4 ಕಡೆ ಎಲ್‌ಐಸಿ ಉಪಗ್ರಹ ಶಾಖೆ ಆರಂಭ

7

4 ಕಡೆ ಎಲ್‌ಐಸಿ ಉಪಗ್ರಹ ಶಾಖೆ ಆರಂಭ

Published:
Updated:

ಕೋಲಾರ: ‘ನಿಗಮದ 65ನೇ ವಾರ್ಷಿಕೋತ್ಸದ ಅಂಗವಾಗಿ ಗ್ರಾಹಕರ ಅನುಕೂಲಕ್ಕಾಗಿ ಜಿಲ್ಲೆಯ 4 ಕಡೆ ಹೊಸ ಉಪಗ್ರಹ ಶಾಖೆ ಆರಂಭಿಸಲಾಗುವುದು’ ಎಂದು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಹಿರಿಯ ವಿಭಾಗಾಧಿಕಾರಿ ಜೆ.ಜಗದೀಶ್‌ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರು ವಿಭಾಗ–2ರ ವ್ಯಾಪ್ತಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಯಲ್ಲಿ 32 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಹೊಸದಾಗಿ ಶ್ರೀನಿವಾಸಪುರ, ಬಂಗಾರಪೇಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ, ಹೆಬ್ಬಾಳ ಕ್ರಾಸ್ ಬಳಿ ಶೀಘ್ರವೇ ನೂತನ ಶಾಖೆ ಆರಂಭಿಸಲಾಗುವುದು’ ಎಂದರು.

‘ನಿಗಮವು ಧಾವೆ ಬಗೆಹರಿಸುವಲ್ಲಿ ಉತ್ತಮ ಸಾಧನೆ ಮಾಡಿದ್ದು, ಶೇ 95.36ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಮರಣ ಹೊಂದಿದವರ ಧಾವೆಗಳ ಪೈಕಿ ಶೇ 98ರಷ್ಟು ಇತ್ಯರ್ಥಗೊಂಡಿವೆ. ಕೇರಳದಲ್ಲಿ ಪ್ರವಾಹದ ವೇಳೆ ಮೃತಪಟ್ಟವರ ಧಾವೆ ಇತ್ಯರ್ಥಗೊಳಿಸಲು ನಿಯಮಾವಳಿ ಸಡಿಲಿಸಲಾಗಿದೆ’ ಎಂದು ಹೇಳಿದರು.

‘ನಿಗಮವು ಹಿಂದಿನ ಹಣಕಾಸು ವರ್ಷದಲ್ಲಿ ₹ 2.13 ಕೋಟಿ ಪಾಲಿಸಿ ಪೂರ್ಣಗೊಳಿಸಿದೆ. ದೇಶದಲ್ಲಿ ಒಟ್ಟು 25 ಖಾಸಗಿ ವಿಮಾ ಕಂಪನಿಗಳು ವಿಮಾ ಸೌಲಭ್ಯ ಒದಗಿಸುತ್ತಿವೆ. ಈ ಪೈಕಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು ಪಾಲಿಸಿಗಳಲ್ಲಿ ಶೇ 75.67ರಷ್ಟು ಹಾಗೂ ವಿಮಾ ಕಂತಿನಲ್ಲಿ ಶೇ 69.40ರಷ್ಟು ಮಾರುಕಟ್ಟೆ ಪಾಲು ಹೊಂದಿದೆ’ ಎಂದು ವಿವರಿಸಿದರು.

ಆ್ಯಪ್‌ ಬಿಡುಗಡೆ

 ‘ಪಾಲಿಸಿದಾರರಿಗೆ ವಿಮಾ ಕಂತು ಪಾವತಿಸಲು ಮತ್ತು ಇತರ ಸೌಲಭ್ಯ ಪಡೆಯಲು ಎಲ್‍ಐಸಿ ಎರಡು ವಾರದ ಹಿಂದೆಯಷ್ಟೇ ಮೊಬೈಲ್ ಆ್ಯಪ್‌ ಬಿಡುಗಡೆ ಮಾಡಿದೆ. ಪಾಲಿಸಿದಾರರು ಈ ಆ್ಯಪ್ ಬಳಸಿಕೊಂಡು ವಿಮಾ ಕಂತು ಪಾವತಿಸಬಹುದು ಮತ್ತು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಸಾಲ ಮರು ಪಾವತಿ, ಬಡ್ಡಿಯನ್ನು ಆನ್‌ಲೈನ್‌ ಮೂಲಕವೇ ಪಾವತಿಸಬಹುದು’ ಎಂದು ಮಾಹಿತಿ ನೀಡಿದರು.

‘ಪಾಲಿಸಿದಾರರು ದೇಶದ ಯಾವುದೇ ಭಾಗದಲ್ಲಿ ವಿಮಾ ಕಂತು ಪಾವತಿಸಬಹುದು ಹಾಗೂ ಅವಧಿ ಮುಗಿದ ನಂತರ ಹಣ ಪಡೆಯುವ ಸೌಲಭ್ಯ ಸಹ ಕಲ್ಪಿಸಲಾಗಿದೆ. ನಿಗಮದಲ್ಲಿ ಪ್ರಸ್ತುತ 30 ಬಗೆಯ ವಿಮಾ ಯೋಜನೆಗಳಿದ್ದು, ಶೀಘ್ರವೇ ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತದೆ’ ಎಂದು ಹೇಳಿದರು.

ನಿಗಮದ ಕೋಲಾರ ಶಾಖಾಧಿಕಾರಿ ಬಿ.ಎಲ್.ಚಾಲಚಂದ್ರ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಪುಟ್ಟಸ್ವಾಮಿ, ಪ್ರತಿನಿಧಿ ನಂಜುಂಡಪ್ಪ ಹಾಜರಿದ್ದರು.

ಅಂಕಿ ಅಂಶ.....
* 1,48,028 ವಿಮಾ ಪಾಲಿಸಿ ಪೂರ್ಣ
* ₹ 429.21 ಕೋಟಿ ವಿಮಾ ಕಂತು ಗಳಿಕೆ
* 1.80 ಲಕ್ಷ ಪಾಲಿಸಿಗಳು ಜಿಲ್ಲೆಯಲ್ಲಿವೆ
* 30 ಬಗೆಯ ವಿಮಾ ಯೋಜನೆಗಳಿವೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !