ಮನೆ ಬಾಗಿಲಲ್ಲೇ ಕಂದಾಯ– ಪಿಂಚಣಿ ಅದಾಲತ್‌

7

ಮನೆ ಬಾಗಿಲಲ್ಲೇ ಕಂದಾಯ– ಪಿಂಚಣಿ ಅದಾಲತ್‌

Published:
Updated:

ಕೋಲಾರ: ‘ಜಿಲ್ಲೆಯ ಜನರ ಮನೆ ಬಾಗಿಲಲ್ಲೇ ಕಂದಾಯ ಮತ್ತು ಪಿಂಚಣಿ ಅದಾಲತ್‌ ನಡೆಸುವ ಮೂಲಕ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಹಣಿ ತಿದ್ದುಪಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಂದೋಲನ ಹಮ್ಮಿಕೊಂಡಿದ್ದೆವು. ಆದರೂ ಕೆಲ ತಿದ್ದುಪಡಿ ಪ್ರಕರಣಗಳು ಬಾಕಿಯಿವೆ. ಆ ಪ್ರಕರಣಗಳನ್ನು ಬಗೆಹರಿಸಲು ಮತ್ತೊಂದು ಸುತ್ತಿನಲ್ಲಿ ಆಂದೋಲನ ನಡೆಸಲಾಗುತ್ತದೆ’ ಎಂದರು.

‘ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಸೇರಿದಂತೆ ಕೆಲ ಸವಲತ್ತು ವಿತರಣೆಯಲ್ಲಿ ನ್ಯೂನತೆಯಿದ್ದು, ಅರ್ಹರು ಸೌಲಭ್ಯಗಳಿಂದ ವಂಚಿತರಾಗಿರುವುದು ಗಮನಕ್ಕೆ ಬಂದಿದೆ. ಬಡವರು ಸೌಲಭ್ಯಕ್ಕಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಅವರ ಮನೆ ಸಮೀಪವೇ ಪಿಂಚಣಿ ಅದಾಲತ್‌ ನಡೆಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಕೆಲ ಫಲಾನುಭವಿಗಳಿಗೆ ಪಿಂಚಣಿ ಪಾವತಿಸುವಲ್ಲಿ ಖಜಾನೆ ಕಡೆಯಿಂದ ಸಮಸ್ಯೆ ಆಗಿದ್ದು, ಆ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು. ಪೋಡಿ ಸಮಸ್ಯೆ ಸಾಕಷ್ಟಿದ್ದು, ಹಲವು ವರ್ಷಗಳಿಂದ ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಆಗಿಲ್ಲ. ಆಂದೋಲನದ ಮಾದರಿಯಲ್ಲಿ ಪೋಡಿ ಸಮಸ್ಯೆ ಪರಿಹರಿಸುತ್ತೇವೆ. ಯಾವುದೇ ವ್ಯಾಜ್ಯ, ಸಮಸ್ಯೆ, ಅಧಿಕಾರಿಗಳ ಕಡೆಯಿಂದ ತೊಂದರೆಯಿಲ್ಲ ಎಂದಾದರೆ ಸ್ಥಳದಲ್ಲೇ ಬಗೆಹರಿಸುತ್ತೇವೆ’ ಎಂದು ಹೇಳಿದರು.

‘ಮುಂಗಾರು ಹಂಗಾಮಿನ ಕೊನೆ ಭಾಗದಲ್ಲಿ ಬರಪೀಡಿತ ಜಿಲ್ಲೆ ಘೋಷಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ ಸೆಪ್ಟೆಂಬರ್ ಕೊನೆ ವಾರದ ಬಳಿಕ ಬರ ಘೋಷಣೆ ಮಾಡಲಿದೆ. ಜಿಲ್ಲೆಯ ಕ್ವಾರಿ ಮಾಲೀಕರಿಗೆ ದಂಡ ವಿಧಿಸಿರುವ ಸಂಬಂಧ ಪರಿಶೀಲನೆ ನಡೆಸುತ್ತೇವೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !