ಸಿನಿಮಾರಂಗದಿಂದ ಮಾಡೆಲಿಂಗ್‌ನೆಡೆಗೆ ಹೆಜ್ಜೆ ಹಾಕಿದ ಪ್ರಿಯಾಂಕ

7

ಸಿನಿಮಾರಂಗದಿಂದ ಮಾಡೆಲಿಂಗ್‌ನೆಡೆಗೆ ಹೆಜ್ಜೆ ಹಾಕಿದ ಪ್ರಿಯಾಂಕ

Published:
Updated:

ಎಲ್ಲರೂ ನಟಿಸುವ ಆಸೆಯಿಂದ ಮಾಡೆಲಿಂಗ್ ಜಗತ್ತನ್ನು ಪ್ರವೇಶಿಸಿದರೆ ಈಕೆ ನಟಿಯಾದ ಮೇಲೆ ರೂಪದರ್ಶಿಯಾದವರು.ಈ ಸುಂದರಿಯ ಹೆಸರು ಪ್ರಿಯಾಂಕ ಬಾಲಕೃಷ್ಣ.

ಹಾಲು ಬಿಳುಪು ಬಣ್ಣ, ತುಂಬುಗೆನ್ನೆಯ ಮುದ್ದು ಮೊಗದ ಈ ಚೆಲುವೆ ಬೆಣ್ಣೆದೋಸೆ ನಗರಿ ದಾವಣಗೆರೆಯವರು. ಓದಿನ ಸಲುವಾಗಿ ಬೆಂಗಳೂರಿಗೆ ಬಂದ ಇವರನ್ನು ಸ್ವಾಗತಿಸಿದ್ದು ಸಿನಿಮಾರಂಗ.

ಪತ್ರಿಕೋದ್ಯಮ ಪದವೀಧರೆಯಾಗಿರುವ ಇವರು ಎಂದೂ ತಾನು ನಟಿಯಾಗಬೇಕು, ರ‍್ಯಾಂಪ್‌ ಮೇಲೆ ಮಾರ್ಜಾಲದಂತೆ ಹೆಜ್ಜೆ ಹಾಕಬೇಕು ಎಂದೆಲ್ಲಾ ಅಂದುಕೊಂಡವರೇ ಅಲ್ಲ. ಬಯಸದೇ ಬಂದ ಭಾಗ್ಯವೆಂಬಂತೆ ಬಣ್ಣ ಹಚ್ಚುವ ಅವಕಾಶ ಗಿಟ್ಟಿಸಿಕೊಂಡರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರೂಪಣೆ ಮಾಡುತ್ತಿದ್ದ ಇವರನ್ನು ನೋಡಿದ ‘ಮಹಾನುಭಾವರು’ ಚಿತ್ರತಂಡವು ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿತ್ತು. ನಟನೆಯ ಗಂಧಗಾಳಿ ತಿಳಿಯದ ಆಕೆ ಕ್ಯಾಮೆರಾ ಮುಂದೆ ನಿಂತು ಅಭಿನಯಿಸಿದ್ದು ಅವರನ್ನೂ ಅಚ್ಚರಿಗೊಳಿಸಿತ್ತು.

ತನ್ನ ಬಾಲ್ಯ ಜೀವನ ಹಾಗೂ ಸಿನಿ ಪಯಣದ ಬಗ್ಗೆ ಹೇಳುತ್ತಾ ‘ನನಗೆ ಬಾಲ್ಯದಿಂದಲೂ ಸಿನಿಮಾಗಳಲ್ಲಿ ನಟಿಸಬೇಕು, ಮಾಡೆಲಿಂಗ್ ಮಾಡಬೇಕು ಎಂಬುದೆಲ್ಲಾ ತಲೆಯಲ್ಲಿ ಇರಲೇ ಇಲ್ಲ. ಕಾರಣ ನನ್ನ ಅಪ್ಪ. ಅವರು ತುಂಬಾ ಸ್ಟ್ರಿಕ್ಟ್ ಇದ್ದರು. ಯಾವಾಗಲೂ ಓದಿನ ಮೇಲಷ್ಟೇ ಗಮನ ನೀಡಬೇಕು ಎನ್ನುತ್ತಿದ್ದರು. ಹಾಗಾಗಿ ಇವೆಲ್ಲ ನನ್ನ ತಲೆಯಲ್ಲಿ ಸುಳಿಯಲೂ ಇಲ್ಲ. ಸ್ನಾತಕೋತ್ತರ ಪದವಿ ಓದುವ ಸಮಯದಲ್ಲಿ ಅಂದುಕೊಳ್ಳದೇ ಅವಕಾಶ ಸಿಕ್ಕಿತ್ತು. ಸಿಕ್ಕ ಅವಕಾಶ ಬಿಡುವುದು ಯಾಕೆ ಎಂದುಕೊಂಡು ನಟಿಸಲು ಒಪ್ಪಿಕೊಂಡೆ’ ಎಂದು ನೆನಪನ್ನು ಮೆಲುಕು ಹಾಕುತ್ತಾರೆ.

‘ಮಹಾನುಭಾವರು’ ಸಿನಿಮಾದಲ್ಲಿ ನಟಿಸಿದ ನಂತರ ಈ ಸುಂದರಿ ಮದುವೆಯಾದರು. ಆ ಕಾರಣದಿಂದ ನಟನೆಗೆ ಒಂದಷ್ಟು ಸಮಯ ಬಿಡುವು ನೀಡುತ್ತಾರೆ. ಹೀಗಿದ್ದಾಗ ಮನೆಯಲ್ಲಿ ಸುಮ್ಮನೆ ಕೂರುವ ಬದಲು ಮಾಡೆಲಿಂಗ್ ಮಾಡಬಹುದಲ್ಲ ಎಂದು ಯೋಚಿಸಿದ ಅವರು ಅದರತ್ತ ಒಲವು ತೋರಿದರು. ಗುರುವಿಲ್ಲದೆ ಗುರಿ ಇರಿಸಿಕೊಂಡು ಮುಂದೆ ಸಾಗುವ ಇವರು ಯೂಟ್ಯೂಬ್‌ನಲ್ಲಿ ಮಾಡೆಲಿಂಗ್ ಸಂಬಂಧಿತ ವಿಡಿಯೊಗಳನ್ನು ನೋಡಿ ಆ ಕ್ಷೇತ್ರದ ಆಳ-ಅಗಲವನ್ನು ಕಲಿತರು. ಐಶ್ವರ್ಯಾ ರೈ ಹಾಗೂ ದೀಪಿಕಾ ಪಡುಕೋಣೆ ಅವರನ್ನು ರೋಲ್ ಮಾಡೆಲ್‌ಗಳನ್ನಾಗಿ ತೆಗೆದುಕೊಂಡಿರುವ ಇವರು, ಅವರ ಮಾಡೆಲಿಂಗ್ ವಿಡಿಯೊಗಳನ್ನು ಹೆಚ್ಚು ನೋಡಿ ಕಲಿಯುತ್ತೇನೆ ಎನ್ನುತ್ತಾರೆ.

ಒಮ್ಮೆ ಮಿಸೆಸ್ ಇಂಡಿಯಾ ಗ್ಯಾಲಕ್ಸಿ ಎಂಬ ಮಾಡೆಲಿಂಗ್ ಸ್ಪರ್ಧೆಯ ಬಗ್ಗೆ ಕೇಳಿ ತಿಳಿದುಕೊಂಡ ಇವರು ತಮ್ಮ ಭಾವಚಿತ್ರವನ್ನು ಕಳುಹಿಸಿದರು. ಅಲ್ಲಿ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಕರ್ನಾಟಕದ ಐದು ಮಂದಿಯಲ್ಲಿ ಇವರೂ ಒಬ್ಬರು.

‘ನಾನು ಮಾಡೆಲಿಂಗ್ ಜಗತ್ತು ಪ್ರವೇಶಿಸಿದ್ದೇ ಮಿಸೆಸ್ ಇಂಡಿಯಾ ಗ್ಯಾಲಕ್ಸಿ ಸ್ಪರ್ಧೆಯ ಮೂಲಕ. ಅಲ್ಲಿಯವರೆಗೆ ನಾನು ಯಾವುದೇ ರ್‍ಯಾಂಪ್‌ ವಾಕ್‌ ಮಾಡಿರಲಿಲ್ಲ. ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿದ ಖುಷಿ ಇದೆ. ಮುಂದೆ ಈ ಕ್ಷೇತ್ರದಲ್ಲೇ ಮುಂದುವರಿಯಬೇಕು ಎಂಬ ಆತ್ಮವಿಶ್ವಾಸ ಮೂಡಿದೆ’ ಎಂದು ಖುಷಿಯಿಂದ ಹೇಳುತ್ತಾರೆ.

ಮಾಡೆಲಿಂಗ್ ಕ್ಷೇತ್ರದ ಗಂಧಗಾಳಿ ಗೊತ್ತಿಲ್ಲದ ನಾನು ದೆಹಲಿಗೆ ಹೋಗಿ, ಸ್ಪರ್ಧೆಯಲ್ಲಿ ಭಾಗವಹಿಸಿ, ರ‍್ಯಾಂಪ್‌ ವಾಕ್ ಮಾಡಿ, ಆಯ್ಕೆ ಆಗಿದ್ದು ನಿಜಕ್ಕೂ ನನಗೆ ಮರೆಯಲಾಗದ ಸಂಗತಿ, ನನ್ನ ಜೀವನದಲ್ಲಿ ನನಗೆ ತುಂಬಾ ಖುಷಿ ಕೊಟ್ಟ ಕ್ಷಣಗಳು ಅವು’ ಎಂದು ಸಂತಸದಿಂದ ಉಲಿಯುತ್ತಾರೆ.

ಮಾಡೆಲಿಂಗ್ ಜಗತ್ತಿಗೆ ಪ್ರವೇಶಿಸಲು ಗಂಡನ ಸಂಪೂರ್ಣ ಸಹಕಾರವಿದ್ದು, ಇವರ ಬಟ್ಟೆ, ಮೇಕಪ್ ಎಲ್ಲದ್ದಕ್ಕೂ ಗಂಡನೇ ಸಲಹೆ ನೀಡುತ್ತಾರಂತೆ.

ಡಯೆಟ್ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಪಾಲಿಸುವ ಇವರು ಅನ್ನದಿಂದ ತಯಾರಿಸಿದ ತಿನಿಸುಗಳನ್ನು ತಿನ್ನುವುದಿಲ್ಲ. ಚಪಾತಿಯನ್ನು ಹೆಚ್ಚು ತಿನ್ನುವ ಇವರ ಆಹಾರಕ್ರಮದಲ್ಲಿ ಹಣ್ಣು-ತರಕಾರಿಗೂ ಅಗ್ರಸ್ಥಾನವಿದೆ. ಮನೆಯಲ್ಲಿಯೇ ಜಿಮ್ ಇದ್ದು ಪ್ರತಿದಿನ ಒಂದಷ್ಟು ಗಂಟೆ ದೇಹ ದಂಡಿಸುತ್ತಾರೆ.

‘ಮಾಡೆಲಿಂಗ್‌ನಲ್ಲಿ ಆತ್ಮವಿಶ್ವಾಸ ತುಂಬಾನೇ ಮುಖ್ಯ. ನಮ್ಮ ನಡಿಗೆ ಹಾಗೂ ನಗು ಈ ಎರಡೂ ನಮ್ಮ ಆತ್ಮವಿಶ್ವಾಸ ಪ್ರತೀಕ. ಈ ಎರಡೇ ನಮ್ಮನ್ನು ಸ್ಪರ್ಧೆಯಲ್ಲಿ ಗೆಲ್ಲಿಸುವುದು’ ಎಂದು ಮಾಡೆಲಿಂಗ್ ಜಗತ್ತಿನ ಗುಟ್ಟನ್ನು ಹೊರಹಾಕುತ್ತಾರೆ ಈ ದುಂಡು ಮೊಗದ ಚೆಲುವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !