‘ಭಾರತ್‌ ಬಂದ್‌’ಗೆ ಕೋಲಾರ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ: ಜನಜೀವನ ಅಸ್ತವ್ಯಸ್ತ

7
ತೈಲೋತ್ಪನ್ನ ಬೆಲೆ ಏರಿಕೆಗೆ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ: ವಹಿವಾಟು– ಬಸ್‌ ಸೇವೆ ಸ್ಥಗಿತ

‘ಭಾರತ್‌ ಬಂದ್‌’ಗೆ ಕೋಲಾರ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ: ಜನಜೀವನ ಅಸ್ತವ್ಯಸ್ತ

Published:
Updated:
Deccan Herald

ಕೋಲಾರ: ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪಕ್ಷವು ‘ಭಾರತ್‌ ಬಂದ್’ಗೆ ಕರೆ ಕೊಟ್ಟಿದ್ದರಿಂದ ಜಿಲ್ಲೆಯಾದ್ಯಂತ ಸೋಮವಾರ ವಾಣಿಜ್ಯ ವಹಿವಾಟು ಹಾಗೂ ಬಸ್‌ ಸೇವೆ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಯಿತು.

ಬಂದ್‌ ಹಿನ್ನೆಲೆಯಲ್ಲಿ ಇಡೀ ದಿನ ಅಂಗಡಿಗಳು ಮುಚ್ಚಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಡಿಪೊದಲ್ಲೇ ನಿಲ್ಲಿಸಲಾಗಿತ್ತು. ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ. ಆಟೊ ಹಾಗೂ ಸರಕು ಸಾಗಣೆ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಯಿತು.

ಬೆರಳೆಣಿಕೆ ವರ್ತಕರು ಬೆಳಿಗ್ಗೆ ಅಂಗಡಿ ತೆರೆದಿದ್ದರು. ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್‌ಎನ್‌ಎಲ್‌ ಸೇರಿದಂತೆ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕೆಲ ಹೊತ್ತು ಕಾರ್ಯ ಚಟುವಟಿಕೆಗಳು ನಡೆದವು. ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಅಂಗಡಿ, ಬ್ಯಾಂಕ್‌, ಖಾಸಗಿ ಕಂಪನಿ ಹಾಗೂ ಸರ್ಕಾರಿ ಕಚೇರಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಅಲ್ಲದೇ, ಲಾರಿ, ಆಟೊಗಳನ್ನು ತಡೆದು ಬಂದ್‌ಗೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ಪ್ರಯಾಣ ಮೊಟಕು

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಬಂದ್‌ನ ಸಂಗತಿ ತಿಳಿಯದೆ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುತ್ತಾ ನಿಂತಿದ್ದರು. ಕೊನೆಗೂ ಬಸ್‌ ಬಾರದಿದ್ದರಿಂದ ಪ್ರಯಾಣ ಮೊಟಕುಗೊಳಿಸಿ ಮನೆಗೆ ಹಿಂದಿರುಗಿದರು.

ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಆಟೊ ಸಿಗದೆ ನಡೆದೇ ಆಸ್ಪತ್ರೆ ತಲುಪುವಂತಾಯಿತು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು.

ಶಾಲಾ ಕಾಲೇಜಿಗೆ ರಜೆ

ಜಿಲ್ಲಾಡಳಿತವು ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮುಂಚೆಯೇ ರಜೆ ಘೋಷಿಸಿತ್ತು. ಹೀಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳತ್ತ ಸುಳಿಯಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದರಿಂದ ಗ್ರಾಹಕರು ತೊಂದರೆ ಅನುಭವಿಸಿದರು.

ಆಸ್ಪತ್ರೆಗಳು, ಔಷಧ ಮಾರಾಟ ಮಳಿಗೆಗಳು ಸೇವೆ ಒದಗಿಸಿದವು. ಚಿತ್ರಮಂದಿರಗಳಲ್ಲಿ ಬೆಳಗಿನ ಮೂರು ಪ್ರದರ್ಶನ ಸ್ಥಗಿತಗೊಳಿಸಲಾಯಿತು. ಸಂಜೆಯ ನಂತರ ಕೊನೆಯ ಪ್ರದರ್ಶನ ನಡೆಯಿತು. ಆದರೆ, ಪ್ರೇಕ್ಷಕರ ಸಂಖ್ಯೆ ತುಂಬಾ ಕಡಿಮೆ ಇತ್ತು.

ಸೌದೆ ಒಲೆ ನಿರ್ಮಾಣ: ಬೈಕ್‌ ‍ರ‍್ಯಾಲಿ ಮತ್ತು ಎತ್ತಿನ ಬಂಡಿ ಮೆರವಣಿಗೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಬಂದ್‌ ಬೆಂಬಲಿಸಿ ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ರಸ್ತೆ ಮಧ್ಯೆ ಸೌದೆ ಒಲೆ ನಿರ್ಮಿಸಿ ಕಾಫಿ ಮಾಡಿ, ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಮಾರುಕಟ್ಟೆಯಲ್ಲಿ ಕ್ರಿಕೆಟ್‌: ಸದಾ ಜನಜಂಗುಳಿ ಮತ್ತು ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಕ್ಕಳು ಮಾರುಕಟ್ಟೆ ಆವರಣದಲ್ಲೇ ಕ್ರಿಕೆಟ್‌ ಆಡಿ ಸಂಭ್ರಮಿಸಿದರು. ಪೆಟ್ರೋಲ್‌ ಬಂಕ್‌ಗಳು ಮುಚ್ಚಿದ್ದರಿಂದ ವಾಹನ ಸವಾರರು ಪೆಟ್ರೋಲ್‌ ಹಾಗೂ ಡೀಸೆಲ್‌ಗಾಗಿ ಬಂಕ್‌ನಿಂದ ಬಂಕ್‌ಗೆ ಅಲೆಯುವಂತಾಯಿತು.

ಪೊಲೀಸ್‌ ಬಂದೋಬಸ್ತ್‌: ಸರ್ಕಾರಿ ಕಚೇರಿಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತ, ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಜತೆಗೆ ಪೊಲೀಸ್‌ ಗಸ್ತು ಹೆಚ್ಚಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸುತ್ತಲೇ ಇದ್ದರು.

ಜೆಡಿಎಸ್‌ ಹಾಗೂ ಸಿಪಿಎಂ ಕಾರ್ಯಕರ್ತರು, ಜಯಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ, ತ್ರಿಚಕ್ರ ವಾಹನ ಚಾಲಕರು ಮತ್ತು ಮಾಲೀಕರ ಸಂಘ, ನೀರಾವರಿ ಹೋರಾಟ ಸಮಿತಿ, ವರ್ತಕರ ಸಂಘದ ಸದಸ್ಯರು ಬಂದ್‌ಗೆ ಬೆಂಬಲ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !