ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

7
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆದೇಶ: ಮುನ್ನೆಚ್ಚರಿಕೆ ವಹಿಸಲು ಮನವಿ

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

Published:
Updated:

ಕೋಲಾರ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಗೌರಿ– ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಪೊಲೀಸ್‌ ಠಾಣೆ, ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಆದೇಶಿಸಿದ್ದಾರೆ.

ಸಾರ್ವಜನಿಕರ ರಸ್ತೆಗಳು, ಬಡಾವಣೆಗಳು ಅಥವಾ ಖಾಲಿ ಮೈದಾನಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವವರು ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪೆಂಡಾಲ್‌ಗಳಲ್ಲಿ ಅಗ್ನಿ ಅನಾಹುತ ತಡೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ರಸ್ತೆಯಲ್ಲಿ ಪೆಂಡಾಲ್‌ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮತ್ತು ವಿದ್ಯುತ್‌ ಬಳಕೆಗೆ ಬೆಸ್ಕಾಂ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು. ಧ್ವನಿವರ್ಧಕ ಅಳವಡಿಕೆಗೆ ಪೊಲೀಸರಿಂದ ಅನುಮತಿ ಪಡೆಯಬೇಕು. ಸ್ವಂತ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಯಾವುದೇ ಅನಾಹುತ ಸಂಭವಿಸಿದರೆ ಸ್ಥಳದ ಮಾಲೀಕರೇ ಜವಾಬ್ದಾರರು ಎಂದು ಹೇಳಿದ್ದಾರೆ.

ಎಚ್ಚರಿಕೆ ವಹಿಸಬೇಕು: ಮೂರ್ತಿ ಪ್ರತಿಷ್ಠಾಪನಾ ಸ್ಥಳ ಅಥವಾ ಪೆಂಡಾಲ್‌ಗಳಲ್ಲಿ ರಾತ್ರಿ ವೇಳೆ ಸ್ವಯಂ ಸೇವಕರು ಹಾಜರಿದ್ದು, ಅಪರಾಧ ಚಟುವಟಿಕೆ ನಡೆಯದಂತೆ ನಿಗಾ ವಹಿಸಬೇಕು. ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಗಣಪತಿ ಮೂರ್ತಿಗಳ ವಿಸರ್ಜನೆಗಾಗಿ ಕೆರೆ ಅಥವಾ ಬಾವಿಗೆ ಇಳಿಯುವಾಗ ಯಾವುದೇ ಅಪಾಯ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ಪೆಂಡಾಲ್‌ ಅಥವಾ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಅಗ್ನಿನಂದಕ ಸಲಕರಣೆಗಳನ್ನು ಅಳವಡಿಸಬೇಕು. ಕೃಷಿ ಹೊಂಡಗಳಲ್ಲಿ ಮೂರ್ತಿ ವಿಸರ್ಜನೆ ಅಪಾಯಕಾರಿ. ಆದ ಕಾರಣ ಕೃಷಿ ಹೊಂಡದಲ್ಲಿ ಮೂರ್ತಿ ವಿಸರ್ಜನೆ ಮಾಡಬಾರದು. ಗಣಪತಿ ಮೂರ್ತಿ ಪ್ರತಿಷ್ಠಾಪನೆಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವಂತಿಲ್ಲ. ಬಲವಂತವಾಗಿ ದೇಣಿಗೆ ಸಂಗ್ರಹಿಸಿದರೆ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘಟಕರೇ ಹೊಣೆ: ಪೊಲೀಸರು ನಿಗದಿಪಡಿಸಿದ ಮಾರ್ಗ ಅಥವಾ ರಸ್ತೆಯಲ್ಲಿ ಮೂರ್ತಿಗಳ ಮೆರವಣಿಗೆ ನಡೆಸಬೇಕು. ಮೂರ್ತಿ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆವರೆಗೂ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಸಂಘಟಕರೇ ಹೊಣೆಗಾರರು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಗೌರಿ–ಗಣೇಶ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !