ಗಾಂಜಾ ಮಾರಾಟ: 5 ವರ್ಷ ಕಠಿಣ ಸಜೆ

7
ಪ್ರಕರಣದ ಎರಡನೇ ಆರೋಪಿ ಖುಲಾಸೆ

ಗಾಂಜಾ ಮಾರಾಟ: 5 ವರ್ಷ ಕಠಿಣ ಸಜೆ

Published:
Updated:

ಮಂಗಳೂರು: ಕೋಟೆಕಾರ್‌ ಕೆ.ಸಿ. ರೋಡ್‌ ನಿವಾಸಿ ಇಮ್ತಿಯಾಝ್‌ (28) ಕಾವೂರು ಠಾಣೆ ಪೊಲೀಸರು 2016ರ ಡಿಸೆಂಬರ್‌ನಲ್ಲಿ ಗಾಂಜಾ ಮಾರಾಟ ಆರೋಪದಡಿ ದಾಖಲಿಸಿದ್ದ ಪ್ರಕರಣದಲ್ಲಿ ಅಪರಾಧಿ ಎಂದು ಸಾರಿರುವ ಮಾದಕ ವಸ್ತು ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಲಯ, ಆತನಿಗೆ ಐದು ವರ್ಷ ಕಠಿಣ ಸಜೆ ಹಾಗೂ ₹ 50,000 ದಂಡ ವಿಧಿಸಿದೆ.

ಈ ಪ್ರಕರಣದ ಎರಡನೇ ಆರೋಪಿಯಾಗಿದ್ದ ಅಬ್ದುಲ್ ಅಜೀಝ್‌ ಎಂಬಾತನನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಖುಲಾಸೆಗೊಳಿಸಲಾಗಿದೆ. ಗಾಂಜಾ ಮಾರಾಟ ಮಾಡಲು ಬಳಸಿದ್ದ ಬೈಕ್‌ ಅನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶದಲ್ಲಿ ಸೂಚಿಸಿದೆ.

2016ರ ಡಿ.19ರ ಸಂಜೆ 4.45ರ ಸುಮಾರಿಗೆ ಕೂಳೂರು– ಕಾವೂರು ರಸ್ತೆಯ ಗುಡ್ಡೆಯಂಗಡಿ ರಾಯಿಕಟ್ಟೆ ಬಳಿ ಇಬ್ಬರು ಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಕಾವೂರು ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕಾವೂರು ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಎಂ.ಎ.ನಟರಾಜ್, ಸಬ್‌ ಇನ್‌ಸ್ಪೆಕ್ಟರ್ ಉಮೇಶ್‌ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಆಗ ಇಮ್ತಿಯಾಝ್‌ 2 ಕೆ.ಜಿ.ಗಾಂಜಾ ಮತ್ತು ಬೈಕ್‌ ಸಮೇತ ಸಿಕ್ಕಿಬಿದ್ದಿದ್ದ. ಅಬ್ದುಲ್‌ ಅಜೀಝ್‌ ಪರಾರಿಯಾಗಿದ್ದ. ಸಾಕ್ಷಿಯಾಗಿ ಹಾಜರಿದ್ದ ಮಹಾನಗರ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ ಅವರ ಎದುರಿನಲ್ಲೇ ಆರೋಪಿ ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಕಾವೂರು ಠಾಣೆಯ ಇನ್‌ಸ್ಪೆಕ್ಟರ್‌ ಕೆ.ಆರ್‌.ನಾಯ್ಕ ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಶನಿವಾರ ವಿಚಾರಣೆ ಪೂರ್ಣಗೊಳಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್, ಇಮ್ತಿಯಾಝ್‌ ಅಪರಾಧಿ ಎಂದು ಪ್ರಕಟಿಸಿದರು.

ಅಪರಾಧಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹ 50,000 ದಂಡ ವಿಧಿಸಿದರು. ದಂಡ ಪಾವತಿಗೆ ತಪ್ಪಿದಲ್ಲಿ ಆರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ವಿಧಿಸುವಂತೆ ಆದೇಶದಲ್ಲಿ ತಿಳಿಸಿದರು. ಅಪರಾಧಿಯು ನ್ಯಾಯಾಂಗ ಬಂಧನದಲ್ಲಿದ್ದ ಏಳು ತಿಂಗಳ ಅವಧಿಯನ್ನು ಕಠಿಣ ಜೈಲು ಶಿಕ್ಷೆಯ ಅವಧಿಯಿಂದ ಕಡಿತಗೊಳಿಸಲಾಗಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಪುಷ್ಪರಾಜ ಅಡ್ಯಂತಾಯ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !