ಹೋರಾಟಗಾರರಿಗೆ ದೇಶದ್ರೋಹಿಗಳ ಪಟ್ಟ: ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಸಾನು ಕಿಡಿ

7
ಬಹಿರಂಗ ಸಭೆಯಲ್ಲಿ ಕೇಂದ್ರದ ವಿರುದ್ಧ ಕಿಡಿ

ಹೋರಾಟಗಾರರಿಗೆ ದೇಶದ್ರೋಹಿಗಳ ಪಟ್ಟ: ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಸಾನು ಕಿಡಿ

Published:
Updated:
Deccan Herald

ಕೋಲಾರ: ‘ದೇಶದಲ್ಲಿ ಸಮಾನ ಶಿಕ್ಷಣ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹೋರಾಟಗಾರರಿಗೆ ಕೇಂದ್ರ ಸರ್ಕಾರವು ದೇಶದ್ರೋಹಿಗಳ ಪಟ್ಟ ಕಟ್ಟುತ್ತಿದೆ’ ಎಂದು ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು ಕಿಡಿಕಾರಿದರು.

ತಾರತಮ್ಯರಹಿತ ಸಮಾನ ಮತ್ತು ವೈಜ್ಞಾನಿಕ ಶಿಕ್ಷಣ ಕುರಿತು ಎಸ್‍ಎಫ್‍ಐ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ಒಕ್ಕೂಟವು ಸಮಾನ ಶಿಕ್ಷಣ ಜಾರಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಆದರೆ, ಕೇಂದ್ರವು ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡು ಹೋರಾಟಗಾರರನ್ನು ಜೈಲಿಗೆ ಕಳುಹಿಸುತ್ತಿದೆ’ ಎಂದು ದೂರಿದರು.

‘ಕೇಂದ್ರವು ದೇಶದ ವಿಶ್ವವಿದ್ಯಾನಿಲಯಗಳ ಮೇಲೆ ಪ್ರಭಾವ ಬೀರಿ ಅಲ್ಲಿನ ಪ್ರಗತಿಪರ ವಿದ್ಯಾರ್ಥಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟಿದೆ. ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರವು ವಿ.ವಿಗಳನ್ನು ಕೇಸರೀಕರಣಗೊಳಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಜನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಬಡವರು, ಕೂಲಿಕಾರರು, ಮಹಿಳೆಯರು, ದಲಿತರು, ಆದಿವಾಸಿಗಳ ಪರ ಧ್ವನಿ ಎತ್ತುವವರನ್ನು ಅಪರಾಧಿಗಳಂತೆ ಬಿಂಬಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಬ್ಯಾಂಕ್‌ನ ಹಣ ದೋಚಿ ಪರಾರಿಯಾಗಿರುವ ದೋಶದ್ರೋಹಿಗಳಿಗೆ ಮೋದಿ ರಕ್ಷಣೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ನರಳುತ್ತಿರುವ ಭಾರತ: ‘ಕೇಂದ್ರವು ಬಂಡವಾಳಶಾಹಿಗಳ ಪರವಾದ ಆರ್ಥಿಕ ನೀತಿ ಜಾರಿಗೊಳಿಸುತ್ತಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು, ದಲಿತರು, ರೈತರ ಬದುಕು ಬರ್ಬರವಾಗಿದೆ. ಮೋದಿ ಅರಳುತ್ತಿರುವ ಭಾರತ ನಿರ್ಮಾಣ ಮಾಡುತ್ತಿಲ್ಲ. ಬದಲಿಗೆ ನರಳುತ್ತಿರುವ ಭಾರತ ಸೃಷ್ಟಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಪಿತೂರಿ ನಡೆದಿದೆ: ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿವೆ. ಎಲ್ಲೆಡೆ ವಂತಿಗೆ ಹಾವಳಿ ಮಿತಿ ಮೀರಿದೆ. ಶೈಕ್ಷಣಿಕ ಶುಲ್ಕ ಹೆಚ್ಚಿಸುವ ಮೂಲಕ ಬಡ ಮಕ್ಕಳನ್ನು ಶಿಕ್ಷಣದಿಂದ ವಿಮುಖರನ್ನಾಗಿಸುವ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚಿಸುವ ಪಿತೂರಿ ನಡೆದಿದೆ’ ಎಂದು ವೇಮಗಲ್‌ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಜೆ.ಜಿ.ನಾಗರಾಜ್‌ ಕಳವಳ ವ್ಯಕ್ತಪಡಿಸಿದರು.

‘ಶಿಕ್ಷಣ ಇಲಾಖೆ ಅಧಿಕಾರಿಗಳೇ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಶಿಕ್ಷಣ ಸಂಸ್ಥೆಗಳು ನೀಡುವ ಚಿಲ್ಲರೆ ಕಾಸಿಗಾಗಿ ಅಧಿಕಾರಿಗಳೇ ವಂತಿಗೆ ಹಾವಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಸರ್ಕಾರದ ಹೊಣೆಗೇಡಿತನದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರ ಜಾಥಾ: ಸಭೆಗೂ ಮುನ್ನ ಎಸ್‌ಎಫ್‌ಐ ಸದಸ್ಯರು ಪ್ರವಾಸಿ ಮಂದಿರದಿಂದ ಪತ್ರಕರ್ತರ ಭವನದವರೆಗೆ ಜಾಥಾ ನಡೆಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ಎಸ್‍ಎಫ್‍ಐ ರಾಜ್ಯ ಘಟಕದ ಅಧ್ಯಕ್ಷ ಅಂಬರೀಶ್, ಕಾರ್ಯಾಧ್ಯಕ್ಷ ಗುರುರಾಜ್, ಕೇಂದ್ರ ಸಮಿತಿ ಸದಸ್ಯರಾದ ಬಸವರಾಜ್, ರೇಣುಕಾ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಾಸುದೇವರೆಡ್ಡಿ, ಕಾರ್ಯದರ್ಶಿ ಶಿವಪ್ಪ, ತಾಲ್ಲೂಕು ಘಟಕದ ಅಧ್ಯಕ್ಷೆ ಗಾಯಿತ್ರಿ, ಕಾರ್ಯದರ್ಶಿ ಶ್ರೀಕಾಂತ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !