ಡಿಸಿಸಿ ಬ್ಯಾಂಕ್‌ಗೆ ₹ 6.39 ಕೋಟಿ ಲಾಭ

7

ಡಿಸಿಸಿ ಬ್ಯಾಂಕ್‌ಗೆ ₹ 6.39 ಕೋಟಿ ಲಾಭ

Published:
Updated:
Deccan Herald

ಕೋಲಾರ: ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 6.39 ಕೋಟಿ ಲಾಭ ಗಳಿಸಿದ್ದು, ರಾಜ್ಯದ ಸಹಕಾರಿ ವಲಯದ ಬ್ಯಾಂಕ್‌ಗಳ ಪೈಕಿ ಪ್ರಥಮ ಸ್ಥಾನ ಪಡೆದಿದೆ.

ಈ ಹಿಂದೆ ₹ 44 ಕೋಟಿ ಇದ್ದ ಬ್ಯಾಂಕ್‌ನ ನಷ್ಟದ ಬಾಬ್ತು ಈಗ ₹ 3.95 ಕೋಟಿಗೆ ಇಳಿದಿದೆ. ಹಿಂದಿನ ವೈಭವದತ್ತ ದಾಪುಗಾಲಿಟ್ಟಿರುವ ಬ್ಯಾಂಕ್‌ ರೈತರು ಮತ್ತು ಮಹಿಳೆಯರ ಮನೆ ಬಾಗಿಲಿಗೆ ಸಾಲ ಸೌಲಭ್ಯ ಕಲ್ಪಿಸುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದರಿಂದ ಬ್ಯಾಂಕ್‌ನ ವ್ಯಾಪ್ತಿಯ 16,280 ರೈತರ ₹ 75 ಕೋಟಿ ಸಾಲ ಮನ್ನಾವಾಗಿತ್ತು. ಈಗಿನ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಘೋಷಣೆಯಾಗಿದ್ದು, ಇದರಿಂದ 25,127 ರೈತರ ಸುಮಾರು ₹ 202 ಕೋಟಿ ಸಾಲ ಮನ್ನಾವಾಗಲಿದೆ.

₹ 864 ಕೋಟಿ ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕ್ ಅವಿಭಜಿತ ಕೋಲಾರ ಜಿಲ್ಲೆಯ ರೈತರು, ಮಹಿಳಾ ಸ್ವಸಹಾಯ ಸಂಘಗಳಿಗೆ ₹ 985 ಕೋಟಿ ಸಾಲ ನೀಡಿದೆ. ಬ್ಯಾಂಕ್ ಕಟ್ಟಡ ಹಾಗೂ ಶಾಖೆಗಳು ನವೀಕರಣಗೊಂಡಿವೆ. ಬ್ಯಾಂಕ್‌ನ ಸಂಪೂರ್ಣ ವ್ಯವಹಾರ ಗಣಕೀಕೃತವಾಗಿದೆ.

ಶೇ 98ರಷ್ಟು ಪ್ರಗತಿ: ಸರ್ಕಾರದಲ್ಲಿ ₹ 53 ಕೋಟಿ ಭದ್ರತಾ ಠೇವಣಿ ಹೊಂದಿರುವ ಬ್ಯಾಂಕ್ ಆರ್‌ಬಿಐ ಮತ್ತು ಅಫೆಕ್ಸ್ ಬ್ಯಾಂಕ್‌ನಿಂದ ಹಣಕಾಸು ನೆರವು ಪಡೆಯುವ ಘನತೆ ಹೆಚ್ಚಿಸಿಕೊಂಡಿದೆ. ಬ್ಯಾಂಕ್‌ನ ನಿಷ್ಕ್ರಿಯ ಆಸ್ತಿ ಮೌಲ್ಯ (ಎನ್‌ಪಿಎ) ಶೇ 92ರಿಂದ ಶೇ 3.8ಕ್ಕೆ ಇಳಿದಿದೆ. ಸಾಲ ಮರುಪಾವತಿಯಲ್ಲಿ ಶೇ 98ರಷ್ಟು ಪ್ರಗತಿ ಸಾಧನೆಯಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !