ತಾರತಮ್ಯರಹಿತ ಸಮಾಜವು ಶಿಕ್ಷಣದ ಆಶಯ: ಬೆಂಗಳೂರು ವಿ.ವಿ ವಿಶ್ರಾಂತ ಕುಲಪತಿ ರಂಗನಾಥ್

7

ತಾರತಮ್ಯರಹಿತ ಸಮಾಜವು ಶಿಕ್ಷಣದ ಆಶಯ: ಬೆಂಗಳೂರು ವಿ.ವಿ ವಿಶ್ರಾಂತ ಕುಲಪತಿ ರಂಗನಾಥ್

Published:
Updated:
Deccan Herald

ಕೋಲಾರ: ‘ಜನರ ಕಷ್ಟ ಸುಖ ಅರಿಯುವ ಹೃದಯವಂತಿಕೆಯನ್ನು ಶಿಕ್ಷಣದಲ್ಲಿ ಕಟ್ಟಿ ಕೊಡಬೇಕು. ಮಾನವೀಯ ಮೌಲ್ಯದ ನೆಲೆಯಲ್ಲಿ ತಾರತಮ್ಯ ರಹಿತ ಸಮಾಜ ಕಟ್ಟುವುದು ಶಿಕ್ಷಣದ ಆಶಯವಾಗಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಎ.ರಂಗನಾಥ್ ಅಭಿಪ್ರಾಯಪಟ್ಟರು.

ಇಲ್ಲಿ ಸೋಮವಾರ ನಡೆದ ಬೆಂಗಳೂರು ಉತ್ತರ ವಿ.ವಿಯ 2018–-19ನೇ ಶೈಕ್ಷಣಿಕ ಸಾಲಿನ ಮೊದಲ ವರ್ಷದ ಸ್ನಾತಕೋತ್ತರ ಕೋರ್ಸ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶದ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಅತ್ಯಗತ್ಯ’ ಎಂದರು.

‘ಅನುಭವವನ್ನು ಅನುಭವಿಸುವ ಕಲೆ ವಿದ್ಯಾರ್ಥಿಗಳಿಗೆ ಇರಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ಕುತೂಹಲ ಇರಬೇಕೇ ಹೊರತು ಒತ್ತಡ ಇರಬಾರದು. ಒತ್ತಡದಿಂದ ಮಕ್ಕಳ ಮಾನಸಿಕ ಆರೋಗ್ಯ ಕೆಡುವುದರ ಜತೆಗೆ ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪರಿವರ್ತನೆಯ ಸಾಧನ: ‘ಸಾರ್ವತ್ರಿಕ ನೆಲೆಗಟ್ಟಿನಲ್ಲಿ ಎಲ್ಲರಿಗೂ ಶಿಕ್ಷಣ ಒದಗಿಸಲು ನಾವು ಕಟ್ಟಿಕೊಳ್ಳುವ ವ್ಯವಸ್ಥೆಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸುವುದು ಶಿಕ್ಷಣ ಸಂಸ್ಥೆಗಳ ಗುರಿಯಾಗಿರಬೇಕು. ಶಿಕ್ಷಣ ಎಂದರೆ ಓದು ಬರಹದ ಲೆಕ್ಕಾಚಾರವಲ್ಲ, ಬದಲಿಗೆ ಶಿಕ್ಷಣವು ಸಾಮಾಜಿಕ ಪರಿವರ್ತನೆಯ ಸಾಧನವಿದ್ದಂತೆ’ ಎಂದು ಕಿವಿಮಾತು ಹೇಳಿದರು.

‘ಕಲಿಕೆಯು ವಾರ್ಷಿಕ ಪರೀಕ್ಷೆ, ಸೆಮಿಸ್ಟರ್ ಮುಗಿದ ನಂತರ ಮೊಟಕುಗೊಳ್ಳುತ್ತಿದೆ. ಈ ಪರಿಪಾಠ ಬದಲಾಗಬೇಕು. ವಿಷಯ ಕುರಿತು ಚರ್ಚಿಸುವ, ತುಲನೆ ಮಾಡುವ, ವಿಷಯದ ಕ್ಲಿಷ್ಟತೆ ಕುರಿತು ಚಿಂತಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು’ ಎಂದು ಸಲಹೆ ನೀಡಿದರು.

ಅಸಹಿಷ್ಣುತೆ ಹೆಚ್ಚುತ್ತಿದೆ: ‘ನಮ್ಮಲ್ಲಿ ಅಸಾಮಾನ್ಯ ವಿದ್ಯಾರ್ಹತೆ ಇದೆ. ಆದರೆ, ಸಾಮಾನ್ಯ ಜ್ಞಾನ ಕಡಿಮೆ. ವಿಷಯ ಸಂಗ್ರಹ ಹೆಚ್ಚಾಗಿದೆ. ಆದರೆ, ವಿವೇಚನೆ ಕಡಿಮೆ. ಆಸ್ತಿಯ ಬೆಲೆ ಏರಿದೆ. ಮೌಲ್ಯಗಳ ಬೆಲೆ ಇಳಿದಿದೆ. ಬಹಿರಂಗದಲ್ಲಿ ಗೆಲುವು, ಅಂತರಂಗದಲ್ಲಿ ಸೋಲು, ವಿಶ್ವಶಾಂತಿ ಮಾತು ಇದೆ. ಇದರಿಂದ ಜಗತ್ತಿನಲ್ಲೆಡೆ ಅಶಾಂತಿ, ಅಸಹಿಷ್ಣುತೆ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮೌಲ್ಯಗಳ ಕೊರತೆ ನೀಗಿಸುವ ಬಗ್ಗೆ ಚಿಂತನೆ ನಡೆಯಬೇಕು. ಹಾದಿ ತಪ್ಪುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಜವಾಬ್ದಾರಿ ಕೇವಲ ಶಿಕ್ಷಣ ಸಂಸ್ಥೆ ಅಥವಾ ಸರ್ಕಾರದ್ದಾಗಲಿ ಅಲ್ಲ. ಸರ್ಕಾರಿ ಸೌಕರ್ಯ ಪಡೆಯುತ್ತಿರುವ ನಮ್ಮೆಲ್ಲರದು. ವ್ಯಕ್ತಿತ್ವ ನಿರ್ಮಾಣದಲ್ಲಿ ರೋಬೋಟ್‌ ತಯಾರು ಮಾಡುವ ಕಾರ್ಖಾನೆಗಳನ್ನು ಸೃಷ್ಟಿಸುವ ಹುಂಬರಾಗದೆ ಪರಿಪೂರ್ಣ ಶಿಕ್ಷಣದ ಪ್ರಜಾವಂತ ಪಾಲುದಾರರಾಗೋಣ’ ಎಂದು ಸಲಹೆ ನೀಡಿದರು.

ವ್ಯಾಪಾರದ ವಸ್ತು: ‘ತರಗತಿಗಳು ಅನುಭವ ಮಂಟಪವಿದ್ದಂತೆ. ಇಲ್ಲಿ ಶಿಕ್ಷಕರು ಪಠ್ಯದ ಹೊರತಾಗಿ ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಉಣ ಬಡಿಸಬೇಕು. ಇಂದು ಹಣ ಸಂಪಾದನೆಗಾಗಿ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ. ಶಿಕ್ಷಣವು ವ್ಯಾಪಾರದ ವಸ್ತುವಾಗಿದೆ’ ಎಂದು ಬೆಂಗಳೂರು ವಿ.ವಿ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ನಿವೃತ್ತ ಡೀನ್ ಕೆ.ಈರೇಶಿ ಬೇಸರ ವ್ಯಕ್ತಪಡಿಸಿದರು.

‘ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಶೇ 11ರಷ್ಟಿದೆ. ಈ ಪ್ರಮಾಣವನ್ನು ಮುಂದಿನ ಐದಾರು ವರ್ಷದೊಳಗೆ ಶೇ 30ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಏನು ಮಾಡಬೇಕು ಎಂಬುದನ್ನು ವಿಶ್ವವಿದ್ಯಾಲಯಗಳು ತಿಳಿದು ಭವಿಷ್ಯದ ಅವಶ್ಯಕತೆಗೆ ತಕ್ಕಂತೆ ಸಂಶೋಧನೆ, ಕೋರ್ಸ್‌ ಆರಂಭಿಸಬೇಕು. ಇಲ್ಲವಾದಲ್ಲಿ ವಿ.ವಿಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ’ ಎಂದು ಅಭಿಪ್ರಾಯಪಟ್ಟರು.

ಉತ್ತಮ ವ್ಯಕ್ತಿಗಳಾಗಿ: ‘ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಕಲ್ಪಿಸಲು ಸುವರ್ಣಾವಕಾಶ ದೊರಕಿದ್ದು, ವಿದ್ಯಾರ್ಥಿಗಳು ಈ ಸದಾವಕಾಶ ಬಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು’ ಎಂದು ಬೆಂಗಳೂರು ಉತ್ತರ ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಆಶಿಸಿದರು.

ಬೆಂಗಳೂರು ವಿ.ವಿ ಕಲಾ ನಿಕಾಯ ನಿವೃತ್ತ ಡೀನ್ ಪಿ.ಎಸ್.ಜಯರಾಮ್, ಆರ್.ಎಲ್.ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಲಕ್ಷ್ಮಯ್ಯ, ಬೆಂಗಳೂರು ಉತ್ತರ ವಿ.ವಿ ಕುಲಚಿವ ಪ್ರೊ.ಎಂ.ಎಸ್.ರೆಡ್ಡಿ, ಕುಲಸಚಿವ (ಮೌಲ್ಯಮಾಪನ) ಪ್ರೊ.ಸುಂದರರಾಜ್ ಅರಸ್ ಪಾಲ್ಗೊಂಡಿದ್ದರು.

ಅಂಕಿ ಅಂಶ.....
* 248 ಕಾಲೇಜುಗಳು ವಿ.ವಿ ವ್ಯಾಪ್ತಿಯಲ್ಲಿವೆ
* 12 ಕೋರ್ಸ್‌ಗಳ ಆರಂಭ
* ಶೇ 50ರಷ್ಟು ಪ್ರವೇಶ ಶುಲ್ಕ ಇಳಿಕೆ
* ಶೇ 95ರಷ್ಟು ದಾಖಲಾತಿ ಸಾಧನೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !