ಬಿಎಂಸಿ ಸ್ಥಾಪನೆಗೆ ಅನುಮೋದನೆ: ಕೋಚಿಮುಲ್ ನಿರ್ದೇಶಕ ರಾಮಕೃಷ್ಣೇಗೌಡ

7

ಬಿಎಂಸಿ ಸ್ಥಾಪನೆಗೆ ಅನುಮೋದನೆ: ಕೋಚಿಮುಲ್ ನಿರ್ದೇಶಕ ರಾಮಕೃಷ್ಣೇಗೌಡ

Published:
Updated:
Deccan Herald

ಕೋಲಾರ: ‘ತಾಲ್ಲೂಕಿನ ಹಾಲು ಉತ್ಪಾದನಾ ಕೇಂದ್ರಗಳಲ್ಲಿ ಬಲ್ಕ್ ಮಿಲ್ಕ್ ಕೇಂದ್ರ (ಬಿಎಂಸಿ) ಸ್ಥಾಪಿಸಲು ಒಕ್ಕೂಟದ ಆಡಳಿತ ಮಂಡಳಿಯಿಂದ ಅನುಮೋದನೆ ದೊರೆತಿದ್ದು, 2 ವರ್ಷದಲ್ಲಿ ಬಿಎಂಸಿ ನಿರ್ಮಾಣ ಮಾಡಲಾಗುತ್ತದೆ’ ಎಂದು ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ ತಿಳಿಸಿದರು.

ಕೋಚಿಮುಲ್‌ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ (ಎಂಪಿಸಿಎಸ್‌) ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯಲ್ಲಿ ಮಾತನಾಡಿ, ‘ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡುವಂತೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಬಿಎಂಸಿ ಕೇಂದ್ರ ಸ್ಥಾಪನೆ ಮಾಡುತ್ತಿರುವುದರಿಂದ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸಬೇಕು. ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಬಗ್ಗೆ ತಾಂತ್ರಿಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

‘ನಿರ್ದೇಶಕನಾಗಿ ಆಯ್ಕೆಯಾದ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ. ಅನೇಕ ಸಂಘಗಳನ್ನು ಆರ್ಥಿಕವಾಗಿ ಸುಧಾರಿಸಲು ಒಕ್ಕೂಟದಿಂದ ಸೌಕರ್ಯ ಒದಗಿಸಿದ್ದೇನೆ. ಮಹಿಳಾ ಸಂಘಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಕಾರ್ಯದರ್ಶಿಗಳು ಸಂಘಗಳನ್ನು ಆರ್ಥಿಕವಾಗಿ ಲಾಭದತ್ತ ಕೊಂಡೊಯ್ಯಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು.

‘ಆಡಳಿತ ಮಂಡಳಿ ರಚನೆಯಾದ ನಂತರ ಶೇ 16ರಷ್ಟಿದ್ದ ಎಸ್ಎನ್ಎಫ್‌ ಪ್ರಮಾಣವನ್ನು ಶೇ 94ಕ್ಕೆ ಹೆಚ್ಚಿಸಲಾಗಿದೆ. ರೈತರು ಹಾಲಿನ ಕೇಂದ್ರಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಸರ್ಕಾರದಿಂದ ಪ್ರತಿ ಲೀಟರ್‌ಗೆ ₹ 5 ಪ್ರೋತ್ಸಾಹಧನ ಪಡೆಯಲು ಅರ್ಹರಾಗುತ್ತಾರೆ’ ಎಂದು ಹೇಳಿದರು.

ಸ್ವಚ್ಛತೆ ಕಾಪಾಡಿ: ‘ಹಾಲು ಉತ್ಪನ್ನಗಳ ಉತ್ಪಾದನೆಗೆ ಜೈವಿಕ ಶಿಲೀಂಧ್ರವುಳ್ಳ ಹಾಲು ಅತ್ಯಗತ್ಯ. ಬಿಎಂಸಿ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ ಮನವಿ ಮಾಡಿದರು.

‘ರೈತರು ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಅಪಘಾತ ವಿಮೆ, ಜೀವವಿಮೆ ಎರಡೂ ಯೋಜನೆಗಳಿಗೆ ₹ 1 ಲಕ್ಷ ಮತ್ತು ₹ 2 ಲಕ್ಷ ಪರಿಹಾರ ಸಿಗುತ್ತದೆ. ಈ ಬಗ್ಗೆ ಸಂಘದ ಕಾರ್ಯದರ್ಶಿಗಳು ರೈತರಿಗೆ ಅರಿವು ಮೂಡಿಸಿ ವಿಮೆ ಕಂತು ಕಟ್ಟಿಸಬೇಕು. ಕಾರ್ಯದರ್ಶಿಗಳಿಗೆ ಆರೋಗ್ಯ ಸೇವೆ ಕಲ್ಪಿಸಲು ಮಂಡಳಿಗೆ ಶಿಫಾರಸ್ಸು ಮಾಡಲಾಗಿದೆ’ ಎಂದು ವಿವರಿಸಿದರು.

ಒಕ್ಕೂಟದ ನಿರ್ದೇಶಕಿ ಪಾರ್ವತಮ್ಮ, ಉಪ ವ್ಯವಸ್ಥಾಪಕ ಶ್ರೀನಿವಾಸಗೌಡ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಸೊಣ್ಣೇಗೌಡ, ವೆಂಕಟೇಶಪ್ಪ. ಪಶು ವೈದ್ಯ ವಿ.ಎಂ.ರಾಜು ಹಾಜರಿದ್ದರು.

ಅಂಕಿ ಆಂಶ.....
* 255 ಎಂಪಿಸಿಎಸ್‌ ಕಾರ್ಯಾಚರಣೆಯಲ್ಲಿವೆ
* 234 ಸಾಮಾನ್ಯ ಸಂಘಗಳು ತಾಲ್ಲೂಕಿನಲ್ಲಿವೆ
* 21 ಮಹಿಳಾ ಸಂಘಗಳ ರಚನೆ
* 1.40 ಲಕ್ಷ ಲೀಟರ್ ಹಾಲು ಪ್ರತಿನಿತ್ಯ ಸಂಗ್ರಹ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !