ನಗರದ ವಿವಿಧಡೆ ತರಹೇವಾರಿ ಪ್ರತಿಭಟನೆ

7
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಬಂದ್‌

ನಗರದ ವಿವಿಧಡೆ ತರಹೇವಾರಿ ಪ್ರತಿಭಟನೆ

Published:
Updated:
Deccan Herald

ಮಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರೋಧಿಸಿ ಸೋಮವಾರ ನಡೆದ ಭಾರತ್‌ ಬಂದ್‌ ಅಂಗವಾಗಿ ವಿವಿಧ ಕಾರ್ಮಿಕ ಸಂಘಟನೆಗಳು, ಬಸ್‌, ಆಟೊ ಹಾಗೂ ಸರಕು ಸಾಗಣೆ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘಟನೆಗಳ ಕಾರ್ಯಕರ್ತರು ನಗರದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದರು.

ಬಂದ್‌ ಬೆಂಬಲಿಸಿ ಮಾಜಿ ಶಾಸಕ ಜೆ.ಆರ್‌.ಲೋಬೊ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಜ್ಯೋತಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಬಳಿಕ ಕಂಕನಾಡಿವರೆಗೂ ಜಾಥಾ ನಡೆಸಿದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ನೇತೃತ್ವದ ಮತ್ತೊಂದು ತಂಡ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಕಾಲ್ನಡಿಗೆ ಜಾಥಾ ನಡೆಸಿತು.

ಜ್ಯೋತಿ ವೃತ್ತದಿಂದ ಐವನ್‌ ಡಿಸೋಜ ಎತ್ತಿನ ಗಾಡಿ ಏರಿ ಬಂದರೆ, ಕೆಲವರು ಕಾರು, ಆಟೊಗಳನ್ನು ತಳ್ಳಿಕೊಂಡು ಸಾಗಿದರು. ಹಲವರು ಸೈಕಲ್‌ ಏರಿ ಜಾಥಾದಲ್ಲಿ ಬಂದರು. ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಸೌದೆಯ ಒಲೆ ಉರಿಸಿ ಚಹಾ ತಯಾರಿಸಿದರು.

ಸಿಪಿಎಂ ಕಾರ್ಯಕರ್ತರು ಹಂಪನಕಟ್ಟೆಯ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರೆ, ಡಿವೈಎಫ್‌ಐ ಕಾರ್ಯಕರ್ತರು ಕೂಳೂರು ಬಳಿ ಒಲೆ ಉರಿಸಿ ಚಹಾ ತಯಾರಿಸಿ ದರ ಏರಿಕೆಯನ್ನು ವಿರೋಧಿಸಿದರು. ಆನ್‌ಲೈನ್‌ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ಸದಸ್ಯರು ರಾವ್‌ ಅಂಡ್‌ ರಾವ್‌ ರಸ್ತೆಯಲ್ಲಿ ಕಾರುಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಗೆ ಆಗ್ರಹಿಸಿದರು. ಜೆಡಿಎಸ್‌ ಕಾರ್ಯಕರ್ತರು ಬೆಂದೂರ್‌ವೆಲ್‌ ಬಳಿ ಪ್ರತಿಭಟನೆ ನಡೆಸಿದರು.

49 ಮಂದಿ ವಶ, ಬಿಡುಗಡೆ:

ರಸ್ತೆ ತಡೆ ಬಳಿಕ ಕಂಕನಾಡಿ ಮಾರುಕಟ್ಟೆವರೆಗೂ ಜಾಥಾ ನಡೆಸಿದ ಜೆ.ಆರ್‌.ಲೋಬೊ ನೇತೃತ್ವದ ತಂಡದಲ್ಲಿದ್ದ 49 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಕೆಲವು ಹೊತ್ತಿನ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

ಕೇಂದ್ರದ ವಿರುದ್ಧ ವಾಗ್ದಾಳಿ:

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಐವನ್ ಡಿಸೋಜ, ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ನಮ್ಮ ದೇಶದಲ್ಲಿ ನಿರಂತರವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಹೆಚ್ಚಳವಾಗುತ್ತಿದೆ. 2014ರಲ್ಲಿ ₹ 65ರಷ್ಟಿದ್ದ ಪ್ರತಿ ಲೀಟರ್‌ ಪೆಟ್ರೋಲ್‌ ದರ ಈಗ ₹ 80ರ ಗಡಿ ದಾಟಿದೆ. ಪ್ರತಿ ಲೀಟರ್‌ ಡೀಸೆಲ್‌ ದರ 2014ರಲ್ಲಿ ₹ 48 ಇತ್ತು. ಈಗ ₹ 74ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯೇ ಇದಕ್ಕೆ ಕಾರಣ’ ಎಂದು ವಾಗ್ದಾಳಿ ನಡೆಸಿದರು.

ಕೊಡಗು ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಆದರೆ, ಅವರ ನೆರವಿಗೆ ಕೇಂದ್ರ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ. ಬಡವರ ಕಷ್ಟಕ್ಕೆ ದನಿಯಾಗುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ದೂರಿದರು.

ಜಸ್ಟೀಸ್‌ ಫಾರ್‌ ಪೀಪಲ್‌ ಫೋರಂನ ದಯಾನಾಥ ಕೋಟ್ಯಾನ್ ಮಾತನಾಡಿ, ‘ಮೋದಿಯವರ ಆಡಳಿತದ 1,670 ದಿನಗಳಲ್ಲಿ ಜನರಿಗೆ ಅಚ್ಛೇ ದಿನದ ಪರಿಚಯವೂ ಆಗಿಲ್ಲ. ನಿರಂತರ ಬೆಲೆ ಏರಿಕೆಯಿಂದಾಗಿ ಮನುಷ್ಯರಿಗೇ ಬೆಲೆ ಇಲ್ಲದಂತಾಗಿದೆ’ ಎಂದು ಹೇಳಿದರು.

ಜೆಡಿಎಸ್‌ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ, ಇಂಟಕ್‌ ಮುಖಂಡ ಸುರೇಶ್, ಗೀತಾ ಉಚ್ಛಿಲ್‌ ಮಾತನಾಡಿದರು.

ಸಿಪಿಎಂ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರಾದ ಶ್ರೀಯಾನ್‌ ಮತ್ತು ಸುನೀಲ್‌ಕುಮಾರ್ ಬಜಾಲ್‌, ‘ಕೇಂದ್ರ ಸರ್ಕಾರ ತೈಲ ನೀತಿಯಲ್ಲಿ ಬದಲಾವಣೆ ಮಾಡಬೇಕು. ನಿರಂತರ ದರ ಏರಿಕೆ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳಕ್ಕೂ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !