ಸಹಕಾರಿ ವಲಯದಲ್ಲಿ ರೈತ ಉತ್ಪಾದಕ ಕಂಪನಿ ಸ್ಥಾಪನೆ

7
ಡಿಸಿಸಿ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಬಾರ್ಡ್ ಎಜಿಎಂ ನಟರಾಜನ್ ಹೇಳಿಕೆ

ಸಹಕಾರಿ ವಲಯದಲ್ಲಿ ರೈತ ಉತ್ಪಾದಕ ಕಂಪನಿ ಸ್ಥಾಪನೆ

Published:
Updated:
Deccan Herald

ಕೋಲಾರ: ‘ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ದಿಸೆಯಲ್ಲಿ ಸರ್ಕಾರವು ಸಹಕಾರಿ ವಲಯದಲ್ಲಿ ರೈತ ಉತ್ಪಾದಕ ಕಂಪನಿ ಸ್ಥಾಪಿಸಲು ಮುಂದಾಗಿದ್ದು, ಡಿಸಿಸಿ ಬ್ಯಾಂಕ್ ಈ ನೂತನ ವ್ಯವಸ್ಥೆಯ ಅನುಷ್ಠಾನದ ನೇತೃತ್ವ ವಹಿಸಬೇಕು’ ಎಂದು ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಜಿಎಂ) ನಟರಾಜನ್ ತಿಳಿಸಿದರು.

ಇಲ್ಲಿ ಶನಿವಾರ ನಡೆದ ಡಿಸಿಸಿ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರಿ ಸಂಸ್ಥೆಗಳಡಿ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸುವ ಗುರಿಯಿದೆ. ಪ್ರತಿಯೊಂದು ಕಡೆ ತಲಾ ಒಂದು ಸಾವಿರ ರೈತರನ್ನು ₹ 1 ಸಾವಿರ ಮೊತ್ತದ ಷೇರುದಾರರಾಗಿಸಬೇಕು’ ಎಂದರು.

‘ಮೂಲ ಬಂಡವಾಳ ಸಂಗ್ರಹಿಸಿದರೆ ನಬಾರ್ಡ್ ಕಡೆಯಿಂದ ಷೇರುಧನ ದೊರೆಯುತ್ತದೆ. ಕಂಪನಿ ನೋಂದಣಿಗೆ ₹ 40 ಸಾವಿರ, ಪೀಠೋಪಕರಣ, ಮೂಲಸೌಕರ್ಯ ಹಾಗೂ ಸಿಬ್ಬಂದಿ ವೇತನಕ್ಕೆ ₹ 1.60 ಲಕ್ಷವನ್ನು ನಬಾರ್ಡ್ ಆರಂಭಿಕ ಪ್ರೋತ್ಸಾಹಧನವಾಗಿ ಬಿಡುಗಡೆ ಮಾಡಲಿದೆ. ಸರ್ಕಾರ ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ಕೃಷಿ ಯಂತ್ರೋಪಕರಣ ಖರೀದಿಗೆ ಹಣಕಾಸು ನೆರವು ನೀಡುತ್ತದೆ. ರೈತ ಉತ್ಪಾದಕ ಕಂಪನಿಯು ಶೇ 10ರಷ್ಟು ಮೂಲಧನ ಭರಿಸಬೇಕು’ ಎಂದು ವಿವರಿಸಿದರು.

ನೀಲನಕ್ಷೆ ರೂಪಿಸಿ: ‘ಜಿಲ್ಲೆಯ ಸಹಕಾರಿ ಸಂಸ್ಥೆಗಳನ್ನು ಉತ್ತಮ, ಮಧ್ಯಮ ಹಾಗೂ ಸಾಮಾನ್ಯವೆಂದು ವಿಂಗಡಿಸಿ ಸವಕಲಾಗಿರುವ ಸಂಸ್ಥೆಗಳನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ನೀಲನಕ್ಷೆ ರೂಪಿಸಬೇಕು. ಸಂಸ್ಥೆಗಳ ವಹಿವಾಟು ಹೆಚ್ಚಿಸುವ ಮೂಲಕ ಲಾಭದತ್ತ ಕೊಂಡೊಯ್ಯಬೇಕು. ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ಭದ್ರತಾ ಠೇವಣಿ ಇರುವಂತೆ ನೋಡಿಕೊಳ್ಳುವುದರ ಜತೆಗೆ ಹಣ ಕಡ್ಡಾಯವಾಗಿ ಬ್ಯಾಂಕ್‌ನಲ್ಲೇ ಇರುವಂತೆ ಮೇಲ್ವಿಚಾರಕರು ಎಚ್ಚರಿಕೆ ವಹಿಸಬೇಕು’ ಎಂದು ಅಫೆಕ್ಸ್‌ ಬ್ಯಾಂಕ್‌ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಸಲಹೆ ನೀಡಿದರು.

ಸಹಕಾರ ನೀಡುತ್ತೇವೆ: ‘ರೈತರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ರೈತ ಉತ್ಪಾದಕ ಕಂಪನಿ ಸ್ಥಾಪನೆಗೆ ಸಹಕಾರ ನೀಡುತ್ತೇವೆ. ಆ.25ರಂದು ಎರಡೂ ಜಿಲ್ಲೆಗಳ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ನಡೆಸಿ ಕಂಪನಿ ಆರಂಭಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ನರಸಿಂಹರೆಡ್ಡಿ, ಶಂಕರನಾರಾಯಣಗೌಡ, ಪಿ.ಶಿವಾರೆಡ್ಡಿ, ಕೃಷ್ಣೇಗೌಡ, ವ್ಯವಸ್ಥಾಪಕ ಶಿವಕುಮಾರ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !