ಕಾಂಪೌಂಡ್ ಕುಸಿತ: ಕಳಪೆ ಕಾಮಗಾರಿಗೆ ವಿದ್ಯಾರ್ಥಿ ಬಲಿ?

7
ಗೇಟ್‌ ಮತ್ತು ಕಾಂಪೌಂಡ್ ಕುಸಿದು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಸ್ಪಂದಿಸದೆ ಸಾವು

ಕಾಂಪೌಂಡ್ ಕುಸಿತ: ಕಳಪೆ ಕಾಮಗಾರಿಗೆ ವಿದ್ಯಾರ್ಥಿ ಬಲಿ?

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿನ್ನೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೇಟ್‌ ಮತ್ತು ಕಾಂಪೌಂಡ್ ಗೋಡೆ ಕುಸಿದು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಎರಡನೇ ತರಗತಿ ವಿದ್ಯಾರ್ಥಿ ಅರುಣ್‌ (8) ಸೋಮವಾರ ರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಸೋಮವಾರ ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿದ್ದ ವೇಳೆ ಈ ಅವಘಡ ನಡೆದಿತ್ತು. ಕೂಲಿ ಕಾರ್ಮಿಕರಾಗಿರುವ ಮೃತ ಅರುಣ್‌ ಪೋಷಕರಾದ ಚಂದ್ರ ಮತ್ತು ನೇತ್ರಾ ದಂಪತಿ ತಾಲ್ಲೂಕಿನ ಜಂಗಮಾರಪ್ಪನಹಳ್ಳಿಯವರಾಗಿದ್ದು ಕೂಲಿ ಕೆಲಸಕ್ಕಾಗಿ ಬಂದು ದಿನ್ನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.

ದಂಪತಿಯ ಇಬ್ಬರು ಗಂಡು ಮಕ್ಕಳ ಪೈಕಿ ಅರುಣ್ ಎರಡನೆಯವನು. ಮಂಗಳವಾರ ಸಂಜೆ ಜಂಗಮಾರಪ್ಪನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು. ಮಗನನ್ನು ಕಳೆದುಕೊಂಡ ಪೋಷಕರು ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆಯಿಂದಾಗಿ ಶಾಲೆಗೆ ರಜೆ ಘೋಷಿಸಲಾಗಿತ್ತು. ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕದ ಛಾಯೆ ಕಾಣುತ್ತಿತ್ತು. ದಿನ್ನೂರಿನಲ್ಲಿ ಮಂಗಳವಾರ ಸ್ಮಶಾನ ಮೌನ ಮನೆ ಮಾಡಿತ್ತು.

ಕಳಪೆ ಕಾಮಗಾರಿಗೆ ಬಲಿ

ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಈ ಶಾಲೆಗೆ ನಾಲ್ಕೈದು ತಿಂಗಳ ಹಿಂದಷ್ಟೇ ಕಾಂಪೌಂಡ್ ನಿರ್ಮಾಣ ಮಾಡಲಾಗಿತ್ತು. ಆದರೆ ಆ ವೇಳೆ ಕಾಂಪೌಂಡ್‌ಗೆ ಗೇಟ್‌ ಅಳವಡಿಸದೆ ಹಾಗೇ ಬಿಡಲಾಗಿತ್ತು.

ಒಂದು ವಾರದ ಹಿಂದಷ್ಟೇ ಕಾಂಪೌಂಡ್‌ಗೆ ಗೇಟ್‌ ಅಳವಡಿಸಲಾಗಿತ್ತು. ಗೇಟ್‌ ನಿಲ್ಲಿಸಲು ಹೊಸದಾಗಿ ಕಟ್ಟಿದ್ದ ಚಿಕ್ಕ ಗೋಡೆ ಕೆಳಗೆ ಸರಿಯಾಗಿ ತಳಪಾಯ ಹಾಕದ ಕಾರಣ ಗೇಟ್ ಭಾರಕ್ಕೆ ಅದು ಉರುಳಿ ಬಿದ್ದಿದೆ ಎನ್ನಲಾಗಿದೆ.

ಮಂಗಳವಾರ ಬೆಳಿಗ್ಗೆ ದಿನ್ನೂರಿಗೆ ಉಪ ವಿಭಾಗಾಧಿಕಾರಿ ಶಿವಸ್ವಾಮಿ, ತಹಶೀಲ್ದಾರ್ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಂಜೀವಪ್ಪ, ಪಂಚಾಯತ್‌ ರಾಜ್‌ ಮತ್ತು ಎಂಜಿನಿಯರಿಂಗ್‌ ಇಲಾಖೆ (ಪಿಆರ್‍ಇಡಿ) ತಾಂತ್ರಿಕ ಎಂಜಿನಿಯರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಶಿವಣ್ಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ ಅವರ ತಂಡ ಭೇಟಿ ನೀಡಿ ಘಟನಾ ಸ್ಥಳದ ಪರಿಶೀಲನೆ ನಡೆಸಿತು.

ಈ ವೇಳೆ ದಿನ್ನೂರು ಗ್ರಾಮಸ್ಥರು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಳಪೆ ಕಾಮಗಾರಿಯಿಂದ ಬಡ ಕುಟುಂಬದ ಅಮಾಯಕ ಮಗು ಬಲಿಯಾಗಿದೆ. ಈ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಂಜೀವಪ್ಪ, ನರೇಗಾ ಸಹಾಯಕ ನಿರ್ದೇಶಕ ಮುನಿರಾಜು, ತಾಂತ್ರಿಕ ಸಹಾಯಕ ವಿಶ್ವನಾಥ್, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರಪ್ಪ ಅವರಿಗೆ ವಿವರಣೆ ಕೇಳಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಅವರು ನೋಟಿಸ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಂಜೀವಪ್ಪ, ‘ಪಿಆರ್‍ಇಡಿ ತಾಂತ್ರಿಕ ಎಂಜಿನಿಯರ್‌ ಅವರು ಕಾಂಪೌಂಡ್‌ ಪರಿಶೀಲನೆ ಮಾಡಿದ್ದಾರೆ. ಗೇಟ್‌ ಅಳವಡಿಸಲು ಕಟ್ಟಿದ ಗೋಡೆ ನಿರ್ಮಾಣದಲ್ಲಿ ತಳಪಾಯ ಸರಿಯಾಗಿ ಹಾಕಿಲ್ಲ. ಗೇಟ್‌ನ್ನು ಗೋಡೆಗೆ ಭದ್ರವಾಗಿ ಅಳವಡಿಸಿಲ್ಲ. ಕಾಮಗಾರಿ ಕಳಪೆಯಾಗಿತ್ತು ಎಂದು ಅವರು ವರದಿ ನೀಡಿದ್ದಾರೆ. ಅದನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಕಡೆಯಿಂದ ಮಗುವಿನ ಕುಟುಂಬಕ್ಕೆ ಶೀಘ್ರದಲ್ಲಿಯೇ ಪರಿಹಾರ ಕೊಡಿಸಲು ಕ್ರಮಕೈಗೊಳ್ಳುತ್ತೇವೆ’ ತಹಶೀಲ್ದಾರ್ ನರಸಿಂಹಮೂರ್ತಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !