ಯಡಿಯೂರಪ್ಪ ಓದಿದ ಶಾಲೆ ಅನಾಥ!

7
ಪಾಳು ಮಾರುಕಟ್ಟೆಯ ನಡುವೆ ಶತಮಾನದ ಶಾಲೆ, ಅನೈತಿಕ ಚಟುವಟಿಕೆಗಳ ತಾಣ

ಯಡಿಯೂರಪ್ಪ ಓದಿದ ಶಾಲೆ ಅನಾಥ!

Published:
Updated:
Deccan Herald

ಮಂಡ್ಯ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಿರಿಯ ಪ್ರಾಥಮಿಕ ಶಿಕ್ಷಣ ಪಡೆದ ಶತಮಾನದಷ್ಟು ಹಳೆಯ ಸರ್ಕಾರಿ ಶಾಲೆ ಈಗ ಅನಾಥವಾಗಿದೆ. ಪಾಳು ಮಾರುಕಟ್ಟೆಯ ನಡುವೆ ಇರುವ ಈ ಶಾಲೆ ದುಷ್ಕರ್ಮಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಪೇಟೆಬೀದಿ ಸಮೀಪದಲ್ಲೇ ಇರುವ ಹಳೇ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿ.ಎಸ್‌.ಯಡಿಯೂರಪ್ಪ 7 ಮತ್ತು 8ನೇ ತರಗತಿ ಓದಿದ್ದಾರೆ. ಮಾಜಿ ಸಚಿವ ಕೆ.ವಿ.ಶಂಕರಗೌಡ, ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ ಅವರೂ ಇಲ್ಲಿಯೇ ಕಲಿತಿದ್ದಾರೆ. ಶಾಲಾ ಆವರಣದಲ್ಲೇ ತಹಶೀಲ್ದಾರ್‌ ಹಾಗೂ ಉಪನೋಂದಣಾಧಿಕಾರಿ ಕಚೇರಿಯೂ ಇತ್ತು. ಕಚೇರಿಗಳು ಸ್ಥಳಾಂತರಗೊಂಡ ನಂತರ ಇಡೀ ಕಟ್ಟಡವನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಈಗಲೂ ಇದು ‘ಹಳೇ ತಹಶೀಲ್ದಾರ್‌ ಕಚೇರಿ ಶಾಲೆ’ ಎಂದೇ ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ 800ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದ ಶಾಲೆಯಲ್ಲಿ ಈಗ ಕೇವಲ 23 ಮಕ್ಕಳಿದ್ದಾರೆ.

‘ಪ್ರಾಥಮಿಕ ಶಿಕ್ಷಣಕ್ಕೆ ಪೇಟೆಬೀದಿ ಶಾಲೆ ಎಂದರೆ ಬಹಳ ಪ್ರಸಿದ್ಧಿ ಪಡೆದಿತ್ತು. ಯಡಿಯೂರಪ್ಪ ಅವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಬೂಕನಕೆರೆಯಲ್ಲಿ ಪೂರೈಸಿ ಪ್ರಾಥಮಿಕ ಶಿಕ್ಷಣ ಪಡೆಯಲು ಮಂಡ್ಯಕ್ಕೆ ಬಂದರು. ಆನೆಕೆರೆ ಬೀದಿಯ ತಾತನ ಮನೆಯಲ್ಲಿ ತಂಗಿದ್ದರು. ಪೇಟೆಬೀದಿ ಕೆಂಪೇಗೌಡರ ಕಟ್ಟಡದಲ್ಲಿದ್ದ ಆರ್‌ಎಸ್‌ಎಸ್‌ ಕಚೇರಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ನಂತರ ಮುನಿಸಿಪಲ್‌ ಶಾಲೆಯಲ್ಲಿ 10ನೇ ತರಗತಿಯವರೆಗೆ ಜೊತೆಯಲ್ಲೇ ಓದಿದೆವು. ನಾವು ಓದಿದ ಪೇಟೆ ಬೀದಿ ಶಾಲೆಯ ಈಗಿನ ಅನಾಥ ಸ್ಥಿತಿ ನೋಡಿದರೆ ನನ್ನ ಕಣ್ಣಲ್ಲಿ ನೀರು ಬರುತ್ತದೆ’ ಎಂದು ಯಡಿಯೂರಪ್ಪ ಅವರ ಸಹಪಾಠಿ ಗುರುಮೂರ್ತಿ ಆಚಾರ್‌ ಹೇಳಿದರು.

ಕಿಡಿಗೇಡಿಗಳ ಕಾಟ :  ನಗರದ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಲು ನಗರಸಭೆ 2007ರಲ್ಲಿ ಸರ್ಕಾರಿ ಶಾಲೆಯ ಕಾಂಪೌಂಡ್‌ ಸುತ್ತಲೂ 160 ಮಳಿಗೆ ನಿರ್ಮಾಣ ಮಾಡಿತು. ಆದರೆ ಮೂಲಸೌಲಭ್ಯ ಕೊರತೆಯ ನೆಪವೊಡ್ಡಿ ವ್ಯಾಪಾರಿಗಳು ಹೊಸ ಮಳಿಗೆಗಳಿಗೆ ತೆರಳಲಿಲ್ಲ. ಹೀಗಾಗಿ ಆ ಮಳಿಗೆಗಳು ಕಿಡಿಗೇಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿಯೇ ಉಳಿದವು. ಮಳಿಗೆಗಳಿಗೆ ಮಾತ್ರ ಸೀಮಿತವಾಗದ ಅನೈತಿಕ ಚಟುವಟಿಕೆ ಶಾಲೆಯೊಳಗೂ ಸಾಗಿತು. ಶಿಕ್ಷಕರು ಪೊಲೀಸ್‌ ಠಾಣೆಗೆ ದೂರು ಕೊಟ್ಟ ನಂತರ ಶಾಲೆ ಕಾಂಪೌಂಡ್‌ಗೆ ಗೇಟ್‌ ಹಾಕಿಸಲಾಯಿತು. ಆದರೆ ಗೇಟ್‌ ಮುರಿದ ಕಿಡಿಗೇಡಿಗಳು ತಮ್ಮ ಚಟುವಟಿಕೆ ಮುಂದುವರಿಸಿದರು.

‘ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಶಾಲೆ ಮೇಲೆ ಕಲ್ಲು ಎಸೆಯುತ್ತಾರೆ. ಹೀಗಾಗಿ ಹೆಂಚುಗಳು ಹಾಳಾಗಿವೆ. ಹಗಲು ವೇಳೆಯಲ್ಲಿ ಒಬ್ಬರೇ ಓಡಾಡಲೂ ಕಷ್ಟದ ಪರಿಸ್ಥಿತಿ ಇದೆ. ಮಕ್ಕಳ ಸಂಖ್ಯೆ ಕಡಿಮೆಯಾಗಲೂ ಇದು ಪ್ರಮುಖ ಕಾರಣ. ಕಂಡಕಂಡಲ್ಲಿ ಇಸ್ಪೀಟ್‌ ಎಲೆಗಳು, ಕುಡಿದು ಬಿಸಾಡಿದ ಬಾಟಲಿಗಳು ಸಿಗುತ್ತವೆ. ಮಳಿಗೆ ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದು ಶಾಲೆಯವರೆಗೂ ದುರ್ವಾಸನೆ ಬೀರುತ್ತಿದೆ’ ಎಂದು ಶಿಕ್ಷಕರು ಹೇಳಿದರು.

ಶಾಲೆಯಲ್ಲಿ ಮೂವರು ಶಿಕ್ಷಕರು ಇದ್ದಾರೆ. ಮುಖ್ಯಕಟ್ಟಡದ ಹೆಂಚು ಹಾರಿ ಹೋಗಿದ್ದು ಅಲ್ಲಿ ಮುಖ್ಯಶಿಕ್ಷಕರ ಕಚೇರಿ ಇದೆ. ಕಟ್ಟಡದ ಹಿಂಭಾಗದಲ್ಲಿ ಕೊಳಚೆ ನೀರು ನಿಂತಿದ್ದು ಸೊಳ್ಳೆಗಳ ಆವಾಸಸ್ಥಾನವಾಗಿದೆ.

********************

ಕಿಡಿಗೇಡಿಗಳ ಹಾವಳಿ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ರಾತ್ರಿಯ ವೇಳೆ ಇಲ್ಲಿ ಪೊಲೀಸ್‌ ಕಾವಲು ಹಾಕಬೇಕು
ರಾಘವೇಂದ್ರ ಭಟ್‌, ಪ್ರಭಾರ ಮುಖ್ಯಶಿಕ್ಷಕ

ಬಿ.ಎಸ್‌.ಯಡಿಯೂರಪ್ಪ ಮಂಡ್ಯದಲ್ಲಿ ಓದುವಾಗ ‘ಭಾರತ್‌’ ಕಬಡ್ಡಿ ತಂಡದ ಪ್ರಮುಖ ಆಟಗಾರರಾಗಿದ್ದು. ಅವರ ಆಟ ನೋಡಲು ಎಲ್ಲ ಶಾಲೆಯ ವಿದ್ಯಾರ್ಥಿಗಳು ಸೇರುತ್ತಿದ್ದರು
– ಎಂ.ಎಸ್‌.ಆತ್ಮಾನಂದ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !