ಎಸ್‌ಐ ಕೊಲೆಗೆ ಯತ್ನ: ಆರೋಪಿಗಳ ಬಂಧನ

7

ಎಸ್‌ಐ ಕೊಲೆಗೆ ಯತ್ನ: ಆರೋಪಿಗಳ ಬಂಧನ

Published:
Updated:

ಕೋಲಾರ: ಅಪರಾಧ ಪ್ರಕರಣವೊಂದರ ಆರೋಪಿ ಹಾಗೂ ಆತನ ಸಂಬಂಧಿಕರು ಜಿಲ್ಲೆಯ ಮಾಲೂರು ತಾಲ್ಲೂಕು ಮಾಸ್ತಿ ಠಾಣೆ ಎಸ್ಐ ವಸಂತ್‌ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲೆತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವಲಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಮಾಸ್ತಿ ಠಾಣೆ ವ್ಯಾಪ್ತಿಯ ಬೆಡಶೆಟ್ಟಿಹಳ್ಳಿ ಗ್ರಾಮದಲ್ಲಿ ವೆಂಕಟೇಶಪ್ಪ ಎಂಬಾತ ಸಹಚರರ ಜತೆ ಸೇರಿಕೊಂಡು ಬುಧವಾರ ರಾತ್ರಿ ರಮೇಶ್‌ ಎಂಬ ರೈತ ಮುಖಂಡನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಮಾಸ್ತಿ ಠಾಣೆಯಲ್ಲಿ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಪ್ರಮುಖ ಆರೋಪಿ ವೆಂಕಟೇಶಪ್ಪ ಆವಲಹಳ್ಳಿಯಲ್ಲಿನ ತನ್ನ ಮಾವ ಮುನಿರಾಜು ಅವರ ಮನೆಯಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಎಸ್‌ಐ ವಸಂತ್‌, ಕಾನ್‌ಸ್ಟೆಬಲ್‌ ವೆಂಕಟೇಶ್‌ ಆರೋಪಿಯನ್ನು ಬಂಧಿಸಲು ಹೋಗಿದ್ದರು. ಆಗ ವೆಂಕಟೇಶಪ್ಪ, ಆತನ ತಮ್ಮ ನಾಗೇಶ್‌, ಮುನಿರಾಜು, ಸಂಬಂಧಿಕರಾದ ಸುಧಾ ಮತ್ತು ಲಕ್ಷ್ಮಿ ಅವರು ಎಸ್‌ಐ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಅಲ್ಲದೇ, ಗಾಜಿನಿಂದ ಚುಚ್ಚಿ ಕೊಲೆ ಮಾಡಲೆತ್ನಿಸಿದ್ದಾರೆ.

ಈ ವೇಳೆ ಎಸ್‌ಐ ರಕ್ಷಣೆಗೆ ಧಾವಿಸಿದ ಕಾನ್‌ಸ್ಟೆಬಲ್ ವೆಂಕಟೇಶ್‌ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ವಸಂತ್‌ ಅವರ ಬಲಗೈ ಬೆರಳುಗಳು ಮುರಿದಿವೆ.

‘ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆವಲಹಳ್ಳಿ ಪೊಲೀಸರು ವೆಂಕಟೇಶಪ್ಪ, ನಾಗೇಶ್‌ ಮತ್ತು ಮುನಿರಾಜುನನ್ನು ಬಂಧಿಸಿದ್ದಾರೆ. ರಮೇಶ್‌ ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನು ಮಾಸ್ತಿ ಪೊಲೀಸರು ಬಂಧಿಸಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎ.ಬಿ.ರಾಜೇಂದ್ರಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !