ಸಾಮಾಜಿಕ ಜಾಲತಾಣದಲ್ಲಿ ಕಾವು ಪಡೆದ ಬಂದ್‌ ಚರ್ಚೆ

7

ಸಾಮಾಜಿಕ ಜಾಲತಾಣದಲ್ಲಿ ಕಾವು ಪಡೆದ ಬಂದ್‌ ಚರ್ಚೆ

Published:
Updated:

ಬೆಂಗಳೂರು: ಪೆಟ್ರೋಲ್‌, ಡೀಸೆಲ್ ಬೆಲೆ ಗಗನಚುಂಬಿಯಾಗಿರುವುದಕ್ಕೆ ದೇಶದಾದ್ಯಂತ ಬಂದ್‌ ಆಚರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಕ್ಕೂ ಈ ಬಂದ್‌ ಬಿಸಿ ತಟ್ಟಿದ್ದು, ಬೆಲೆ ಏರಿಕೆಗೆ ಯಾರು ಹೊಣೆಗಾರರು ಎನ್ನುವ ಚರ್ಚೆ ಅಲ್ಲಿ ಕಾವು ಪಡೆದುಕೊಂಡಿದೆ.

‘ಪೆಟ್ರೋಲ್ ದರದ ವಿರುದ್ಧ ಬ೦ದ್ ಮಾಡ್ದೀವಿ ಅ೦ತ ಕಾ೦ಗ್ರೇಸನವರೇ ಬೀಗಬೇಡಿ. 2013ರಲ್ಲಿ ಪೆಟ್ರೋಲ್‌ ದರ ₹80 ದಾಟಿದ್ದನ್ನು ನೋಡಿದ್ದೇವೆ...’ ಎಂದು ಪ್ರಶಾಂತ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

ಪೆಟ್ರೋಲ್‌ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಉಸ್ತುವರಿ ವಹಿಸಿರುವ ರಮ್ಯಾ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ತೈಲ ಬೆಲೆ ಹೆಚ್ಚಾಗಿದೆ ಎಂಬುದನ್ನು ಪ್ರತಿಪಾದಿಸಿದ್ದಾರೆ.

 

‘ಪೆಟ್ರೋಲ್‌, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಕೇವಲ ಅದಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಸಾರಿಗೆ, ಸರಕು ಸಾಗಣೆ, ಆಹಾರ ಪದಾರ್ಥಗಳು... ಹೀಗೆ ಕೊಂಡಿಯಂತೆ ಎಲ್ಲಾ ಪದಾರ್ಥಗಳ ಬೆಲೆ ಏರುತ್ತದೆ’ ಎಂದು ಗೀತಾ ಎನ್ನುವವರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಅವತ್ತು ದುಡಿದು ಅವತ್ತಿನ ಜೀವನ ನಡೆಸುವ ಸಣ್ಣಪುಟ್ಟ ಅಂಗಡಿಗಳು-ಹೋಟೆಲ್‌ಗಳನ್ನು ಮುಚ್ಚಿಸಿ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಹಿಮೆಯ ‘ಇಂದಿರಾ ಕ್ಯಾಂಟೀನ್’ಗಳನ್ನು ಬಿಟ್ಟಿರುವುದು ಡಬಲ್‌ ಸ್ಟ್ಯಾಂಡರ್ಡ್ ಅಲ್ಲವೇ?’ ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಅವರು ಬರೆದುಕೊಂಡಿರುವ ಪೋಸ್ಟ್ ವಿರೋಧಿಸಿ ಅನೇಕರು ಕಮೆಂಟ್‌ ಹಾಕಿದ್ದಾರೆ.

‘ಸಾರ್ ನಿಮ್ಮದು ಕೇವಲ ಪ್ರಶ್ನೆಗಳೇ ಹೊರತು ಉತ್ತರಗಳಿಲ್ಲ.... ಕಾಂಗ್ರೆಸ್‌ನವರು ಲೋಕಲ್‌ ಕಳ್ಳರು. ನಿಮ್ಮ ಪಕ್ಷದವರು ಸ್ಟ್ಯಾಂಡರ್ಡ್‌ ಕಳ್ಳರು’ ಎಂದು ಗೋವಿಂದ ರಾಜ್‌ ಪ್ರತಿಕ್ರಿಯಿಸಿದ್ದಾರೆ.

‘ಪ್ರತಿಭಟನೆ, ಬಂದ್‌ಗಳನ್ನು ತಮ್ಮ ಪಕ್ಷದವರು ನಾಲ್ಕೈದು ವರ್ಷಗಳ ಹಿಂದೆ ಮಾಡಿದ್ದಾಗ, ಇದೇ ರೀತಿ ಸೂಕ್ಮತೆಯಿಂದ ಪ್ರತಿಕ್ರಿಯಿಸಬಹುದಿತ್ತಲ್ಲಾ? ಏಕಿಂತಹ ಡಬಲ್ ಸ್ಟ್ಯಾಂಡರ್ಡ್ ಸೆಲೆಕ್ಟಿವಿಸಮ್?’ ಎಂದು ಪ್ರಸಾದ್‌ ಮೂರ್ತಿ ಪ್ರಶ್ನಿಸಿದ್ದಾರೆ.

ಅಜಿತ್‌ ಡಾನಿಲ್‌ ಎನ್ನುವವರು ಕಮಲದ ಮೇಲೆ ‘ನಿಮ್ಮ ತಪ್ಪಿಗೆ ನೀವು ಬೆಲೆ ತೆರುತ್ತಿದ್ದೀರಿ’ ಎನ್ನುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

‘ಪೆಟ್ರೋಲ್ ಬೆಲೆ ಹೆಚ್ಚಾಯ್ತು ಅರ್ಚಾಡ್ತರೆ.
ಆರ್ಥಿಕತೆ ಗೊತ್ತಿಲ್ದೋರು ಕಿರ್ಚಾಡ್ತರೆ.
ಗೊತ್ತಿರೋರು ಬಾಯಿ ಮುಚ್ಕೊಂಡ್ ಕೂತಿರ್ತಾರೆ.
ಹೇಗೋ ಮಾಡಿ ಜನರ ದಾರಿ ತಪ್ಪಿಸ್ತಾರೆ.
ಹಾಗೋ-ಹೀಗೊ ಮಾಡಿ ಖುರ್ಚಿ ಹಿಡ್ಕೋತಾರೆ.
ಅಧಿಕಾರ ಹಿಡಿದ್ಮೇಲೆ ಎಲ್ಲಾ ಮರ್ತೋಗ್ತಾರೆ.
ಸಾಮಾನ್ಯ ಜನ ಮಾತ್ರ ಬಾಯ್ ಬಾಯ್ ಬಡ್ಕೋತಾರೆ’   

–ಹೀಗೆಂದು ಜಗದೀಶ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಟ್ರೋಲ್‌ಗಳು ಸದ್ದು

ಬಂದ್‌ ಕುರಿತ ಟ್ರೋಲ್‌ಗಳೂ ಸದ್ದು ಮಾಡುತ್ತಿದ್ದು, ‘ಬೆಂಗಳೂರಿನಲ್ಲಿ ಬಹಳಷ್ಟು ಬಾರಿ ಕೇಳುವ ಪ್ರಶ್ನೆಯೆಂದರೆ... ಇವತ್ತು ಬಂದ್ ಇದಿಯಾ?’ , ‘ಯಾವುದರ ಬೆಲೆ ಹೆಚ್ಚಾದರೂ ಒಂದೇ ಪರಿಹಾರ ಬಂದ್‌’.. ಎಂಬ ಟ್ರೋಲ್‌ಗಳು ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿವೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !