ಕರವೇ ಕಾರ್ಯಕರ್ತರ ಬಂಧನ

7

ಕರವೇ ಕಾರ್ಯಕರ್ತರ ಬಂಧನ

Published:
Updated:
ಕರವೇ ಕಾರ್ಯಕರ್ತರ ಬಂಧನ

ಗುಲ್ಬರ್ಗ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸಿದ ಘಟನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಬೀದರ್- ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು.ಗುಲ್ಬರ್ಗ ಹೊರವಲಯದ ಕೋಟನೂರ ಮಠದ ಬಳಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.“ನವೆಂಬರ್ ಒಂದರಂದು ನಾಡಿನಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ, ಎಂಇಎಸ್ ಕಾರ್ಯಕರ್ತರು ಅಂದೇ ಕರಾಳ ದಿನ ಆಚರಣೆ ಮಾಡಿರುವುದು ದ್ರೋಹದ ಕೆಲಸ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು ಕನ್ನಡಿಗರು ಇದನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ” ಎಂದು ವೇದಿಕೆಯ ಜಿಲ್ಲಾಧ್ಯಕ್ಷ  ಕಲ್ಯಾಣರಾವ್ ಮಾಲಿಪಾಟೀಲ ಹೇಳಿದರು.ಅನ್ಯ ಭಾಷಿಕರು ನಮ್ಮ ನಾಡಿಗೆ ಬಂದು ಬೆಳಗಾವಿ ಬಂದ್‌ಗೆ ಕರೆ ನೀಡಿರುವುದು ಖಂಡನೀಯ. ಇಂಥ ಕೃತ್ಯ ಎಸಗಿದವರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಕಲ್ಯಾಣರಾವ್, ರಾಜ್ಯ ಸರ್ಕಾರ ಈ ಕುರಿತು ಗಂಭೀರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ಅರ್ಧ ಗಂಟೆ ಕಾಲ ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಯತ್ನಿಸಿದರೂ, ಸಫಲವಾಗಲಿಲ್ಲ. ಕೊನೆಗೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡು ವಾಹನಗಳಲ್ಲಿ ಕರೆದೊಯ್ದರು.ತಿಪ್ಪಣ್ಣ ಲಂಡನಕರ್, ಶಿವರಾಜ ಬಾಚನಾಳ, ಲಕ್ಷ್ಮಣ ರಾಠೋಡ, ಶರಣಬಸಪ್ಪ ಬಿರಾದಾರ, ಅಶೋಕ ಭೀಮಳ್ಳಿ, ವಿಜಯಕುಮಾರ ಚಾರ್ಲಿ, ಅಶೋಕ ಗುತ್ತೇದಾರ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry