ನೀರಾವರಿ ಹೋರಾಟಕ್ಕೆ ಮಸಿ ಬಳಿಯುವ ಪ್ರಯತ್ನ

7

ನೀರಾವರಿ ಹೋರಾಟಕ್ಕೆ ಮಸಿ ಬಳಿಯುವ ಪ್ರಯತ್ನ

Published:
Updated:

ಕೋಲಾರ: ‘ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರು ಕೆ.ಸಿ ವ್ಯಾಲಿ ಯೋಜನೆ ಮೂಲಕ ಜಿಲ್ಲೆಗೆ ವಿಷಕಾರಿ ನೀರು ಹರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸದೆ ನೀರಾವರಿ ಹೋರಾಟಗಾರರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ನೀರಾವರಿ ಹೋರಾಟ ಸಮಿತಿ ಸಂಚಾಲಕ ವಿ.ಕೆ.ರಾಜೇಶ್ ಆರೋಪಿಸಿದ್ದಾರೆ.

ನೀರಾವರಿ ಹೋರಾಟ ನ್ಯಾಯಸಮ್ಮತವಾಗಿದೆ. ಯಾವುದೇ ರಾಜಕಾರಣಿಯ ಸಂಬಂಧ ಇಟ್ಟುಕೊಂಡು ಹೋರಾಟ ರೂಪಿಸಿಲ್ಲ. ಬದಲಿಗೆ ಜಿಲ್ಲೆಯ ಭವಿಷ್ಯದ ದೃಷ್ಠಿಯಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ರಮೇಶ್‌ಕುಮಾರ್‌ ಅವರು ಹೋರಾಟಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿರುವುದು ದುರಂತ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ನೀರಾವರಿ ಹೋರಾಟಗಾರರು ಜಿಲ್ಲೆಯ ಜನರ ಮೇಲಿನ ಕಾಳಜಿಯಿಂದಾಗಿ ಕೆ.ಸಿ ವ್ಯಾಲಿ ಯೋಜನೆ ನೀರಿನ ಶುದ್ಧತೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ರಮೇಶ್‌ಕುಮಾರ್‌ ಅನುಮಾನವಿರುವ ಹೋರಾಟಗಾರರ ಪಟ್ಟಿ ನೀಡಲಿ. ಜತೆಗೆ ಹೋರಾಟಗಾರರ ಮೊಬೈಲ್‌ ಕರೆಗಳ ಬಗ್ಗೆ ತನಿಖೆ ನಡೆಸಲಿ. ತನಿಖೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಕೆ.ಸಿ ವ್ಯಾಲಿ ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರಕ್ಕೆ ಯೋಜನೆಗೆ ಸಂಬಂಧಪಟ್ಟ ಸೂಕ್ತ ದಾಖಲೆಪತ್ರಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ. ಇದರಿಂದಲೇ ಯೋಜನೆಯನ್ನು ಪಾರದರ್ಶಕವಾಗಿ ರೂಪಿಸಿಲ್ಲ ಎಂದು ಸಾಬೀತಾಗಿದೆ. ಕೆರೆಗಳಿಗೆ ವಿಷಕಾರಿ ನೀರು ಹರಿದು ಬಂದು ನರಸಾಪುರ ಸುತ್ತಮುತ್ತಲಿನ ಕೊಳವೆ ಬಾವಿಗಳ ಅಂತರ್ಜಲ ಕಲುಷಿತಗೊಂಡಿದೆ. ಜಿಲ್ಲೆಯ ಜನಪ್ರತಿನಿಧಿಗಳು ಕನಿಷ್ಠ ನರಸಾಪುರ ಭಾಗದ ಜನರ ಕಷ್ಟ ಅರಿಯುವ ಪ್ರಯತ್ನ ಮಾಡಿಲ್ಲ ಎಂದು ದೂರಿದ್ದಾರೆ.

ನೀರಾವರಿ ಹೋರಾಟಗಾರರ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಅಧಿಕಾರಿಗಳ ವಿರುದ್ಧ ತನಿಖೆ ನಡೆಸದೆ ನೀರಾವರಿ ಹೋರಾಟಗಾರರ ಮೇಲೆ ಗೂಬೆ ಕೂರಿಸಲು ಹೊರಟಿರುವ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ನೀರಿನ ಶುದ್ಧತೆ ಖಾತ್ರಿಪಡಿಸಿ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಿ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !