ಬಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪತ್ರಿಕ್ರಿಯೆ

7
ರಸ್ತೆಗಿಳಿಯದ ಬಸ್‌ಗಳು, ಬಿಕೋ ಎಂದ ಬಸ್‌ ನಿಲ್ದಾಣಗಳು, ಬಾಗಿಲು ಮುಚ್ಚಿದ ಅಂಗಡಿಗಳು, ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ

ಬಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪತ್ರಿಕ್ರಿಯೆ

Published:
Updated:
Deccan Herald

ಚಿಕ್ಕಬಳ್ಳಾಪುರ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಕರೆ ನೀಡಿರುವ ‘ಭಾರತ್ ಬಂದ್‌’ಗೆ ಸೋಮವಾರ ಜಿಲ್ಲೆಯಲ್ಲಿ ಉತ್ತಮ ಪತ್ರಿಕ್ರಿಯೆ ವ್ಯಕ್ತವಾಯಿತು.

ಸಿಪಿಐ, ಸಿಐಟಿಯು ಸೇರಿ ಎಡಪಕ್ಷ ಸಂಘಟನೆಗಳು, ಸಾರಿಗೆ ನಿಗಮಗಳ ನೌಕರರ ಒಕ್ಕೂಟಗಳು, ಕನ್ನಡಪರ, ರೈತ ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕಾರಣ ಬಂದ್‌ ಭಾಗಶಃ ಪೂರ್ಣವಾಯಿತು. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸಿದ್ದವು. ಪರಿಣಾಮ, ಬಸ್‌ ನಿಲ್ದಾಣಗಳು ಬಿಕೋ ಎಂದವು. ಬಸ್‌ಗಳಿಲ್ಲದೆ ಅಲ್ಲಲ್ಲಿ ಪ್ರಯಾಣಿಕರು ಪರದಾಡಿದ ದೃಶ್ಯಗಳು ಗೋಚರಿಸಿದವು.

ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟ ಬಂದ್‌ನಿಂದ ಅಂತರ ಕಾಯ್ದುಕೊಂಡಿರುವ ಕಾರಣಕ್ಕೆ ಸರಕು ಸಾಗಣೆ ವಾಹನಗಳ ಓಡಾಟ ಎಂದಿಗಿಂತಲೂ ಕಡಿಮೆ ಇತ್ತು. ಆಟೊಗಳ ಸಂಚಾರ ವಿರಳವಾಗಿ ಕಂಡುಬಂತು. ಕೆಲ ಖಾಸಗಿ ಬಸ್‌ಗಳು ಸಂಚಾರ ನಡೆಸಿದವು. ಆದರೆ ಅವುಗಳಿಗೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಔಷಧಿ ಮಳಿಗೆ, ಆಸ್ಪತ್ರೆಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಉಳಿದಂತೆ ನಗರದ ಬಹುಪಾಲು ಅಂಗಡಿ, ಮಳಿಗೆಗಳು, ಹೊಟೇಲ್‌ಗಳು ಬಾಗಿಲು ಮುಚ್ಚಿದ್ದವು. ಇದರಿಂದಾಗಿ ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಶಾಖೆಗಳು, ಅಂಚೆ ಕಚೇರಿಗಳು ಬಾಗಿಲು ತೆರೆಯಲಿಲ್ಲ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತ ಸೋಮವಾರ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿತ್ತು.

ಬಂದ್‌ ಪ್ರಯುಕ್ತ ನಗರದ ಪ್ರಮುಖ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಮಧ್ಯಾಹ್ನದ ನಂತರ ನಗರ ಸಹಜ ಸ್ಥಿತಿಗೆ ಮರಳುತ್ತ ಬಂತು. ಸಂಜೆ ವೇಳೆಗೆ ವಾಹನಗಳು, ಬಸ್ ಸಂಚಾರ ಆರಂಭಗೊಂಡಿತ್ತು.

ಕೇಂದ್ರದ ವಿರುದ್ಧ ಆಕ್ರೋಶ
ನಗರದಲ್ಲಿ ಸೋಮವಾರ ಕಾಂಗ್ರೆಸ್‌, ಕನ್ನಡಪರ ಸಂಘಟನೆಗಳು ಮತ್ತು ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಿ.ಬಿ.ರಸ್ತೆಯಲ್ಲಿ ಎತ್ತಿನಗಾಡಿಯ ಮೆರವಣಿಗೆ ನಡೆಸಿ, ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ಸುಟ್ಟು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಿನಿ ಸಿಲಿಂಡರ್‌ ಹೊತ್ತು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ‘ಕಾರ್ಪೊರೇಟ್ ಕಂಪೆನಿಗಳ ಪರ ಕೆಲಸ ಮಾಡುವ ಪ್ರಧಾನಿ ಮೋದಿ ಅವರು ಒಬ್ಬ ಮಹಾ ಸುಳ್ಳುಗಾರ. ಒಳ್ಳೆಯ ದಿನಗಳು ಬರಲಿವೆ ಎಂದು ಭರವಸೆ ಹುಟ್ಟಿಸಿ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಜನವಿರೋಧಿ ನೀತಿ ಹೆಚ್ಚಳವಾಗಿದೆ. ಪ್ರಧಾನಿ ಮೋದಿ ಅವರ ಏಕಪಕ್ಷೀಯ ಆಡಳಿತ ಅಂತ್ಯವಾಗಬೇಕಿದೆ’ ಎಂದು ಹೇಳಿದರು.

‘ಯುಪಿಎ ಸರ್ಕಾರದಲ್ಲಿ ತೈಲ ಬೆಲೆ ಹೆಚ್ಚಾದಾಗ ಪ್ರಜೆಗಳಿಗೆ ತೆರಿಗೆಯ ಹೊರೆ ಬೀಳದಂತೆ ನಿಯಂತ್ರಣ ಮಾಡುತ್ತಿದ್ದೆವು. ಈಗ ತೆರಿಗೆಯ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಿ ಹಣವನ್ನು ಕಬಳಿಸುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಇವತ್ತು ಅಧಃಪತನಕ್ಕಿಳಿದಿದೆ. ಮೋದಿ ಸರಕಾರ ಹೃದಯ ಶೂನ್ಯವಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ಕೂಲಿ ಕಾರ್ಮಿಕ ವರ್ಗದ ಬದುಕು ನರಕ ಸದೃಶವಾಗಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರು ನೇತೃತ್ವದ ಸರ್ಕಾರ ಮತ್ತು ಇದೀಗ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿವೆ. ಆದರೆ ಕೇಂದ್ರ ಸರ್ಕಾರ ರೈತರ ಹಿತ ಕಾಯುವ ಕಾಳಜಿ ತೋರಲಿಲ್ಲ. ಇದೀಗ ತೈಲ ಬೆಲೆ ಏರಿಕೆಯಿಂದ ವಿವಿಧ ದಿನ ಬಳಕೆ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರ ಬದುಕು ಹೈರಾಣಾಗಿದೆ. ತಮಗೆ ಮೋಸ ಮಾಡಿದವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಜಯಂಧರ್ ಮಾತನಾಡಿ, ‘ದೇಶವನ್ನು ರಾಮ ರಾಜ್ಯ ನಿರ್ಮಾಣ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಮೋದಿ ಒಬ್ಬ ಪಕ್ಕಾ ಗುಜರಾತಿ ವ್ಯಾಪಾರಿ. ಅವರು ಎಲ್ಲವನ್ನೂ ವ್ಯವಹಾರದ ದೃಷ್ಟಿಯಿಂದ ನೋಡುತ್ತಾರೆ. ದಿನ ಬೆಳಗಾದರೆ ವಿದೇಶ ಪ್ರವಾಸ ಮಾಡುವುದೇ ಕೆಲಸವಾಗಿದೆ. ಪ್ರವಾಸಕ್ಕೆ ಖರ್ಚು ಮಾಡಿದ ಹಣವನ್ನು ರೈತರ ಸಾಲ ಮನ್ನಾಕ್ಕೆ ಬಳಸಿದ್ದರೆ ಅನುಕೂಲವಾಗುತ್ತಿತ್ತು. ಅನೇಕ ರೈತರ ಬದುಕು ಹಸನಾಗುತ್ತಿತ್ತು’ ಎಂದು ಹೇಳಿದರು.

‘ಬ್ರಹ್ಮಚಾರಿಯಾಗಿರುವ ಮೋದಿ ಅವರಿಗೆ ಸಂಸಾರಸ್ಥರ ಕಷ್ಟಗಳು ಅರಿವಾಗುತ್ತಿಲ್ಲ. ಯುಪಿಎ ಅವಧಿಯಲ್ಲಿ ₨300 ಆಸುಪಾಸು ಇದ್ದ ಸಿಲಿಂಡರ್ ಬೆಲೆ ಇವತ್ತು ₨900ಕ್ಕೆ ಏರಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಡವರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಬಸ್ ಪ್ರಯಾಣ ದರ ದುಬಾರಿಯಾಗುತ್ತಿದೆ. ಇನ್ನೊಂದೆಡೆ ರೈತಾಪಿ ಜನರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ಇಲ್ಲದೆ ರೈತರು ಬದುಕು ಸಂಕಷ್ಟಕ್ಕೆ ಸಿಲುಕಿದೆ’ ಎಂದು ತಿಳಿಸಿದರು.

‘ಮಹಿಳೆಯರನ್ನು, ಗೋವವನ್ನು ಪೂಜಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಮೋದಿ ಚಕಾರ ಎತ್ತುತ್ತಿಲ್ಲ. ಈ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಒಗೆಯಬೇಕು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು’ ಎಂದರು.

ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಕಿಸಾನ್‌ ಖೇತ್‌ ಮಜ್ದೂರ್ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ, ಮುಖಂಡ ಮೊಜಾಮಿಲ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !