ಅಶ್ರಫ್‌ಗೆ ನ್ಯಾಯ ಒದಗಿಸಲು ಆಗ್ರಹ:ಹಲವರಿಂದ ಕಮಿಷನರ್‌ ಭೇಟಿ

7

ಅಶ್ರಫ್‌ಗೆ ನ್ಯಾಯ ಒದಗಿಸಲು ಆಗ್ರಹ:ಹಲವರಿಂದ ಕಮಿಷನರ್‌ ಭೇಟಿ

Published:
Updated:

ಮಂಗಳೂರು: ಕಾಂಗ್ರೆಸ್‌ ಮುಖಂಡರು ಹಾಗೂ ಮುಸ್ಲಿಂ ಬರಹಗಾರರ ಒಕ್ಕೂಟದ ಎರಡು ಪ್ರತ್ಯೇಕ ನಿಯೋಗಗಳು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅವರನ್ನು ಶನಿವಾರ ಭೇಟಿ ಮಾಡಿ, ಮೂಢನಂಬಿಕೆಯನ್ನು ಪ್ರಶ್ನಿಸುವ ಬರಹವನ್ನು ಫೇಸ್‌ ಬುಕ್‌ನಲ್ಲಿ ಹಾಕಿದ್ದ ಕಾರಣಕ್ಕಾಗಿ ಬಂಧನಕ್ಕೊಳಗಾಗಿದ್ದ ಅಶ್ರಫ್‌ ಎಂ. ಸಾಲೆತ್ತೂರು ಅವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿವೆ.

ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ರವೂಫ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಕರಾವಳಿ ವಲಯ ಸಮಿತಿ ಅಧ್ಯಕ್ಷ ಯು.ಬಿ.ಸಲೀಂ, ಮುಖಂಡರಾದ ಎಂ.ಎಸ್‌.ಕರೀಮ್‌, ಸಂಶುದ್ದೀನ್ ಕುದ್ರೋಳಿ, ರಫೀಕ್‌ ಪಡೀಲ್‌, ಹನೀಫ್‌ ಜೋಕಟ್ಟೆ ಸೇರಿದಂತೆ ಹಲವರು ಕಾಂಗ್ರೆಸ್ ಮುಖಂಡರ ನಿಯೋಗದಲ್ಲಿದ್ದರು.

‘ಅಶ್ರಫ್‌ ಅವರನ್ನು ಸಕಾರಣವಿಲ್ಲದೇ ಬಂಧಿಸಲಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ಹಬ್ಬದ ಸಮಯದಲ್ಲಿ ಬಂಧಿಸಿರುವುದು ಸರಿಯಲ್ಲ. ಆ ಬಳಿಕ ಕೂಡ ಪೊಲೀಸರು ಅಶ್ರಫ್‌ಗೆ ಕಿರುಕುಳ ಕೊಡುತ್ತಿದ್ದಾರೆ. ತಕ್ಷಣ ಮಧ್ಯ ಪ್ರವೇಶಿಸಿ ಅವರಿಗೆ ನ್ಯಾಯ ಒದಗಿಸಬೇಕು. ಈ ಪ್ರಕರಣದಲ್ಲಿ ತಪ್ಪು ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡರು ಪೊಲೀಸ್ ಕಮಿಷನರ್ ಅವರನ್ನು ಒತ್ತಾಯಿಸಿದರು.

ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಯು.ಎಚ್.ಉಮರ್ ನೇತೃತ್ವದಲ್ಲಿ ಸುರೇಶ್ ಅವರನ್ನು ಭೇಟಿ ಮಾಡಿದ ನಿಯೋಗ ಕೂಡ ಇದೇ ಬೇಡಿಕೆ ಮಂಡಿಸಿತು. ಅಶ್ರಫ್‌ ಪೊಲೀಸರ ವಿರುದ್ಧ ನೀಡಿರುವ ದೂರಿನ ಕುರಿತು ವಿಚಾರಣೆ ನಡೆಸಿ, ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.

ಎರಡೂ ನಿಯೋಗಗಳ ಜೊತೆ ದೀರ್ಘಕಾಲ ಮಾತುಕತೆ ನಡೆಸಿದ ಕಮಿಷನರ್‌, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವಿವರ ಪಡೆಯಲಾಗುವುದು. ಅಶ್ರಫ್‌ ಅವರಿಗೆ ಅನ್ಯಾಯವಾಗಿದ್ದರೆ, ನ್ಯಾಯ ಒದಗಿಸಲಾಗುವುದು. ಪೊಲೀಸರು ತಪ್ಪೆಸಗಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂಬ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !