ಕೋಲಾರ: ಮಳೆ ಅವಾಂತರ– ಶಹಿನ್‌ಷಾನಗರ ಮನೆಗಳಿಗೆ ನುಗ್ಗಿದ ನೀರು

7
ತಗ್ಗು ಪ್ರದೇಶದ ಜನರ ಬದುಕು ನೀರು ಪಾಲು

ಕೋಲಾರ: ಮಳೆ ಅವಾಂತರ– ಶಹಿನ್‌ಷಾನಗರ ಮನೆಗಳಿಗೆ ನುಗ್ಗಿದ ನೀರು

Published:
Updated:
Deccan Herald

ಕೋಲಾರ: ನಗರದಲ್ಲಿ ಸೋಮವಾರ ಮಳೆ ಸುರಿದಿದ್ದರಿಂದ ಶಹಿನ್‌ಷಾ ನಗರ ಐದನೇ ಅಡ್ಡರಸ್ತೆಯಲ್ಲಿ ಹಲವು ಮನೆಗಳಿಗೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಮಳೆಯು ತಗ್ಗು ಪ್ರದೇಶದ ಮನೆಗಳ ಜನರ ಬದುಕು ನೀರು ಪಾಲು ಮಾಡಿದೆ. ಬರದ ಬೇಗೆಯಿಂದ ಬಸವಳಿದಿದ್ದ ರೈತರಿಗೆ ವರುಣದೇವ ಖುಷಿ ಕೊಟ್ಟಿದ್ದರೆ ಶಹಿನ್‌ಷಾನಗರ ನಿವಾಸಿಗಳಿಗೆ ಕಣ್ಣೀರು ತರಿಸಿದ್ದಾನೆ.

ಬಡಾವಣೆಯ ಚರಂಡಿಗಳು ಹಾಗೂ ಮ್ಯಾನ್‌ಹೋಲ್‌ಗಳನ್ನು ಹಲವು ತಿಂಗಳಿಂದ ಸ್ವಚ್ಛಗೊಳಿಸಿರಲಿಲ್ಲ. ಹೀಗಾಗಿ ಚರಂಡಿ ಮತ್ತು ಮ್ಯಾನ್‌ಹೋಲ್‌ನಲ್ಲಿ ಕಸ ಕಟ್ಟಿಕೊಂಡು ನೀರಿನ ಹರಿವಿಗೆ ಸಮಸ್ಯೆಯಾಗಿತ್ತು. ಬೆಳಿಗ್ಗೆ ಸುಮಾರು ಅರ್ಧ ತಾಸು ಮಳೆ ಸುರಿದಿದ್ದರಿಂದ ಚರಂಡಿ ಮತ್ತು ಮ್ಯಾನ್‌ಹೋಲ್‌ ಸಂಪೂರ್ಣ ಭರ್ತಿಯಾಗಿ ನೀರು ಮನೆಗಳಿಗೆ ನುಗ್ಗಿದೆ.

ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ನೀರೆತ್ತುವ ಮೋಟರ್‌ನಂತಹ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ. ಮನೆಯಲ್ಲಿದ್ದ ಬಟ್ಟೆ, ಹಾಸಿಗೆ, ಅಕ್ಕಿ, ರಾಗಿ, ಬೇಳೆ ಕಾಳು ಮೂಟೆಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ನಿವಾಸಿಗಳಿಗೆ ಇಡೀ ದಿನ ಮಳೆ ನೀರನ್ನು ಮನೆಯಿಂದ ಹೊರ ಹಾಕುವುದೇ ಕೆಲಸವಾಯಿತು. ಮಳೆ ನೀರಿನಿಂದ ಒದ್ದೆಯಾಗಿರುವ ದಿನಸಿ ಪದಾರ್ಥ, ಬಟ್ಟೆ ಹಾಗೂ ಹಾಸಿಗೆಗಳನ್ನು ಮನೆಯ ಮುಂದೆ ಒಣಗಲು ಇಟ್ಟಿದ್ದ ದೃಶ್ಯ ಕಂಡುಬಂತು.

ಸಮಸ್ಯೆಗೆ ಸ್ಪಂದಿಸಲಿಲ್ಲ: ಮನೆಗಳಿಗೆ ನೀರು ನುಗ್ಗಿರುವ ಸಂಬಂಧ ಸ್ಥಳೀಯರು ನಗರಸಭೆ ನಿಯಂತ್ರಣ ಕೊಠಡಿಗೆ ಹಲವು ಬಾರಿ ಕರೆ ಮಾಡಿ ದೂರು ನೀಡಿದರೂ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸಲಿಲ್ಲ. ನಗರಸಭೆ ಸಿಬ್ಬಂದಿಯನ್ನು ಕಾದು ಹೈರಾಣಾದ ಸ್ಥಳೀಯರು ಸ್ವತಃ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದರು. ಮ್ಯಾನ್‌ಹೋಲ್‌ಗಳಲ್ಲಿ ಕಟ್ಟಿಕೊಂಡಿದ್ದ ಕಸ ಹೊರತೆಗೆದರು.

ಹಾವು ಚೇಳು ಕಾಟ: ಚರಂಡಿಗಳಲ್ಲಿ ಕಸ ಕಟ್ಟಿಕೊಂಡಿದ್ದು, ನೀರಿನ ಹರಿವಿಗೆ ಅಡ್ಡಿಯಾಗಿದೆ. ಹೀಗಾಗಿ ನೀರು ಚರಂಡಿಗಳಲ್ಲಿ ಹಿಮ್ಮುಖವಾಗಿ ಹರಿಯುತ್ತಿದ್ದು, ನೀರಿನ ಜತೆ ಹಾವು, ಕಪ್ಪೆ, ಚೇಳುಗಳು ಅಕ್ಕಪಕ್ಕದ ಮನೆಗಳಿಗೆ ನುಗ್ಗಿವೆ. ಇದರಿಂದ ಭಯಭೀತರಾಗಿರುವ ನಿವಾಸಿಗಳು ಸ್ವಂತ ಮನೆ ತೊರೆದು ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !