ಅಪಘಾತ: ರಸ್ತೆ ಉಬ್ಬು ನಿರ್ಮಾಣಕ್ಕೆ ಧರಣಿ

7

ಅಪಘಾತ: ರಸ್ತೆ ಉಬ್ಬು ನಿರ್ಮಾಣಕ್ಕೆ ಧರಣಿ

Published:
Updated:
Deccan Herald

ಕೋಲಾರ: ಇಲ್ಲಿನ ಬಂಗಾರಪೇಟೆ ರಸ್ತೆಯ ಆರ್‌ಟಿಒ ಕಚೇರಿ ಬಳಿ ಶನಿವಾರ ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ದೇವರಾಜು ಎಂಬುವರು ಗಾಯಗೊಂಡಿದ್ದು, ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ರಸ್ತೆ ಉಬ್ಬು ನಿರ್ಮಿಸುವಂತೆ ಆಗ್ರಹಿಸಿ ಧರಣಿ ಮಾಡಿದರು.

ರಸ್ತೆ ತಡೆ ಮಾಡಿದ ಧರಣಿನಿರತರು, ‘ಆರ್‌ಟಿಒ ಕಚೇರಿ ಮುಂಭಾಗದ ಬಂಗಾರಪೇಟೆ ರಸ್ತೆಯಲ್ಲಿ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ಭಾಗದಲ್ಲಿ ಆಗಾಗ್ಗೆ ಅಪಘಾತ ಸಂಭವಿಸುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ರಸ್ತೆ ಉಬ್ಬು ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆರ್‌ಟಿಒ ಕಚೇರಿಗೆ ನಿತ್ಯವೂ ಸಾಕಷ್ಟು ವಾಹನಗಳು ಬರುತ್ತವೆ. ಈ ಭಾಗದಲ್ಲಿ ಸಿಗ್ನಲ್‌ ದೀಪ ಸಹ ಅಳವಡಿಸಿಲ್ಲ. ಸಂಚಾರ ನಿರ್ವಹಣೆಗೆ ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಮತ್ತೊಂದೆಡೆ ಸಂಚಾರ ನಿಯಮ ಸೂಚನಾ ಫಲಕಗಳಿಲ್ಲ. ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆಯು ಸಾರ್ವಜನಿಕರ ಸುರಕ್ಷತೆ ನಿರ್ಲಕ್ಷಿಸಿದೆ’ ಎಂದು ದೂರಿದರು.

‘ರಸ್ತೆ ಉಬ್ಬು ನಿರ್ಮಾಣ ಮಾಡಬೇಕು. ಸಂಚಾರ ವ್ಯವಸ್ಥೆಯ ನಿರ್ವಹಣೆಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು. ಸಂಚಾರ ನಿಯಮ ಸೂಚನಾ ಫಲಕಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಪೊಲೀಸ್‌ ಠಾಣೆಗೆ ಎದುರು ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಧರಣಿಯಿಂದಾಗಿ ಬಂಗಾರಪೇಟೆ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ಥವಾಗಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಬಳಿಕ ಪೊಲೀಸರು ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿ ಧರಣಿನಿರತರ ಮನವೊಲಿಸಿ ಸಂಚಾರ ಸುಗಮಗೊಳಿಸಿದರು. ಗಾಯಾಳು ದೇವರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !