ಅಜಾತಶತ್ರುವಿಗೆ ಎಲ್ಲೆಡೆ ಅಶ್ರುತರ್ಪಣ

7

ಅಜಾತಶತ್ರುವಿಗೆ ಎಲ್ಲೆಡೆ ಅಶ್ರುತರ್ಪಣ

Published:
Updated:
Deccan Herald

ಚಿಕ್ಕಬಳ್ಳಾಪುರ: ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಜಿಲ್ಲೆಯಾದ್ಯಂತ ಶುಕ್ರವಾರ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಶ್ರದ್ಧಾಂಜಲಿ ಸಭೆಗಳ ಮೂಲಕ ಕಂಬನಿ ಮಿಡಿದು, ಅಗಲಿದವರ ಆತ್ಮಕ್ಕೆ ಶಾಂತಿ ಕೋರಿದರು.

ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ‘ದೇಶ ಕಂಡ ಅಪ್ರತಿಮ ರಾಜಕೀಯ ಮುತ್ಸದಿಯಾಗಿದ್ದ ವಾಜಪೇಯಿ ಅವರು ಭೌತಿಕವಾಗಿ ನಮ್ಮಿಂದ ದೂರವಾದರೂ ಅವರು ಬದುಕಿದ ದಾರಿ ಪ್ರತಿಯೊಬ್ಬರಿಗೆ ಆದರ್ಶವಾಗಿದೆ’ ಎಂದು ಹೇಳಿದರು.

‘ಅಂದಿನ ಜನಸಂಘ ಹಾಗೂ ಈಗಿನ ಬಿಜೆಪಿ ಪಕ್ಷದ ಪ್ರಮುಖ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ವಾಜಪೇಯಿ ಅವರು ಸರ್ವ ಪಕ್ಷಗಳ ನಾಯಕರೊಂದಿಗೆ ರಾಜಕೀಯದಾಚೆಗೆ ಉತ್ತಮ ಭಾಂಧವ್ಯ ಹೊಂದುವ ಮೂಲಕ ಎಲ್ಲರಿಂದಲೂ ಅಜಾತಶತ್ರು ಎಂದು ಕರೆಯಿಸಿಕೊಂಡಿದ್ದರು. ಪ್ರಧಾನಿಯಾಗಿದ್ದ ವೇಳೆ ಅವರು ತೆಗೆದುಕೊಂಡ ಹಲವು ದಿಟ್ಟ ನಿರ್ಧಾರಗಳು ದೇಶದ ರಾಜಕೀಯ ಚರಿತ್ರೆಯ ಮೈಲುಗಲ್ಲುಗಳಾಗಿವೆ’ ಎಂದು ಸ್ಮರಿಸಿಕೊಂಡರು.

‘ಅವರಿಲ್ಲದೆ ಇಡೀ ರಾಜಕೀಯ ವ್ಯವಸ್ಥೆ ಬಡವಾಗಿದೆ. ದೇಶದ ರಾಜಕೀಯದಲ್ಲಿ ಮುಂದೆ ವಾಜಪೇಯಿ ಅವರಂತಹ ಮೇಧಾವಿ ಹುಟ್ಟಿ ಬರಲು ಸಾಧ್ಯವಿಲ್ಲ. ಕವಿ ಹೃದಯಿ, ದಿಟ್ಟ ಆಡಳಿತಗಾರ, ಅತ್ಯಂತ ಸ್ನೇಹಿಮಯಿ ನಾಯಕನನ್ನು ಕಳೆದುಕೊಂಡು ದೇಶ ಇಂದು ಅಕ್ಷರಶಃ ಅನಾಥವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಸುಬ್ಬರಾಜು, ನಾಗಭೂಷಣ್, ಕಾರ್ಯದರ್ಶಿ ಕಲಾ ನಾಗರಾಜ್, ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ, ಮಂಡಲ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮೈಲಪ್ಪನಹಳ್ಳಿ ಕೃಷ್ಣಮೂರ್ತಿ, ಮುಖಂಡರಾದ ಬೈರೇಗೌಡ, ಪ್ರೇಮಲೀಲಾ ವೆಂಕಟೇಶ್, ನಾರಾಯಣಸ್ವಾಮಿ, ಗೋಕುಲ ನಂಜಪ್ಪ, ಎಚ್‌.ಕೆ.ಲಕ್ಷ್ಮಿಪತಿ ಹಾಜರಿದ್ದರು.

ಕಸಾಪ ಕಂಬನಿ

ವಾಜಪೇಯಿ ಅವರ ನಿಧನಕ್ಕೆ ನಗರದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡ ಭದ್ರಾಚಲಂ, ‘ವಾಜಪೇಯಿ ಅವರು ದೇಶ ಕಂಡ ಪ್ರಾಮಾಣಿಕ ರಾಜಕಾರಣಿ. ಒಳ್ಳೆಯ ಆಡಳಿತದ ಮೂಲಕ ರಾಜಕೀಯ ಜೀವನದಲ್ಲಿ ಅಜಾತ ಶತ್ರುವಾಗಿ ಉಳಿದ ಅವರ ವ್ಯಕ್ತಿತ್ವ ಅವರ ದಕ್ಷತೆಯನ್ನು ತೋರಿಸುತ್ತದೆ’ ಎಂದರು.

ಸಾಹಿತಿ ಎಸ್.ಶಿವರಾಂ ಮಾತನಾಡಿ, ‘ವಾಜಪೇಯಿ ಅವರದು ಹೋರಾಟದ ಬದುಕು. ದೇಶದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ರಾಜಕಾರಣಿ ವಾಜಪೇಯಿ ಅವರಲ್ಲೊಬ್ಬ ಸಾಹಿತಿ, ಚಿಂತಕ, ಕವಿ ಇದ್ದ. ಹೀಗಾಗಿಯೇ ಅವರು ಅನೇಕ ಪದ್ಯಗಳನ್ನು, ಕೃತಿಗಳನ್ನು ರಚಿಸಲು ಸಾಧ್ಯವಾಯಿತು’ ಎಂದು ಹೇಳಿದರು.

ಜಿಲ್ಲಾ ಘಟಕದ ಸದಸ್ಯ ಎಸ್.ಎನ್.ಅಮೃತ್‌ ಕುಮಾರ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್‌, ಸಾಹಿತಿಗಳಾದ ಸರಸಮ್ಮ, ಕನ್ನಡಪರ ಹೋರಾಟಗಾರ ಡಾಂಬು ಶ್ರೀನಿವಾಸ್, ಕಸಾಪ ಪ್ರಧಾನ ಕಾರ್ಯದರ್ಶಿ ಪ್ರವೀಣ್, ಪದಾಧಿಕಾರಿಗಳಾದ ಮಂಜುನಾಥ್, ವೆಂಕಟೇಶ್, ಆನಂದಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !