ಬಿಜೆಪಿ: ಸಂಪೂರ್ಣ ಹೊಸಬರಿಗೆ ಮನ್ನಣೆ!

7
ಕಾಂಗ್ರೆಸ್‌ನಿಂದ ನಾಲ್ವರು ಹಳಬರ ಸ್ಪರ್ಧೆ; 25 ಸ್ಥಾನಗಳಲ್ಲಿ ಜೆಡಿಎಸ್ ಉಮೇದುವಾರಿಕೆ

ಬಿಜೆಪಿ: ಸಂಪೂರ್ಣ ಹೊಸಬರಿಗೆ ಮನ್ನಣೆ!

Published:
Updated:
Deccan Herald

ಬಾಗಲಕೋಟೆ: ಸ್ಥಳೀಯ ಸಂಸ್ಥೆ ಚುನಾವಣೆ ಉಮೇದುವಾರಿಕೆಗೆ ಕೊನೆಯ ದಿನವಾದ ಶನಿವಾರ ಜಿಲ್ಲೆಯಾದ್ಯಂತ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಂಡಿತ್ತು. ಟಿಕೆಟ್ ವಂಚಿತರ ಬಂಡಾಯ ನಿಭಾಯಿಸಲು ರಾಜಕೀಯ ಪಕ್ಷಗಳು ’ಬಿ’ಫಾರಂ ಕೊನೆಯ ದಿನ ನೀಡಿದ್ದು, ಅಭ್ಯರ್ಥಿಗಳ ಬಗ್ಗೆ ಇದ್ದ ಕುತೂಹಲವೂ ಕೊನೆಯ ದಿನ ಅಂತ್ಯಗೊಂಡಿತು.

ಕೆಲವು ಕಡೆ ಮೀಸಲಾತಿ ಬದಲಾವಣೆಯಿಂದಾಗಿ ವಾರ್ಡ್‌ಗಳು ಕೈ ತಪ್ಪಿ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶವನ್ನು ಕಿತ್ತುಕೊಂಡರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಬಿದ್ದ ವಾರ್ಡ್‌ವಾರು ಮತಗಳ ಲೆಕ್ಕಾಚಾರ, ಜಾತಿ, ‍ಪಕ್ಷನಿಷ್ಠೆ, ಮುಖಂಡರ ಒಲವು ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕಮಲದಲ್ಲಿ ಪೂರ್ಣ ಹೊಸತನ:  ಹಿಂದಿನ ಅವಧಿಯ ಯಾವುದೇ ಸದಸ್ಯರಿಗೂ ಟಿಕೆಟ್ ನೀಡದೇ 35 ಸ್ಥಾನಗಳಿಗೂ ಹೊಸಬರನ್ನೇ ಆಯ್ಕೆ ಮಾಡಿದೆ. ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಬಿಜೆಪಿಯ ದ್ಯಾವಪ್ಪ ರಾಕುಂಪಿ, ಶಂಕರಗೌಡ ಪಾಟೀಲ, ಬಸವರಾಜ ಕಟಗೇರಿ, ಸುರೇಶ ಕುದುರಿಕಾರ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದೆ.

ಕಾಂಗ್ರೆಸ್– ನಾಲ್ವರು ಹಳಬರಿಗೆ ಮಣೆ:  ಕಾಂಗ್ರೆಸ್ ಕೂಡ ಹೊಸ ಮುಖಗಳಿಗೆ ಮಣೆ ಹಾಕಿದ್ದರೂ ಹಿಂದಿನ ಅವಧಿಯಲ್ಲಿ ಸದಸ್ಯರಾಗಿದ್ದ ನಾಲ್ವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಗೋವಿಂದ ಬಳ್ಳಾರಿ, ಶಫೀಕ್  ಜಮಾದಾರ, ತಿಪ್ಪಣ್ಣ ನೀಲನಾಯಕ ಹಾಗೂ ಹಾಜಿಸಾಬ್ ದಂಡಿನ  ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಚೆನ್ನವೀರ ಅಂಗಡಿ ಈಗ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಈ ಹಿಂದೆ ಎರಡು ಬಾರಿ ಆಯ್ಕೆಯಾಗಿದ್ದ ಹಣಮಂತ ರಾಕುಂಪಿ ಈ ಬಾರಿ ಟಿಕೆಟ್ ತಪ್ಪಿಸಿಕೊಂಡಿದ್ದಾರೆ.

ಘಟಾನುಘಟಿಗಳ ಸಂಬಂಧಿಗಳು:  ಬಾಗಲಕೋಟೆ ನಗರಸಭೆ 35 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ನಡೆಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲಾ ಸ್ಥಾನಗಳಲ್ಲೂ ಸ್ಪರ್ಧಿಸಿವೆ. ಕಾಂಗ್ರೆಸ್‌ನೊಂದಿಗಿನ ದೋಸ್ತಿಗೆ ಇಲ್ಲಿ ತಲಾಖ್ ಹೇಳಿರುವ ಜೆಡಿಎಸ್, 25 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

ಈ ಬಾರಿ ಘಟಾನುಘಟಿಗಳ ಸಂಬಂಧಿಗಳು ಕಣದಲ್ಲಿದ್ದು, ಅದೃಷ್ಟ ಪಣಕ್ಕಿಟ್ಟಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವವರಲ್ಲಿ  ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸಹೋದರ ಬಸವರಾಜ ತಪಶೆಟ್ಟಿ, ಪತ್ರಕರ್ತ ಸುರೇಶ ಮಜ್ಜಗಿ ಪತ್ನಿ ಶಶಿಕಲಾ, ಬಿಟಿಟಿಎ ಮಾಜಿ ಸದಸ್ಯ ಕೇಶವ ಭಜಂತ್ರಿ ಪತ್ನಿ ಜ್ಯೋತಿ, ಶ್ರೀನಿವಾಸ ಸಜ್ಜನ, ಅನಿತಾ ಸರೋದೆ, ಬಸವರಾಜ ಅವರಾದಿ, ನಾಗರಾಜ ಕಾಚಟ್ಟಿ, ರವಿ ದಾಮಜಿ, ಶಿವಬಸು ಬಳ್ಳಾರಿ, ಶಿವು ಜಾಲಗಾರ, ಶೋಭಾ ವೆಂಕಟೇಶ ರಾವ್, ಭುವನೇಶ್ವರಿ ಕುಪ್ಪಸ್ಥ ಪ್ರಮುಖರು.

ಕಾಂಗ್ರೆಸ್‌ನಿಂದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ ಸಹೋದರಿ ಶಶಿಕಲಾ ಚಂದ್ರಶೇಖರ ಬೆಳಗಲ್, ಚನ್ನವೀರ ಅಂಗಡಿ, ಭರಮು ಪೂಜಾರಿ, ಜಯಶ್ರೀ ಅಮರಾವತಿ, ಉಮರ್‌ ಶೇಖ್, ವಿಜಯಲಕ್ಷ್ಮೀ ಕುನ್ನಾಳ, ಅಶ್ವಿನಿ ಅಶೋಕ ಕುಲಕರ್ಣಿ, ಜೆಡಿಎಸ್‌ನಿಂದ ಯಲ್ಲಪ್ಪ ಮಡಿವಾಳರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಸುಧೀರ್ ಜಾಧವ್ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಪರಿಶೀಲನೆ ಇದೇ 20ರಂದು ನಡೆಯಲಿದೆ. ಆಗಸ್ಟ್ 23 ನಾಮಪತ್ರ ಹಿಂಪ‍ಡೆಯಲು ಕೊನೆಯ ದಿನ. 31ರಂದು ಮತದಾನ ನಡೆಯಲಿದ್ದು, ಸೆಪ್ಟೆಂಬರ್ 3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !