ಮಾಧ್ಯಮಗಳು ವ್ಯವಸ್ಥೆಯ ಕಣ್ಗಾವಲು ಆಗಲಿ: ಟಿ.ಸಿ.ಪೂರ್ಣಿಮಾ

7

ಮಾಧ್ಯಮಗಳು ವ್ಯವಸ್ಥೆಯ ಕಣ್ಗಾವಲು ಆಗಲಿ: ಟಿ.ಸಿ.ಪೂರ್ಣಿಮಾ

Published:
Updated:

ಚಿಕ್ಕಬಳ್ಳಾಪುರ: ‘ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿರುವ ಮಾಧ್ಯಮಗಳು ಜನತಾ ನ್ಯಾಯಾಲಯಗಳಾಗಿದ್ದು, ಅವುಗಳು ಸದಾ ಸಮಾಜ ಮತ್ತು ವ್ಯವಸ್ಥೆಯ ಕಣ್ಗಾವಲು ಆಗಿರಬೇಕು’ ಎಂದು ಮೈಸೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಹಾಯಕ ನಿರ್ದೇಶಕಿ ಟಿ.ಸಿ.ಪೂರ್ಣಿಮಾ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ವಿಷ್ಣುಪ್ರಿಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಮಾಧ್ಯಮ ಮತ್ತು ಸಂಸ್ಕೃತಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

‘ಮಾಧ್ಯಮಗಳು ಬೇರೆಯಲ್ಲ, ಸಮಾಜ ಬೇರೆಯಲ್ಲ. ಮಾಧ್ಯಮಗಳು ಸಮಾಜ ಮತ್ತು ಸಂಸ್ಕೃತಿಯೊಂದಿಗೆ ತಳಕು ಹಾಕಿಕೊಂಡಿರುತ್ತವೆ. ಸಂಸ್ಕೃತಿ ನಿರ್ಮಾಣ ಮತ್ತು ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಹೆಚ್ಚಾಗಿದೆ. ಮಾಧ್ಯಮಗಳಿಗೆ ಹೆಚ್ಚಿನ ಹೊಣೆಗಾರಿಕೆಯಿದ್ದು, ಸಮಾಜದ ಶಾಂತಿಯನ್ನು ಕದಡುವಂತಹ ವಿಚಾರಗಳಿದ್ದರೆ ಸುದ್ದಿಗಳ ಪ್ರಸಾರದ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

‘ಮೌಢ್ಯಗಳನ್ನು ತೊಲಗಿಸುವ ಸುದ್ದಿಗಳಿಗೆ ಪ್ರಾಧಾನ್ಯತೆ ನೀಡಬೇಕು. ಪ್ರಸಾರವಾಗುವ ಸುದ್ದಿಗಳು ಸಮಾಜದ ಮೇಲೆ ಪ್ರಭಾವ ಬೀರುತ್ತವೆ ಎಂಬ ಎಚ್ಚರಿಕೆ ಮಾಧ್ಯಮಗಳಿಗಿರಬೇಕು. ಅತಿ ರಂಜನೀಯ ಮತ್ತು ವೈಭವೀಕರಣದ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸುದ್ದಿಗಳನ್ನಷ್ಟೇ ಪ್ರಸಾರ ಮಾಡಬೇಕು’ ಎಂದರು.

‘ವಿದ್ಯಾರ್ಥಿಗಳು ಮತ್ತು ಯುವಜನರು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಬಳಕೆಯಲ್ಲೇ ಹೆಚ್ಚು ಸಮಯವನ್ನು ಕಳೆಯುತ್ತಿರುವುದು ಸರಿಯಲ್ಲ. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನೇಕ ಸುದ್ದಿಗಳು ವಿಶ್ವಾಸರ್ಹವಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಅಥವಾ ಹಂಚಿಕೊಳ್ಳಬಾರದು ಎಂಬ ಪ್ರಜ್ಞೆ, ಎಚ್ಚರ ಇಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ವೈ.ಎನ್.ರಾಮಚಂದ್ರರೆಡ್ಡಿ, ಕಾರ್ಯದರ್ಶಿ ಆರ್.ಶ್ಯಾಮಲಾ ಹಾಗೂ ಕಾಲೇಜಿನ ಪ್ರಾಂಶುಪಾಲ ಎನ್.ಚಂದ್ರಶೇಖರ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !