ಕುರಿಗಾರಿಕೆ ಅಭಿವೃದ್ಧಿಗೆ ₹100 ಕೋಟಿ ಮೀಸಲು: ಸಚಿವ ಬಂಡೆಪ್ಪ ಕಾಂಶೆಂಪೂರ್

7
ಪ್ರತಿಭಾಪುರಸ್ಕಾರ ಸಮಾರಂಭ

ಕುರಿಗಾರಿಕೆ ಅಭಿವೃದ್ಧಿಗೆ ₹100 ಕೋಟಿ ಮೀಸಲು: ಸಚಿವ ಬಂಡೆಪ್ಪ ಕಾಂಶೆಂಪೂರ್

Published:
Updated:
Deccan Herald

ಕೋಲಾರ: ‘ಕುರುಬರ ಕುಲ ಕಸುಬಾಗಿರುವ ಕುರಿಗಾರಿಕೆ ಅಭಿವೃದ್ಧಿಗೆ ₹100 ಕೋಟಿ ಮೀಸಲಿಡಲಾಗಿದೆ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಜಿಲ್ಲಾ ಕುರುಬರ ಸಂಘದಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಭೂ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಮೂಲಕ ರೈತರಿಗೆ ಸಾಲ ಸೌಕರ್ಯ ನೀಡಲಾಗುವುದು’ ಎಂದು ಹೇಳಿದರು.

‘ಸಹಕಾರ ಕ್ಷೇತ್ರದಲ್ಲಿ ಕೆಎಂಎಫ್ ಮುಂಚೂಣಿಯಲ್ಲಿದ್ದರೆ, ಕೋಲಾರ ಹಾಲು ಒಕ್ಕೂಟ ಮುಂಚೂಣಿಯಲ್ಲಿದೆ. ನೀರಿನ ಕೊರತೆ ಮಧ್ಯೆಯೂ ರೈತರು ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೈತರು ಕೃಷಿ ಪದ್ದತಿಯಲ್ಲಿ ಅಳವಡಿಸಿರುವ ಪದ್ದತಿ ಇಸ್ರೆಲ್‌ಗಿಂತಲೂ ಮಾದರಿಯಾಗಿದೆ’ ಎಂದರು.

‘ಯಾವುದೇ ಸರ್ಕಾರ ಆಡಳಿತದಲ್ಲಿದ್ದರೂ ಸಮಾಜಕ್ಕೆ ಅನುದಾನ ಮೀಸಲಿಡುವುದು ಸಹಜ. ಆದರೆ, ಅದನ್ನು ಪಡೆದುಕೊಳ್ಳಲು ನಾವು ಮುಂಚೂಣಿಯಲ್ಲಿ ಇರಬೇಕು. ನಮ್ಮ ಕುಲಕಸುಬು ಕುರಿಗಾರಿಕೆಯನ್ನು ಉದ್ಯಮವಾಗಿಸಿಕೊಂಡರೆ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

‘ಶಿಕ್ಷಣ ಕ್ರಾಂತಿ ಅದಾಗ ಸಮುದಾಯದ ಮಕ್ಕಳು ಸಮಾದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ರಾಜಕಾರಣಿಗಳು 5 ವರ್ಷ ಅಧಿಕಾರ ಅನುಭವಿಸುತ್ತಾರೆ. ಆದರೆ ಉತ್ತಮ ಶಿಕ್ಷಣ ಪಡೆದು ಅಧಿಕಾರಿಗಳಾದವರು ನಿವೃತ್ತಿ ವೇಳೆಗೆ ಶಾಸಕರಂತೆ ಹೆಸರುಗಳಿಸುತ್ತಾರೆ. ಐಎಎಸ್ ಅಧಿಕಾರಿಯಾಗಿ ನಿವೃತ್ತಿಹೊಂದುವವರು ಸಚಿವರಂತೆ ಹೆಸರುಗಳಿಸುತ್ತಾರೆ. ಹೀಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

‘ಒಂದು ಸಮಾಜದಿಂದ ರಾಜಕೀಯವಾಗಿ ಮುಂದೆ ಬರಲು ಯಾರಿಂದಲೂ ಸಾಧ್ಯವಿಲ್ಲ ಎಲ್ಲರ ಸಹಕಾರ ಅಗತ್ಯ’ ಎಂದು ಅರಣ್ಯ ಇಲಾಖೆ ಸಚಿವ ಶಂಕರ್ ಅಭಿಪ್ರಾಯಪಟ್ಟರು.

‘ವರ್ತೂರು ಪ್ರಕಾಶ್ ಹಿಂದಿನ ಚುನಾವಣೆಯಲ್ಲಿ ಆಯ್ಕೆಗೊಳ್ಳದೇ ಇರುವ ನೋವು ತಮಗಿದೆ. ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದೇ ಆದಲ್ಲಿ ಸಮಾಜದ ಬಹುತೇಕ ಸಮಸ್ಯೆಗಳಿಗೆ ಅವರು ಸ್ಪಂದಿಸಲಿದ್ದಾರೆ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ‘ರಾಜ್ಯದಲ್ಲಿ ಕನಕ ಭವನ ಮತ್ತು ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲು ವಿವಿಧ ಇಲಾಖೆಗಳಲ್ಲಿ ಮೀಸಲಿರಿಸಿರುವ ಅನುದಾನ ಬಳಕೆಯಾಗಬೇಕು’ ಎಂದು ಹೇಳಿದರು.
‘ಶಫರ್ಡ್ಸ್ ಇಂಡಿಯಾ ವೇದಿಕೆಯ ಸಮಾವೇಶವನ್ನು 2019ರಲ್ಲಿ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸಮುದಾಯವು ಇಡೀ ದೇಶದಲ್ಲಿ ಸಂಘಟನೆಗೊಳ್ಳಲಿ’ ಎಂದು ಆಶಿಸಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿ ಆಶೀರ್ವಾಚನ ನೀಡಿ ಮಾತನಾಡಿ, ‘ಸಮುದಾಯದ ಜನಪ್ರತಿನಿಧಿಗಳು ತುಳಿತಕ್ಕೆ ಒಳಗಾಗಿರುವ ಸಮಾಜಗಳನ್ನು ಮುಖ್ಯವಾಹಿನಿಗೆ ತರಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಕನಕ ಸಮುದಾಯ ಭವನವನ್ನು ನಿರ್ಮಿಸಲು ಪ್ರಕಾಶ್ ಒಬ್ಬರಿಗೇ ಶಕ್ತಿ ಇದೆ. ಆದರೆ 10 ವರ್ಷ ಬೇಕಿತ್ತೇ. ಜನ ಸರಿ ಇದ್ದಾರೆ ಆದರೆ ನಾಯಕರು ಸರಿ ಇಲ್ಲ ಎನ್ನುವ ಭಾವನೆ ಬರದಂತೆ ನಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ವರ್ತೂರು ಪ್ರಕಾಶ್ ಮಾತನಾಡಿ, ‘ಕ್ಷೇತ್ರದ ಜನ ನನಗೆ ರಜೆ ನೀಡಿದ್ದಾರೆ. ಈ ಸೋಲು ರಾಕ್‌ಸ್ಟೋನ್ ಇದ್ದಂತೆ ಯಾರು ಬೇಜಾರು ಮಾಡಿಕೊಳ್ಳಬೇಡಿ, ಚುನಾವಣೆಯಲ್ಲಿ ಸೋತಿದ್ದರೂ ನೈತಿಕತೆ ಕಳೆದುಕೊಂಡಿಲ್ಲ’ ಎಂದು ಹೇಳಿದರು.

ಕುರುಬ ಸಮುದಾಯದ 120 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಎಚ್.ಎಂ.ರೇವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎಸ್.ವೆಂಕಟೇಶ್, ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಮುನಿರಾಜು, ನಗರಠಾಣೆ ವೃತ್ತ ನಿರೀಕ್ಷಕ ಲೋಕೇಶ್, ನಂದಗುಡಿ ಪಿಎಸ್‍ಐ ಲಕ್ಷ್ಮಿನಾರಾಯಣ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !