ಶಿಕ್ಷಣದಷ್ಟೇ ಕ್ರೀಡಾ ಚಟುವಟಿಕೆ ಮುಖ್ಯ: ಶಾಸಕ ಶ್ರೀನಿವಾಸಗೌಡ

7
ಕ್ರೀಡಾಕೂಟ ಉದ್ಘಾಟನಾ ಸಮಾರಂಭ

ಶಿಕ್ಷಣದಷ್ಟೇ ಕ್ರೀಡಾ ಚಟುವಟಿಕೆ ಮುಖ್ಯ: ಶಾಸಕ ಶ್ರೀನಿವಾಸಗೌಡ

Published:
Updated:
Deccan Herald

ಕೋಲಾರ: ‘ವಿದ್ಯಾರ್ಥಿಗಳಿಗೆ ಶಿಕ್ಷಣದಷ್ಟೇ ಕ್ರೀಡಾ ಚಟುವಟಿಕೆಗಳು ಮುಖ್ಯ. ಬೆಳೆಯುವ ಮಕ್ಕಳ ಆರೋಗ್ಯಕ್ಕೆ ಕ್ರೀಡೆ ಪೂರಕ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಕ್ರೀಡಾ ಚಟುವಟಿಕೆಗಳು ಸಮಗ್ರ ಶಿಕ್ಷಣದ ಭಾಗ. ಕ್ರೀಡೆಯಿಂದ ಆರೋಗ್ಯ ಸುಧಾರಿಸುತ್ತದೆ. ಓದಿನಲ್ಲಿ ಆಸಕ್ತಿ ಮೂಡಿಸಲು ಕ್ರೀಡಾ ಚಟುವಟಿಕೆಗಳು ಸಹಕಾರಿ’ ಎಂದರು.

‘ಉತ್ತಮ ಕಲಿಕೆಗೆ ಮಕ್ಕಳು ಆರೋಗ್ಯವಂತರಾಗಿರಬೇಕು. ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಒತ್ತಡ ನಿವಾರಣೆಯಾಗುತ್ತದೆ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ಆದ್ದರಿಂದ ಶಿಕ್ಷಕರು ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಈ ಹಿಂದೆ ಕೀಡಾಕೂಟಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಓದಿಗಷ್ಟೇ ಸೀಮಿತಗೊಳಿಸುತ್ತಿದ್ದಾರೆ. ಮಕ್ಕಳು ಹೆಚ್ಚು ಅಂಕ ಗಳಿಸಿದರೆ ಸಾಕು ಎಂಬ ಮನೋಭಾವದಿಂದ ವಿವಿಧ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.

ಭಾಗವಹಿಸುವಿಕೆ ಮುಖ್ಯ: ‘ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಸೋತವರು ಹತಾಶರಾಗದೆ ಪ್ರಯತ್ನ ಮುಂದುವರಿಸಿದರೆ ಭವಿಷ್ಯದಲ್ಲಿ ಗೆಲುವು ಸಾಧಿಸುವುದು ಖಚಿತ. ಶಾಲೆಗಳಲ್ಲಿ ನಿರಂತರವಾಗಿ ಕ್ರೀಡಾ ಚಟುವಟಿಕೆ ನಡೆಸಬೇಕು. ಮಕ್ಕಳ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ಉತ್ತಮ ವೇದಿಕೆ. ಕ್ರೀಡಾಕೂಟವನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು. ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಿ ಶಾಲೆ, ಊರು ಹಾಗೂ ಪೋಷಕರ ಕೀರ್ತಿ ಹೆಚ್ಚಿಸಬೇಕು’ ಎಂದು ಆಶಿಸಿದರು.

ಶಿಕ್ಷಕರ ಕೊರತೆ: ‘ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಕ್ರೀಡಾ ಚಟುವಟಿಕೆ ನಡೆಸಬಹುದು’ ಎಂದು ದೈಹಿಕ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಇ.ಶ್ರೀನಿವಾಸಗೌಡ ಹೇಳಿದರು.

‘ಜಿಲ್ಲೆಯ ಅನೇಕ ಕ್ರೀಡಾಪಟುಗಳು ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಸಾಧಕರಾಗಿದ್ದಾರೆ. ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಚಟುವಟಿಕೆ ಇಲ್ಲವಾಗಿದೆ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೈಹಿಕ ಚಟುವಟಿಕೆಗಳಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೂ ವಯಸ್ಸಿನ ಅಂತರವಿಲ್ಲದೆ ಕ್ರೀಡೆಗಳಲ್ಲಿ ಭಾಗವಹಿಸಬಹುದು. ಕ್ರೀಡಾ ಚಟುವಟಿಕೆಗಳು ಮನಸ್ಸಿಗೆ ಮುದ ನೀಡುತ್ತವೆ’ ಎಂದರು.

ಪಥಸಂಚಲನ: ಜಿಲ್ಲೆಯ 6 ತಾಲ್ಲೂಕುಗಳ ಗ್ರಾಮಾಂತರ ಮತ್ತು ನಗರ ಪ್ರದೇಶದ ಶಾಲಾ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕ್ರೀಡಾಪಟುಗಳು ಆಕರ್ಷಕ ಪಥಸಂಚಲನ ನಡೆಸಿದರು. ರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟುಗಳಾದ ಕೀರ್ತನಾ, ಅಂಕಿತಾ, ಪ್ರಿಯಾ, ರಸಿಕರೆಫೆ, ಹರ್ಷಿತಾ, ನಿಖಿಲಾ, ಸುಪ್ರಿತಾ, ಫ್ರಾಂಕಲೆ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾಯದರ್ಶಿ ಅಶೋಕ್, ಜಿಲ್ಲಾ ಖಾಸಗಿ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಮುನಿಯಪ್ಪ, ಜಿಲ್ಲಾ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಶಿಕ್ಷಕರಾದ ಎಂ.ನಾಗರಾಜ್, ಆರ್.ಶ್ರೀನಿವಾಸ್, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !