸ್ತವ್ಯದಲ್ಲಿ ಕೃಷ್ಣ ಅವರಿಗೆ ವಾಜಪೇಯಿ ಅವರ ಸಾಂಗತ್ಯ ದೊರೆತಿತ್ತು.

‘ಜೈಲಿನಲ್ಲಿ ಅನೌಪಚಾರಿಕವಾಗಿ ನಡೆಯುತ್ತಿದ್ದ ಸಭೆಗಳಲ್ಲಿ ಅನೇಕ ದೊಡ್ಡ ದೊಡ್ಡ ಹೋರಾಟಗಾರರ ಭಾಷಣ ಕೇಳುವುದು ನಮ್ಮ ಸೌಭಾಗ್ಯವಾಗಿತ್ತು. ಅದರಲ್ಲೂ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ಕುರಿತು ಹಾಸ್ಯ, ಗಾಂಭೀರ್ಯ ಮಿಶ್ರಿತ ಮಾತುಗಳನ್ನು ಕೇಳುವುದೇ ಸೊಗಸು’ ಎನ್ನುತ್ತಾರೆ ಕೃಷ್ಣ.

‘ಜೈಲಿನಲ್ಲಿರುವಾಗ ಒಂದು ಬಾರಿ ವಾಜಪೇಯಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆಗ ಅವರನ್ನು ಉಪಚರಿಸಲು ನಾನು ಆಸ್ಪತ್ರೆಯಲ್ಲಿದ್ದೆ. ಅದು ನನ್ನ ಅದೃಷ್ಟ ಎಂದು ಭಾವಿಸಿಕೊಂಡಿದ್ದೆ’ ಎಂದು ಹಳೆಯ ನೆನಪು ಸ್ಮರಿಸಿಕೊಂಡರು.

‘ಆರ್ಎಸ್‍ಎಸ್ ಒಡನಾಟದಿಂದಾಗಿ ನನಗೆ ವಾಜಪೇಯಿ ಅವರ ಪರಿಚಯವಾಯಿತು. ಅನೇಕ ಕಾರ್ಯಕ್ರಮಗಳಲ್ಲಿ ಸೌಜನ್ಯದ ಮುಗುಳ್ನಗೆಗೆ ಸೀಮಿತವಾಗಿದ್ದ ನಮ್ಮ ಪರಿಚಯ ಜೈಲಿನಲ್ಲಿದ್ದಾಗ ಗಾಢವಾಯಿತು. ಜೈಲಿನಿಂದ ಬಿಡುಗಡೆಯಾದ ನಂತರ ಮತ್ತು ಪ್ರಧಾನಿಯಾಗಿದ್ದ ಅವಧಿಗಳಲ್ಲಿ ಸಹ ಅನೇಕ ಬಾರಿ ದೆಹಲಿಯಲ್ಲಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದೆ’ ಎಂದು ಹೇಳುತ್ತಾರೆ.

‘ನನ್ನ ಹೆಸರನ್ನು ನೆನಪಿಟ್ಟುಕೊಂಡಿದ್ದ ವಾಜಪೇಯಿ ಅವರು ಪ್ರತಿ ಭೇಟಿಯಲ್ಲೂ ‘ಕೃಷ್ಣಾ ಜೀ ಆಯಿಯೇ’ ಎಂದು ಆಪ್ತತೆಯಿಂದ ಮಾತನಾಡಿಸುತ್ತಿದ್ದರು. ಮಗಳು ಬೆಳೆದು ನಿಂತು ಉನ್ನತ ವ್ಯಾಸಂಗಕ್ಕಾಗಿ ದೆಹಲಿಯಲ್ಲಿ ಇರಬೇಕಾಗಿ ಬಂದಾಗ ಅವರೇ ಖುದ್ದಾಗಿ ಕಾಳಜಿ ವಹಿಸಿ ಆಕೆಗೆ ವಸತಿ ಸೌಕರ್ಯ ಕಲ್ಪಿಸಿಕೊಟ್ಟಿದ್ದರು. ಜತೆಗೆ ಆಗಾಗ ಆಕೆಯ ಓದು, ಕೆಲಸದ ಬಗ್ಗೆ ವಿಚಾರಿಸುತ್ತಿದ್ದ ವಿಶಾಲ ಹೃದಯಿ ಅವರು. ಅವರು ಇನ್ನು ಬರೀ ನೆನಪು ಮಾತ್ರ ಎನ್ನುವುದು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಹನಿಗಣ್ಣಾದರು ಕೃಷ್ಣ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !