ಪರೀಕ್ಷೆಗೊಂದು ಸಿಂಹಾವಲೋಕನದ ಪಥ!

7

ಪರೀಕ್ಷೆಗೊಂದು ಸಿಂಹಾವಲೋಕನದ ಪಥ!

Published:
Updated:
Deccan Herald

ಶಾ ಲೆಗಳಲ್ಲೀಗ ಮಧ್ಯವಾರ್ಷಿಕ ಪರೀಕ್ಷೆ ಮತ್ತು ದಸರೆಯೆದ್ದೇ ಮಾತು! ದಸರೆಯ ರಜೆಯಲ್ಲಿ ಎಲ್ಲಿಗೆ ಹೋಗಬೇಕೆಂದು ಮಕ್ಕಳು, ಪೋಷಕರು ಯೋಚಿಸುತ್ತಿರಬಹುದು. ಹಾಗೆಯೇ, ಹತ್ತನೇ ತರಗತಿಯವರು, ಎರಡನೇ ಪಿಯುಸಿಯ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯ ಧ್ಯಾನ ಮಾಡುವುದು ಸಹಜ. ಆದರೆ, ಆತಂಕ ಬೇಡ. ಎಲ್ಲ ತರಗತಿಯ ವಿದ್ಯಾರ್ಥಿಗಳಿಗೆ (ಪೋಷಕರಿಗೂ ಕೂಡ) ಎರಡು ಸುಳುಹುಗಳನ್ನು ಕೊಡಲು ಬಯಸುತ್ತೇನೆ. ಒಂದು ಸಿಂಹಾವಲೋಕನ! ಇದುವರೆಗೂ ಏನು ನಡೆದಿದೆ, ಮುಂದೆ ಎಷ್ಟಿದೆ, ನನಗೆ ಎಷ್ಟು ಬರುತ್ತದೆ? – ಇವನ್ನು ತಿಳಿದುಕೊಳ್ಳುವುದು. ಎರಡನೆಯದು, ಇನ್ನು ಆರು ತಿಂಗಳಷ್ಟು ಸಮಯವಿರುವಾಗಲೇ ಅವಲೋಕನ ಮಾಡಿ ಸಿದ್ಧವಾಗಿಬಿಡುವುದು!

ಇದು ನಿಮಗೆ ಅನೇಕ ಸ್ತರಗಳಲ್ಲಿ ತುಂಬ ಸಹಾಯ ಮಾಡುತ್ತದೆ. ಕೊನೆ ಗಳಿಗೆಯ ಆತಂಕ/ಧಾವಂತಗಳನ್ನು ತಪ್ಪಿಸುತ್ತದೆ. ನಾವು ಸಾವಧಾನವಾಗಿ ‘ಅಯ್ಯೋ! ಪರೀಕ್ಷೆ ಬಂದು ಬಿಟ್ಟಿತು!’ ಎಂಬುದರಿಂದ ‘ಬರಲಿ, ಕಾದಿದ್ದೇನೆ!’ ಎಂಬುದಕ್ಕೆ ಬದಲಾಗಿಬಿಡುತ್ತೇವೆ. ಪರೀಕ್ಷೆ ಬಂತು ಎಂದು ಹೆದರುವುದಕ್ಕಿಂತಲೂ, ಬರಲಿ ನಾನು ಕಾದಿದ್ದೇನೆ ಎಂಬ ಹಂತಕ್ಕೆ ಬಂದೆವೆಂದರೆ ಅದೆಷ್ಟು ಸಂತೋಷ ಕೊಡುತ್ತದೆ, ಅಲ್ಲವೆ? ಅದನ್ನು ಮಾಡಲು ಇದು ಸಕಾಲ! ಇದು ಪರೀಕ್ಷೆಗೆ ಮಾತ್ರವಲ್ಲ ಜೀವನಕ್ಕೂ ಅನ್ವಯಿಸುತ್ತದೆ. ‘ಘಟನೆ ನಮ್ಮನ್ನು ಹಿಂದಕ್ಕಿಡಬಾರದು!’ ಎಂಬುದು ವಿಜ್ಞಾನಲೇಖಕ ಜಿ. ಟಿ. ನಾರಾಯಣ ರಾಯರ ಮಾತು. ಈ ಮಾತು ನಮ್ಮ ಮೆದುಳಿನಲ್ಲಿ ಸದಾ ಗುಂಯ್‌ಗುಡುತ್ತಿರಬೇಕು.

ಹತ್ತನೇ ತರಗತಿಗೂ ಅರ್ಧವಾರ್ಷಿಕ ಪರೀಕ್ಷೆಗಳ ಸಮಯವೇ ಆದರೂ ಅನೇಕ (ಅದರಲ್ಲೂ ಕೆಲವು ಖಾಸಗಿ ಶಾಲೆಗಳಲ್ಲಿ) ಸೆಪ್ಟೆಂಬರ್‌ ಒಳಗೆ ಪೂರ್ತಿ ಸಿಲೆಬಸ್‍ ಮುಗಿಸಿ ಪುನರಾವರ್ತನೆಗೆ ತೊಡಗುತ್ತಾರೆ. ಇದು ತಪ್ಪಾದರೂ ಇದನ್ನು ನಮ್ಮ ಒಳಿತಿಗೆ ಬಳಸಿಕೊಳ್ಳಬೇಕು. ಅವರು ಆತುರ ಮಾಡುತ್ತಾರೆ. ಬಂಧುಗಳು, ಹಿರಿಯಮಿತ್ರರು, ಅಕ್ಕಪಕ್ಕದವರೂ ‘ಹ್ಞಾ! ಈ ಬಾರಿ ಎಸ್‌ಎಸ್‌ಎಲ್‌ಸಿ!’ ಎಂದು ಧಮಕಿ ಹಾಕುತ್ತಾರೆ. ಅವೆಲ್ಲವನ್ನೂ ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಿ. ಇದಕ್ಕಿರುವ ಮಾರ್ಗ ಎಂದರೆ ನಾವು ಸರಿಯಾಗಿ ತಯಾರಾಗುವುದೇ! ಒಂದು ಗಂಟೆ ಸಮಯವನ್ನು ಮಾಡಿಕೊಂಡು ಟಿವಿ, ಮೊಬೈಲ್‍, ಕಂಪ್ಯೂಟರ್‌ ಎಲ್ಲವನ್ನೂ ಆಫ್‍ ಮಾಡಿ ಕುಳಿತುಕೊಳ್ಳಿ. ಮನೆಯವರಿಗೂ ನನ್ನನ್ನು ಡಿಸ್ಟರ್ಬ್ ಮಾಡಬೇಡಿರೆಂದು ಹೇಳಿಬಿಡಿ. ಕುಳಿತು ನಿಧಾನವಾಗಿ ಇದುವರೆಗೂ ಏನೇನು ಪಾಠಗಳು ಆಗಿವೆ? ನಿಮಗೆಷ್ಟು ಬರುತ್ತದೆ? – ಎಂದು ಪ್ರಾಮಾಣಿಕವಾಗಿ ಯೋಚಿಸಿ ಬರೆದುಕೊಳ್ಳಿ. ಇನ್ನು ಆರು ತಿಂಗಳು ಸಮಯವಿದೆ. ಇದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಲು ಬಹಳ ಹೆಚ್ಚು! ಹಾಗಾಗಿ, ಖುಷಿಯಾಗಿ ಮುಂದಿನದನ್ನು ಯೋಜಿಸಿರಿ. ಇಂತಹ ಸಿಂಹಾವಲೋಕನ ಇಲ್ಲಿ ಮಾತ್ರವಲ್ಲ, ನಿಮ್ಮ ಇಡೀ ಜೀವನದಲ್ಲಿ ಅನುಕೂಲವಾಗುತ್ತದೆ.

ಹೀಗೆ ಮಾಡಿ:

ಪ್ರತಿಯೊಂದು ಪಠ್ಯಪುಸ್ತಕವನ್ನು ತೆಗೆದು ಅದರಲ್ಲಿ ನಿಮಗೆ ಏನು ಬರುತ್ತದೆ, ಏನಿಲ್ಲ ಎಂಬುದನ್ನು ಗುರುತು ಹಾಕಿಕೊಳ್ಳಿ. ಬರದಿರುವುದನ್ನು ಕಲಿಯಲು ಯೋಜನೆ ರೂಪಿಸಿ. ಯೋಜನೆ ರೂಪಿಸಲು ಹಾಗೂ ಬರದಿರುವುದನ್ನು ಕಲಿಯಲು ಶಿಕ್ಷಕರ ಸಹಾಯವಿದ್ದೇ ಇರುತ್ತದೆ. ಭಾಷೆಗಳಲ್ಲಿ ಕಂಠಪಾಠ ಮಾಡಬೇಕಾಗಿರುವ ಪದ್ಯಗಳು, ಗಣಿತದ ಸೂತ್ರಗಳು-ಥಿಯರಮ್‍ಗಳು, ವಿಜ್ಞಾನದಲ್ಲಿನ ಸೂತ್ರ ಮತ್ತು ಪ್ರಯೋಗಶಾಲೆಯ ತಯಾರಿ – ಹೀಗೆ ಮುಖ್ಯವಾದವುಗಳನ್ನು ದಿನವೂ ಓದಿ. ಒಂದು ಹಾಳೆಯ ಮೇಲೆ ಬರೆದು ಒಂದು ಕಡೆ ಗೋಡೆಗೆ ಅಂಟುಹಾಕಿ. ಬಿಡುವಾದಾಗ ನೋಡುತ್ತಿರಿ. 
ಯಾವ ಒತ್ತಡಕ್ಕೂ ಆಸ್ಪದ ಕೊಡಬೇಡಿ. ಪರೀಕ್ಷೆ ಎಂದು ಯಾರಾದರು ಹೇಳಲು ಬಂದರೆ ‘ನಾನು ಸಿದ್ಧನಾಗಿದ್ದೇನೆ’ ಎನ್ನಿ. ಅವರನ್ನೇ ಪ್ರಶ್ನೆ ಕೇಳಿ. ಮುಖ್ಯವಾದದ್ದು ನಿಮ್ಮ ಸಿದ್ಧತೆ ಅವರಿವರ ಮಾತಲ್ಲ ಎಂಬುದನ್ನು ಮನಸ್ಸಿನಲ್ಲಿ ಗಟ್ಟಿಮಾಡಿಕೊಳ್ಳಿ.

ಪೋಷಕರು ಹಾಗೂ ಸುತ್ತಲಿನ ಜನರ ಪಾತ್ರ ಬಹಳ ಮುಖ್ಯ. ನಿಮ್ಮ ಮಧ್ಯಪ್ರವೇಶಿಕೆ ಅಗತ್ಯ ಹಾಗೂ ಸಕಾರಾತ್ಮಕ ಎಂದು ಖಚಿತಪಡಿಸಿಕೊಂಡು ಮಧ್ಯಪ್ರವೇಶಿಸಿ. ನೀವು ಮಕ್ಕಳಿಗೆ ದೊಡ್ಡ ನೈತಿಕ ಬೆಂಬಲವಾಗಿ ನಿಂತುಬಿಡಿ. ಅವರ ಆರೋಗ್ಯ–ಆಹಾರ–ವಿಶ್ರಾಂತಿಗಳ ಬಗ್ಗೆ ಗಮನ ಕೊಡಿ ಸಾಕು.

ಯೋಜನೆ ಎಲ್ಲದಕ್ಕೂ ಮುಖ್ಯ. ಹಾಗಾಗಿ ಮುಂದಿನ ಆರು ತಿಂಗಳಿಗೆ ಒಂದು ಯೋಜನೆ ತಯಾರಿಸಿ. ಆ ಯೋಜನೆಯಲ್ಲಿ ನಿಮ್ಮ ಆಟ ಹಾಗೂ ನಿದ್ದೆಗೂ ಸ್ಥಾನವಿರಲಿ. ನಿದ್ದೆಗೆಟ್ಟು ರಾತ್ರಿಯೆಲ್ಲಾ ಓದುವುದರಿಂದ ತೊಂದರೆಯೇ ಎಂಬುದು ನೆನಪಿರಲಿ.

ಅರ್ಧವಾರ್ಷಿಕ ಪರೀಕ್ಷೆಯ ನಂತರ ರಜೆ ಬರಲಿದೆ. ಅದರ ಸದುಪಯೋಗವನ್ನು ಕುರಿತು ಈಗಲೇ ಸಿದ್ಧರಾಗಿ. ಕೆಲವು ವಿಷಯಗಳು ಸ್ಪಷ್ಟವಾಗಿರುವುದಿಲ್ಲ. ಉದಾಹರಣೆಗೆ ಟ್ರಿಗೊನೋಮೆಟ್ರಿ ಎಂದುಕೊಳ್ಳಿ. ಈ ಇದನ್ನು ಕಲಿಯಲು ರಜೆಯನ್ನು ಬಳಸಿಕೊಳ್ಳಿ. ಎರಡು ಅಥವಾ ಮೂರು ದಿನ ನಿಮ್ಮೆಲ್ಲ ಸಮಯವನ್ನು ಅದಕ್ಕೇ ಮೀಸಲಿಟ್ಟು ಕಲಿಯಿರಿ. ಅದು ನಿಮ್ಮದಾಗಿಬಿಡುತ್ತದೆ. ಪ್ರಾಮಾಣಿಕ ಶ್ರಮಕ್ಕೆ ಒಲಿಯದ ಜ್ಞಾನ ಹಿಮಾಲಯವಿಲ್ಲ! (ಇದೂ ಜಿ. ಟಿ. ನಾರಾಯರಣ ರಾಯರ ಮಾತು!)

ಹಾಗೆಯೇ ರಜೆಯಲ್ಲಿ ಒಂದು ಪುಟ್ಟ ಪ್ರವಾಸ, ಪಠ್ಯೇತರ ಓದು, ಚಾರಣ ಇಂತಹವನ್ನೂ ಮಾಡಿ.
ಒಂದು ಬಹಳ ಮುಖ್ಯವಾದ ವಿಷಯ, ನಿಮ್ಮನ್ನು ಎಂಥದೇ ಕಷ್ಟು, ನೋವು–ಸಂಕಟಗಳಿಂದ ಪಾರುಮಾಡುವ ವಿಷಯ ಏನು ಗೊತ್ತೆ? ‘ನಿಮಗೆ ನಿಮ್ಮ ಮೇಲಿನ ಆತ್ಮವಿಶ್ವಾಸ!’ ಅದನ್ನು ಎಂದಿಗೂ ಕಳೆದುಕೊಳ್ಳಬೇಡಿ. ‘ನಾನು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ, ಪರಿಣಾಮಗಳು ಒಳ್ಳೆಯವೇ ಆಗುತ್ತವೆ’ ಎಂದು ದೃಢವಾಗಿ ನಂಬಿ ಮುನ್ನಡೆಯಿರಿ. ಖಂಡಿತ ಯಶಸ್ಸು ದೊರೆಯುತ್ತದೆ. ನಾನು ಮುಂದೆ ಖಂಡಿತ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತೇನೆ ಎಂದು ಪದೇ ಪದೇ ಹೇಳಿಕೊಳ್ಳಿ. ಸ್ವತಂತ್ರವಾಗಿ, ಧೈರ್ಯವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಲ್ಲರ ಬಗೆಯೂ ಗೌರವ–ವಿಶ್ವಾಸಗಳಿರಲಿ.

ಹಾಗೆಯೇ, ಒಂದಿಡೀ ದಿನ ಬಿಡುವು ಮಾಡಿಕೊಂಡು ನಿಮ್ಮ ಪಠ್ಯವಿಷಯಗಳನ್ನು ಸುಮ್ಮನೆ ನಮ್ಮದಲ್ಲವೆಂದು ಕೊಂಡು ನೋಡುತ್ತ ಬನ್ನಿ. ಎಷ್ಟು ಒಳ್ಳೆಯ ವಿಚಾರಗಳಿವೆ ಅಲ್ಲವೆ ಎನಿಸುತ್ತದೆ. ಭಾಷಾಪುಸ್ತಕಗಳಲ್ಲಿನ ಪಾಠಗಳು, ಆದರ್ಶವ್ಯಕ್ತಿಯ ಜೀವನಕಥನಗಳು, ಸೊಗಸಾದ ಪದ್ಯಗಳು, ಕಾವ್ಯ – ಇವೆಲ್ಲವನ್ನೂ ಕುರಿತು ಯೋಚಿಸಿ. ಅದರಲ್ಲಿ ಸಾಕಷ್ಟು ಆನಂದವಿದೆ ಎಂಬುದು ನಿಮಗೆ ಹೊಳೆಯುತ್ತದೆ. ನಿಮಗೆ ಖುಷಿ ಕೊಡುತ್ತಿಲ್ಲವೆಂದರೆ ನಿಮಗೆ ಅರ್ಥವಾಗಿಲ್ಲ ಎಂದೇ ಅರ್ಥ! ಅದರ ಅರ್ಥವನ್ನು ತಿಳಿಯಲು ಆರಂಭಿಸಿ. ಶಿಕ್ಷಕರ ಸಹಾಯ ಪಡೆದುಕೊಳ್ಳಿ. ಹಳೆಗನ್ನಡ ಕಾವ್ಯಭಾಗಗಳಂತೂ ರಸಪೂರ್ಣವಾಗಿವೆ. ಅದನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೆ ಈ ಪರೀಕ್ಷೆಯನ್ನು ಮಾತ್ರವಲ್ಲ ಜೀವನದ ಪರೀಕ್ಷೆಯನ್ನೇ ದಾಟಿಬಿಡಬಹುದು. ಹೌದು! ಹಾಗೆಯೇ ವ್ಯಾಕರಣ ಕೂಡ. ಮೊದಮೊದಲು ಕಷ್ಟವೆನಿಸುತ್ತದೆ. ಆ ನಿಯಮಗಳನ್ನು ಅರ್ಥಮಾಡಿಕೊಳ್ಳುತ್ತಾ ಹೋಗಿ ಆಗ ಬೇರೆ ಹುಡುಗರು ನಿಮ್ಮಲ್ಲಿಗೆ ಬಂದು ಕೇಳಿ ತಿಳಿದುಕೊಳ್ಳುವ ಸಮಯ ಬರುತ್ತದೆ! ಮಾಡಿ ನೋಡಿ.

ಇನ್ನು ಕಬ್ಬಿಣದ ಕಡಲೆಗಳು ಎನಿಸಿಕೊಂಡಿರುವ ಇಂಗ್ಲಿಷ್‍, ವಿಜ್ಞಾನ ಮತ್ತು ಗಣಿತಗಳು. ಕನ್ನಡದಂತೆಯೇ ಇಂಗ್ಲಿಷ್‍ ಮತ್ತೊಂದು ಭಾಷೆ. ಬೇರೆ ದೇಶದಿಂದ ಬಂದು ನಮ್ಮಲ್ಲಿ ಬೆರೆತಿರುವ ಭಾಷೆ. ಆ ದೇಶದ ಜನ-ಭಾವ-ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂಬ ದೃಷ್ಟಿಯಿಂದ ನೋಡಿ. ಅದು ನಿಮಗೆ ಆಪ್ತವಾಗಿಬಿಡುತ್ತದೆ. ವಿದೇಶಿಯರಿಗಿಂತ ಚೆನ್ನಾಗಿ ಈ ಭಾಷೆಯನ್ನು ಕಲಿಯುತ್ತೇನೆ ಎಂದು ಪಣ ತೊಡಿ. ಹೆಚ್ಚೆಚ್ಚು ಓದಿ, ಒಂದು ನಿಘಂಟು ಇಟ್ಟುಕೊಳ್ಳಿ. ಅಷ್ಟು ಸಾಕು. ಇನ್ನು ವಿಜ್ಞಾನ. ನಮ್ಮ ಬದುಕು ಇಷ್ಟು ಸೊಗಸಾಗಿರುವುದಕ್ಕೆ ನೇರ ಕಾರಣವೇ ವಿಜ್ಞಾನ! ಇದು ಕಷ್ಟವಾಗುವುದು, ಅರ್ಥವಾಗದಿರುವುದು ಎಲ್ಲಿಂದ ಬಂತು! ನಿಧಾನವಾಗಿ ಒಂದೊಂದೇ ಅಧ್ಯಾಯಗಳನ್ನು ನೋಡುತ್ತಾ ಬನ್ನಿ. ಅಲ್ಲಿ ಹೇಳಿರುವುದನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಾ ಬನ್ನಿ. ಹೊರಜಗತ್ತಿನಲ್ಲಿ ನಾವು ಉಪಯೋಗಿಸುತ್ತಾ ಬಂದಿರುವುದಕ್ಕೆ ಹೋಲಿಸಿರಿ. ಒಂದು ಕುತೂಹಲ ಮೂಡುತ್ತದೆ. ಕಲಿಕೆಗೆ ಅಷ್ಟು ಸಾಕು! ಇವುಗಳ ಮೂಲವನ್ನು ಅರ್ಥ ಮಾಡಿಕೊಂಡು ಚೆನ್ನಾಗಿ ಮನನ ಮಾಡಿರಿ. ಆ ಪರಿಕಲ್ಪನೆಗಳು ಮೂಡಿಬಂದ ಕಾಲ, ರೀತಿಯನ್ನು ಅರಿಯುವ ಯತ್ನವನ್ನು ಮಾಡಿ. ನಿಮ್ಮ ಶಿಕ್ಷಕರು, ಗ್ರಂಥಾಲಯ ಹಾಗೂ ಅಂತರ್ಜಾಲ ನಿಮ್ಮೊಂದಿಗಿದೆಯಷ್ಟೆ!

ಗಣಿತ ಕಷ್ಟವೆಂದು ತಪ್ಪಾಗಿ ಮೊದಲಿಂದಲೂ ನಮ್ಮ ತಲೆಗೆ ತುಂಬಲಾಗಿದೆ. ಗಣಿತ ನಮ್ಮ ಅತಿಹೆಚ್ಚು ಗಮನವನ್ನು ಬೇಡುವ ವಿಷಯ ಅಷ್ಟೆ. ಗಮನ ತಪ್ಪದಂತೆ ಇದ್ದರೆ ಗಣಿತ ಗೆದ್ದಂತೆಯೇ! ವಿಷಯವನ್ನು ಅರ್ಥಮಾಡಿಕೊಳ್ಳಿ. ಸೂತ್ರಗಳನ್ನೂ ಥಿಯರಮ್‍ಗಳನ್ನೂ ಕೇವಲ ಕಂಠಪಾಠ ಮಾಡದೆ ಅದು ಏಕೆ ಹಾಗಿದೆ ಎಂಬುದನ್ನು ಅರ್ಥಮಾಡಿಕೊಳ‍್ಳಿ. ಗಣಿತಕ್ಕೆ ಗಮನ ಮತ್ತು ಅಭ್ಯಾಸ ಎರಡು ರೆಕ್ಕೆಗಳಂತೆ. ಅದನ್ನು ಮಾಡುತ್ತಾ ಹೋಗಿ ಗಣಿತದಲ್ಲಿರುವ ಸೌಂದರ್ಯವೂ ನಿಮಗೆ ಕಾಣತೊಡಗುತ್ತದೆ. ಕಷ್ಟ ಎಂಬ ಪದಬಳಕೆಯೇ ತಪ್ಪು!

ಇನ್ನು ಸಮಾಜವಿಜ್ಞಾನ ನಮ್ಮನ್ನು ಸಮಾಜದಲ್ಲಿ ಬದುಕುವ ಬಗೆಯನ್ನು ತಿಳಿಸುತ್ತದೆ. ನಮ್ಮ ಇತಿಹಾಸ ನಮಗೆ ಕಷ್ಟವಾಗಬೇಕೆ? ನಮ್ಮ ದೇಶದ ಸಂವಿಧಾನವನ್ನು ಕುರಿತು ತಿಳಿಯುವುದು, ಓದುವುದು ಕಷ್ಟವೇ? ಬಿಡುವು ಮಾಡಿಕೊಂಡು ಈ ಪ್ರಶ್ನೆಗಳನ್ನು ಹಾಕಿಕೊಂಡು ಯೋಚಿಸಿರಿ. ನೀವು ಪ್ರಬುದ್ಧರಾಗುತ್ತೀರಿ. ಸಂವಿಧಾನ ಎಂಬ ಪರಿಕಲ್ಪನೆಯೇ ಎಂಥ ಅದ್ಭುತ ಎನಿಸುತ್ತದೆ. ಜೊತೆಗೆ ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಲಿಖಿತ ಸಂವಿಧಾನ! ಇದಕ್ಕಾಗಿ ಹೆಮ್ಮ ಪಡಬೇಕು ಹಾಗೂ ಆಸಕ್ತಿಯಿಂದ ತಿಳಿಯಬೇಕು.

ಇಷ್ಟೇ ನಿಮ್ಮ ಪುಸ್ತಕಗಳಲ್ಲಿರುವುದು. ಇದು ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ಜೀವನದಲ್ಲಿ ಮುಂದೆಹೋಗಲು ಅನುಕೂಲ ಮಾಡಿಕೊಡುತ್ತದೆ. ಹಾಗಾಗಿ, ಚಿಂತೆ ಬಿಡಿ, ಕೆಲಸ ನೋಡಿ! ಕೆಲಸ ಬದುಕಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ!

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !