ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆ: ತೋಟಗಾರಿಕೆ ವಿದ್ಯಾಲಯದ ಡೀನ್ ಪ್ರಕಾಶ್

7
ಕಾರ್ಯಾಗಾರ

ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆ: ತೋಟಗಾರಿಕೆ ವಿದ್ಯಾಲಯದ ಡೀನ್ ಪ್ರಕಾಶ್

Published:
Updated:
Deccan Herald

ಕೋಲಾರ: ‘ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದ್ವಿತಳಿ ಗೂಡು ಉತ್ಪಾದನೆ ಮಾಡಿದರೆ ಉತ್ತಮ ಇಳುವರಿ ಜತೆಗೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಕಿವಿಮಾತು ಹೇಳಿದರು.

ರೇಷ್ಮೆ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ದ್ವಿತಳಿ ರೇಷ್ಮೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ’ ಎಂದರು.

‘ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾಗಿದೆ. ಮಣ್ಣಿನ ಫಲವತ್ತತೆ ಕಾಪಾಡಲು ರೈತರು ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಬೇಕು. ಪೋಷಕಾಂಶಗಳ ನಿರ್ವಹಣೆಯಲ್ಲಿ ಮಣ್ಣು ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ‘ಸುಣ್ಣಕಟ್ಟು ರೋಗ ಮತ್ತು ಎಲೆ ಸುರುಳಿ ರೋಗ ನಿಯಂತ್ರಿಸಿದರೆ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದು ಸಲಹೆ ನೀಡಿದರು.

‘ವಿದೇಶಿ ಮಾರುಕಟ್ಟೆಯ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ರೈತರು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಬೇಕು. ಆಧುನಿಕ ತಾಂತ್ರಿಕತೆ ಬಳಕೆಯಿಂದ ರೇಷ್ಮೆ ಹುಳುಗಳಿಗೆ ರೋಗಬಾಧೆ ತಪ್ಪಿಸಬಹುದು. ವೈಜ್ಞಾನಿಕ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ತಿಳಿಸಿದರು.

ಮಾಹಿತಿ ನೀಡಿಕೆ: ಮಣ್ಣು ಪರೀಕ್ಷೆ, ದ್ವಿತಳಿ ರೇಷ್ಮೆ ಕೃಷಿ ತಾಂತ್ರಿಕತೆ, ಹಿಪ್ಪುನೇರಳೆ ಗಿಡಗಳಿಗೆ ಸೂಕ್ತ ಸ್ಥಳಾವಕಾಶ, ಗುಣಿ ಪದ್ಧತಿಯಲ್ಲಿ ಏಕಕಾಂಡದ ನಿರ್ವಹಣೆ, ಅಂತರ ಬೇಸಾಯದಲ್ಲಿ ಹಸಿರೆಲೆ ಗೊಬ್ಬರದ ಸಮರ್ಪಕ ಬಳಕೆ, ರೇಷ್ಮೆ ಹುಳುಗಳಿಗೆ ಬರುವ ರೋಗ, ಕೀಟಬಾಧೆ ನಿಯಂತ್ರಣ ಮತ್ತು ಹಿಪ್ಪುನೇರಳೆ ಸೊಪ್ಪಿಗೆ ಬರುವ ರೋಗ ಹತೋಟಿ ಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

ಹುಳು ಸಾಕು ಮನೆಯಲ್ಲಿ ಸೋಂಕು ನಿವಾರಣೆಗೆ ದ್ರಾವಣ ತಯಾರಿಕೆ ವಿಧಾನ, ಪ್ರೌಢ ಹುಳು ಸಾಕಾಣಿಕೆ, ಜ್ವರದಲ್ಲಿ ಹುಳುಗಳ ನಿರ್ವಹಣೆ, ಹಣ್ಣು ಹುಳು ನಿರ್ವಹಣೆ ಮತ್ತು ಪ್ರತ್ಯೇಕ ಹುಳು ಸಾಕು ಮನೆ ಅನುಕೂಲತೆ ಬಗ್ಗೆ ವಿವರಿಸಿದರು.

ಯೋಜನೆ ವಿವರಣೆ: ನರೇಗಾ, ಕೃಷಿ ಭಾಗ್ಯ ಯೋಜನೆ ಬಗ್ಗೆ ವಿವರಣೆ ನೀಡಲಾಯಿತು. ರೇಷ್ಮೆ ಬೆಳೆಗಾರರ ಸಮಸ್ಯೆಗಳು ಮತ್ತು ನಿವಾರಣೆ ಕ್ರಮಗಳ ಬಗ್ಗೆ ಸಂವಾದ ನಡೆಯಿತು.

ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್‌, ಸಹಾಯಕ ನಿರ್ದೇಶಕ ಎಂ.ಮಂಜುನಾಥ್‌, ರೇಷ್ಮೆ ವಿಸ್ತರಣಾಧಿಕಾರಿಗಳಾದ ಎಸ್.ಪಿ.ಜಯಶಂಕರ್, ಎಂ.ಎಸ್.ಕಲ್ಯಾಣಸ್ವಾಮಿ, ರೇಷ್ಮೆ ಪ್ರದರ್ಶಕ ಎನ್.ವಿ.ನಾಗಭೂಷಣಯ್ಯ, ಪ್ರಗತಿಪರ ರೇಷ್ಮೆ ಬೆಳೆಗಾರರಾದ ಶ್ರೀನಿವಾಸ್, ನಾಗರಾಜ್, ವೆಂಕಟರಾಮಯ್ಯ, ಕೃಷ್ಣಮೂರ್ತಿ, ಚೌಡಪ್ಪ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !